ಕೊಲ್ಕತ್ತಾ/ಗುವಾಹಟಿ: ತೃಣಮೂಲ ಕಾಂಗ್ರೆಸ್ (TMC) ಪಕ್ಷಕ್ಕೆ ರಾಜೀನಾಮೆ ನೀಡಿ ರಾಜ್ಯಸಭಾ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ ಮಾಜಿ ಸಂಸದೆ ಸುಶ್ಮಿತಾ ದೇವ್ ಇಂದು ಬುಧವಾರ ತಮ್ಮ ಮೌನ ಮುರಿದು, ತಮ್ಮ ನಿರ್ಧಾರವು ದೀರ್ಘ ರಾಜಕೀಯ ಪಯಣ ಮತ್ತು ವೈಯಕ್ತಿಕ ಆತ್ಮಾವಲೋಕನದ ಕಾರಣದಿಂದ ಎಂದು ಹೇಳಿದ್ದಾರೆ.
ರಾಜೀನಾಮೆಯ ನಂತರ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮ್ಮ ನಿರ್ಧಾರದ ಹಿಂದೆ ಹಲವು ಕಾರಣಗಳಿವೆ ಎಂದು ಹೇಳಿದರೂ, ರಾಜಕೀಯದಲ್ಲಿ ಎಲ್ಲವನ್ನೂ ಬಹಿರಂಗವಾಗಿ ವಿವರಿಸುವ ಅಗತ್ಯವಿಲ್ಲ ಎಂದು ಸೂಚಿಸಿದರು.
ಈ ನಿರ್ಧಾರಕ್ಕೆ ಕಾರಣವಾದದ್ದು ಬಹಳ ದೀರ್ಘ ಕಥೆ. ರಾಜಕೀಯದಲ್ಲಿ ಪ್ರತಿಯೊಂದು ವಿಷಯವನ್ನೂ ಬಹಿರಂಗಪಡಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ, ನಾನು ಎರಡು ದೋಣಿ ಮೇಲೆ ಕಾಲಿಟ್ಟು ಪ್ರಯಾಣಿಸಲು ಬಯಸುವುದಿಲ್ಲ ಎಂದು ಹೇಳಿದರು.
ರಾಜೀನಾಮೆಯ ನಂತರ ತಾವು ರಾಜಕೀಯವಾಗಿ ಸ್ವತಂತ್ರರಾಗಿದ್ದೇನೆ ಎಂದು ಸುಷ್ಮಿತಾ ದೇವ್ ಹೇಳಿದರು.
ಇಂದು ನಾನು ಸ್ವತಂತ್ರ ಮಹಿಳೆ. ನಾನು ಬಹಳ ವರ್ಷಗಳಿಂದ ಹಿಮಂತ ಬಿಸ್ವ ಶರ್ಮ ಅವರನ್ನು ತಿಳಿದಿದ್ದೇನೆ. ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದ್ದೇನೆ ಎಂದು ಹೇಳಿದರು.
ಅವರು ಈ ಹೇಳಿಕೆ ನೀಡಿದ್ದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರನ್ನು ಭೇಟಿಯಾದ ಕೆಲವೇ ಹೊತ್ತಿನ ಬಳಿಕ. ಇದರಿಂದ ಅವರು ಬಿಜೆಪಿಗೆ ಸೇರುವ ಸಾಧ್ಯತೆಗಳ ಬಗ್ಗೆ ಊಹಾಪೋಹಗಳು ಹೆಚ್ಚಿವೆ. ಆದರೆ ತಮ್ಮ ಮುಂದಿನ ರಾಜಕೀಯ ಹೆಜ್ಜೆಯ ಕುರಿತು ಅವರು ಯಾವುದೇ ಸ್ಪಷ್ಟ ಸೂಚನೆ ನೀಡಲಿಲ್ಲ.
ಪಕ್ಷದೊಳಗೆ ಯಾರು ಏನು ಮಾಡುತ್ತಿದ್ದಾರೆ ಎಂಬ ಮಾಹಿತಿ ನನಗಿಲ್ಲ. ನಾನು ಅಸ್ಸಾಂನವಳಾಗಿರುವುದರಿಂದ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ನೇರವಾಗಿ ತೊಡಗಿಸಿಕೊಂಡಿಲ್ಲ. ನಾನು ಮಮತಾ ಬ್ಯಾನರ್ಜಿ ಅವರ ವಿರುದ್ಧ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
ತಮ್ಮ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುವ ಮೊದಲು ಸ್ವಲ್ಪ ಸಮಯ ಬೇಕಾಗಿದೆ ಎಂದು ಸುಷ್ಮಿತಾ ದೇವ್ ಹೇಳಿದ್ದಾರೆ.
ನನ್ನ ವೈಯಕ್ತಿಕ ಹಾಗೂ ರಾಜಕೀಯ ಕಾರಣಗಳಿಗಾಗಿ ನಾನು ರಾಜೀನಾಮೆ ನೀಡಿದ್ದೇನೆ. ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಚಿಂತನೆಗಳನ್ನು ಬದಲಾಯಿಸಿಕೊಳ್ಳುವ ಹಕ್ಕಿದೆ. ಸದ್ಯಕ್ಕೆ ನಾನು ಇದಕ್ಕಿಂತ ಹೆಚ್ಚು ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.
ಅಸ್ಸಾಂ ನನ್ನ ರಾಜ್ಯ. ಮುಂದೇನು ಮಾಡಬೇಕು ಎಂಬುದರ ಬಗ್ಗೆ ನಾನು ಯೋಚಿಸಲು ಸ್ವಲ್ಪ ಸಮಯ ಬೇಕಾಗಿದೆ ಎಂದರು.
ಸುಷ್ಮಿತಾ ದೇವ್ ಅವರ ರಾಜೀನಾಮೆ ತೃಣಮೂಲ ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಪಕ್ಷದೊಳಗಿನ ಅಸಮಾಧಾನದ ನಡುವೆ, ವಾರದೊಳಗೆ ರಾಜೀನಾಮೆ ನೀಡಿದ ಎರಡನೇ ಸಂಸದರಾಗಿದ್ದಾರೆ. ಇದಕ್ಕೂ ಮೊದಲು ಸುಖೇಂದು ಶೇಖರ್ ರೇ ಪಕ್ಷ ತೊರೆದಿದ್ದರು.
ಅವರು ಇಂದು ಮಧ್ಯಾಹ್ನ 1 ಗಂಟೆಗೆ ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭಾ ಸಭಾಪತಿ ಸಿ ಪಿ ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ. ಪಕ್ಷದ ಕೆಲವು ಭಿನ್ನಮತೀಯ ನಾಯಕರು ಹಲವಾರು ಟಿಎಂಸಿ ಸಂಸದರು ಪಕ್ಷದಿಂದ ದೂರವಾಗುತ್ತಿದ್ದಾರೆ ಎಂದು ಹೇಳುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.
ಸುಷ್ಮಿತಾ ದೇವ್ ಅವರ ರಾಜೀನಾಮೆಗೆ ಪ್ರತಿಕ್ರಿಯಿಸಿದ ಹಿರಿಯ ಟಿಎಂಸಿ ನಾಯಕ ಸೌಗತಾ ರಾಯ್, ಇದು ಪಕ್ಷಕ್ಕೆ ಆಘಾತ ಉಂಟುಮಾಡಿದ ಬೆಳವಣಿಗೆ ಎಂದು ಹೇಳಿದ್ದಾರೆ.