ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಮತ್ತು ಅವರ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಶನಿವಾರ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಅತ್ತಿಂಗಲ್‌ನ ಸೋನಿ ಥಾಮಸ್ ಎಂದು ಗುರುತಿಸಲಾಗಿದ್ದು, ಫೋನ್ ಮಾಡಿ, ಸಿಎಂ ಕುಟುಂಬ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದನು.
ಪೊಲೀಸರ ಪ್ರಕಾರ, ಶುಕ್ರವಾರ ಸಂಜೆ 6.50ಕ್ಕೆ ತಿರುವನಂತಪುರಂ ನಗರ ಜಿಲ್ಲಾ ಪೊಲೀಸ್ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರ(ಡಿಪಿಸಿಸಿ)ಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬವನ್ನು ಕೊಲ್ಲುವುದಾಗಿ ಹೇಳಿಕೊಂಡಿದ್ದಾನೆ.
ಕಾರಣ ಕೇಳಿದಾಗ, ಕರೆ ಮಾಡಿದ ವ್ಯಕ್ತಿ, ಸಿಎಂ ಸತೀಶನ್ ತನಗೆ ಇಷ್ಟವಿಲ್ಲ ಎಂದು ಹೇಳಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿ ಸಂಜೆ 6.53 ಕ್ಕೆ ಮತ್ತೆ ಎರಡನೇ ಬಾರಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರೆಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ನಂತರ, ಮುಖ್ಯಮಂತ್ರಿಗೆ ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆಯೇ ಎಂದು ಆರೋಪಿ ಕೇಳಿದ್ದಾನೆ.
ತಕ್ಷಣ, ಪ್ರಕರಣ ದಾಖಲಿಸಿಕೊಂಡ ಕಂಟೋನ್ಮೆಂಟ್ ಪೊಲೀಸರು, ಕರೆ ಮಾಡಿದ ಫೋನ್ ಸಂಖ್ಯೆಯನ್ನು ಪತ್ತೆಹಚ್ಚಿ, ಆರೋಪಿಯನ್ನು ಬಂಧಿಸಿದ್ದಾರೆ.
ಇಂದು ಬೆಳಗ್ಗೆ, ಪೊಲೀಸರು ಅತ್ತಿಂಗಲ್‌ನಲ್ಲಿ ಆರೋಪಿ ಥಾಮಸ್ ನನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಕರೆಗಳನ್ನು ಮಾಡುವಾಗ ಮದ್ಯದ ಅಮಲಿನಲ್ಲಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.