ನವದೆಹಲಿ: ಬಾಂಗ್ಲಾದೇಶದ ಪ್ರಧಾನಮಂತ್ರಿ ಸಲಹೆಗಾರರೊಬ್ಬರಿಗೆ ಸಂಬಂಧಿಸಿದ ಘಟನೆಯ ಹಿನ್ನೆಲೆಯಲ್ಲಿ, ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ರಾಜತಾಂತ್ರಿಕ ವಿವಾದ ಉಂಟಾಗಿದೆ. ಬಾಂಗ್ಲಾದೇಶ ಸರ್ಕಾರವು ಭಾರತ ಉಪ ಹೈಕಮಿಷನರ್ ಪವನ್ ಭಡೆ ಅವರನ್ನು ಕರೆಸಿ ತನ್ನ ಆಕ್ಷೇಪ ಹೊರಹಾಕಿದೆ.
ಬಾಂಗ್ಲಾದೇಶದ ಪ್ರಧಾನಮಂತ್ರಿ ತಾರಿಕ್ ರೆಹಮಾನ್ ಅವರ ನೀತಿ ಮತ್ತು ಕಾರ್ಯತಂತ್ರ ಸಲಹೆಗಾರ ಜಾಹೆದ್ ಉರ್ ರಹಮಾನ್ ಅವರನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ‘ಪರಿಶೀಲನೆ’ಗಾಗಿ ತಡೆದಿದ್ದರು ಎಂದು ತಿಳಿದುಬಂದಿದೆ. ಅವರ ಹಿಂದಿನ ಕೆಲವು ಭಾರತ ವಿರೋಧಿ ಸಾರ್ವಜನಿಕ ಹೇಳಿಕೆಗಳ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆದಿರಬಹುದು ಎನ್ನಲಾಗಿದೆ.
ನಂತರ ಅಧಿಕಾರಿಗಳು ಅವರಿಗೆ ದೇಶ ಪ್ರವೇಶಿಸಲು ‘ಒಂದು ಬಾರಿಯ ವಿನಾಯಿತಿ’ ನೀಡಿದರೂ, ಅಷ್ಟರೊಳಗೆ ಅವರು ತಮ್ಮ ಭೇಟಿಯನ್ನು ರದ್ದುಪಡಿಸಿ ಕೊಲಂಬೊ ಮಾರ್ಗವಾಗಿ ರಾತ್ರಿ ವಿಮಾನದಲ್ಲಿ ಢಾಕಾಗೆ ಮರಳಲು ನಿರ್ಧರಿಸಿದ್ದರು.
ಈ ಘಟನೆ ಢಾಕಾದಲ್ಲಿ ತೀವ್ರ ಪ್ರತಿಕ್ರಿಯೆ ಹುಟ್ಟುಹಾಕಿದ್ದು, ಬಾಂಗ್ಲಾದೇಶದ ವಿದೇಶಾಂಗ ಸಚಿವ ಖಲಿಲೂರ್ ರಹಮಾನ್ ಇದನ್ನು ಅನಿರೀಕ್ಷಿತ ಹಾಗೂ ದುರದೃಷ್ಟಕರ ಘಟನೆ ಎಂದು ಬಣ್ಣಿಸಿದ್ದಾರೆ.
ಇದು ಅನಿರೀಕ್ಷಿತ ಹಾಗೂ ದುರದೃಷ್ಟಕರ ಘಟನೆ ಎಂದು ಖಲೀಲುರ್ ರಹಮಾನ್ ಹೇಳಿದ್ದು, ಈ ವಿಚಾರದಲ್ಲಿ ಬಾಂಗ್ಲಾದೇಶ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದಿದ್ದಾರೆ.
ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯವು ಭಾರತೀಯ ಉಪ ಹೈಕಮಿಷನರ್ ಪವನ್ ಭಡೆ ಅವರಿಗೆ ಅಧಿಕೃತ ಪ್ರತಿಭಟನಾ ಪತ್ರವನ್ನೂ ಹಸ್ತಾಂತರಿಸಿದೆ. ಸಚಿವಾಲಯದ ವಕ್ತಾರ ಶಹೀದುಲ್ ಕರೀಂ ಅವರ ಪ್ರಕಾರ, ಪವನ್ ಭಡೆ ಮಧ್ಯಾಹ್ನ ಸಚಿವಾಲಯಕ್ಕೆ ಆಗಮಿಸಿದ್ದು, ಘಟನೆಯ ಬಗ್ಗೆ ಬಾಂಗ್ಲಾದೇಶದ ಕಳವಳವನ್ನು ಅವರಿಗೆ ಅಧಿಕೃತವಾಗಿ ತಿಳಿಸಲಾಗಿದೆ.
ಜಾಹೆದ್ ಉರ್ ರಹಮಾನ್ ನಿನ್ನೆ ಮತ್ತು ಇಂದು ಭಾರತದ ವಿದೇಶಾಂಗ ಸಚಿವಾಲಯ ಆಯೋಜಿಸಿದ್ದ Indian Ocean Rim Association (IORA) ಹಿರಿಯ ಅಧಿಕಾರಿಗಳ ಸಮಿತಿಯ 28ನೇ ಸಭೆಯಲ್ಲಿ ಭಾಗವಹಿಸಲು ಬಾಂಗ್ಲಾದೇಶ ನಿಯೋಗದ ನೇತೃತ್ವ ವಹಿಸಿ ದೆಹಲಿಗೆ ಬಂದಿದ್ದರು.
ರಾಜತಾಂತ್ರಿಕ ಮೂಲಗಳ ಪ್ರಕಾರ, ಜಾಹೆದ್ ಅವರ ಭಾಗವಹಿಸುವಿಕೆ ಬಗ್ಗೆ ಬಾಂಗ್ಲಾದೇಶ ಸರ್ಕಾರ ಮುಂಚಿತವಾಗಿಯೇ ಭಾರತಕ್ಕೆ ಮಾಹಿತಿ ನೀಡಿತ್ತು. ಆದರೆ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಸುಮಾರು ಎರಡು ಗಂಟೆಗಳ ಕಾಲ ಅವರನ್ನು ತಡೆದು ಪರಿಶೀಲನೆ ನಡೆಸಿದರು.
ಅಂತಿಮವಾಗಿ ಅವರಿಗೆ ಒಂದು ಬಾರಿಯ ವಿನಾಯಿತಿ ನೀಡಿ ಪ್ರವೇಶಕ್ಕೆ ಅನುಮತಿ ನೀಡಲಾಯಿತಾದರೂ, ಅವರು ಭೇಟಿಯನ್ನು ಮುಂದುವರಿಸದೆ ಹಿಂತಿರುಗಲು ನಿರ್ಧರಿಸಿದರು. ಅವರು ರಾಜತಾಂತ್ರಿಕ ಪಾಸ್‌ಪೋರ್ಟ್ ಬದಲಿಗೆ ಸಾಮಾನ್ಯ ಬಾಂಗ್ಲಾದೇಶಿ ಪಾಸ್‌ಪೋರ್ಟ್‌ನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಬಾಂಗ್ಲಾದೇಶದ ರಾಜಕೀಯ ಬದಲಾವಣೆಗಳು ಹಾಗೂ ವಿವಿಧ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳ ನಡುವೆಯೂ, ಭಾರತ–ಬಾಂಗ್ಲಾದೇಶ ಸಂಬಂಧಗಳನ್ನು ಬಲಪಡಿಸುವ ಪ್ರಯತ್ನಗಳು ನಡೆಯುತ್ತಿರುವ ಸೂಕ್ಷ್ಮ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.