ಕೋಲ್ಕತ್ತಾ: ಕೋಲ್ಕತ್ತಾ ಪೊಲೀಸರು ಮತ್ತು ಪಶ್ಚಿಮ ಮೇದಿನಿಪುರ ಪೊಲೀಸರ ಜಂಟಿ ತಂಡ ಶನಿವಾರ ಬೆಳ್ಳಂ ಬೆಳಿಗ್ಗೆ ಕೇಂದ್ರ ಪಡೆಗಳೊಂದಿಗೆ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸದ ಮೇಲೆ ರಾತ್ರಿಯಿಡೀ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಕಾರ್ಯಾಚರಣೆಯು ಇಂದು ಬೆಳಗಿನ ಜಾವ 3 ಗಂಟೆಯ ನಂತರ ಪ್ರಾರಂಭವಾಯಿತು ಮತ್ತು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಶೋಧ ಮುಂದುವರೆಯಿತು. ಇದು ಟಿಎಂಸಿಯಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಠಾತ್ ಪೊಲೀಸ್ ಕ್ರಮದಿಂದ ಆಕ್ರೋಶಗೊಂಡ ಮಾಜಿ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಮಾಹಿತಿ ಪಡೆದ ತಕ್ಷಣ ಅಭಿಷೇಕ್ ಅವರ ನಿವಾಸಕ್ಕೆ ಧಾವಿಸಿದರು.
ಪೊಲೀಸರ ಪ್ರಕಾರ, ಅಧಿಕಾರಿಗಳು, ಅಭಿಷೇಕ್ ಬ್ಯಾನರ್ಜಿ ಅವರ ಕಾಲಿಘಾಟ್ ನಿವಾಸದ ಬಾಗಿಲುಗಳನ್ನು ಪದೇ ಪದೇ ತಟ್ಟಿದರು. ಆದರೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಹೀಗಾಗಿ ಪೊಲೀಸ್ ಸಿಬ್ಬಂದಿ ಬೀಗವನ್ನು ಒಡೆದು ಶೋಧ ಕಾರ್ಯಾಚರಣೆ ನಡೆಸಲು ಮನೆ ಪ್ರವೇಶಿಸಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ.
ನಂತರ ಮನೆಯಿಂದ ಹೊರಬಂದ ಅಭಿಷೇಕ್ ಬ್ಯಾನರ್ಜಿ, ಪೊಲೀಸ್ ಸಿಬ್ಬಂದಿ ಬೀಗವನ್ನು ಒಡೆದು ಇಡೀ ಆವರಣವನ್ನು ಶೋಧಿಸಿದ್ದಾರೆ ಮತ್ತು ಬಲವಂತವಾಗಿ ಮನೆ ಪ್ರವೇಶಿಸಿದ್ದಾರೆ ಎಂದು ಆರೋಪಿಸಿದರು.
"ಅವರು ಬೀಗವನ್ನು ಒಡೆದು ಇಡೀ ಮನೆಯನ್ನು ಶೋಧಿಸಿದ್ದಾರೆ" ಎಂದು ಬ್ಯಾನರ್ಜಿ ಸುದ್ದಿಗಾರರಿಗೆ ತಿಳಿಸಿದರು.
ಕಾರ್ಯಾಚರಣೆಯ ಉದ್ದಕ್ಕೂ ಕಾಲಿಘಾಟ್‌ನ ಪಟುವಾಪಾರ ಪ್ರದೇಶದ ಆವರಣದಲ್ಲಿ ಭಾರೀ ಕಾವಲು ಇರಿಸಲಾಗಿತ್ತು. ಕೇಂದ್ರ ಪಡೆಗಳು ನೆರೆಹೊರೆಯನ್ನು ಸುತ್ತುವರೆದಿದ್ದವು. ಕಾಲಿಘಾಟ್ ಮತ್ತು ಭಬಾನಿಪುರ ಪೊಲೀಸ್ ಠಾಣೆಗಳ ಸಿಬ್ಬಂದಿ ಶೋಧ ತಂಡಕ್ಕೆ ಸಹಾಯ ಮಾಡಿದರು.
ಪಶ್ಚಿಮ ಮೇದಿನಿಪುರ ಜಿಲ್ಲೆಯ ಸಲ್ಬೋನಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಆರ್ಥಿಕ ವಂಚನೆ ಪ್ರಕರಣದ ತನಿಖೆಯ ಭಾಗವಾಗಿ ಈ ಶೋಧ ಕಾರ್ಯ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆದಾಗ್ಯೂ, ಆರೋಪಗಳ ಸ್ವರೂಪ ಅಥವಾ ಹುಡುಕಲಾಗುತ್ತಿರುವ ನಿರ್ದಿಷ್ಟ ಸಾಕ್ಷ್ಯಗಳ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ.