ಯುಪಿಐ ಪಾವತಿ ಸೇವೆ 
ದೇಶ

'ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆ ಹಲವು ವರ್ಷಗಳಷ್ಟು ಮುಂದಿದೆ': ಸ್ಲೋವೇನಿಯಾದ ಪ್ರವಾಸಿ ಮಹಿಳೆ ಮೆಚ್ಚುಗೆ

ಪ್ರವಾಸದ ವೇಳೆ ಭಾರತಕ್ಕೆ ಭೇಟಿ ನೀಡಿದ್ದ Julija, ಭಾರತದ ಪಾವತಿ ವ್ಯವಸ್ಥೆ ಬಹುತೇಕ ದೇಶಗಳಿಗಿಂತ ಹಲವು ವರ್ಷಗಳಷ್ಟು ಮುಂದಿದ್ದು, ತಮ್ಮ ಪ್ರವಾಸದ ವೇಳೆ ಬಹುತೇಕ ಎಲ್ಲೆಡೆ ನಗದು ಹಣ ಬಳಸುವ ಅಗತ್ಯವೇ ಇರಲಿಲ್ಲ.

ನವದೆಹಲಿ: ಸ್ಲೋವೇನಿಯಾದ ಪ್ರವಾಸಿ ಮಹಿಳೆಯೊಬ್ಬರು ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಶ್ಲಾಘಿಸಿ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದು, ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ತಮ್ಮ ಗ್ಯಾಪ್ ಇಯರ್‌ ಪ್ರವಾಸದ ವೇಳೆ ಭಾರತಕ್ಕೆ ಭೇಟಿ ನೀಡಿದ್ದ Julija, ಭಾರತದ ಪಾವತಿ ವ್ಯವಸ್ಥೆ ಬಹುತೇಕ ದೇಶಗಳಿಗಿಂತ ಹಲವು ವರ್ಷಗಳಷ್ಟು ಮುಂದಿದ್ದು, ತಮ್ಮ ಪ್ರವಾಸದ ವೇಳೆ ಬಹುತೇಕ ಎಲ್ಲೆಡೆ ನಗದು ಹಣ ಬಳಸುವ ಅಗತ್ಯವೇ ಇರಲಿಲ್ಲ ಎಂದು ಹೇಳಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ತಮ್ಮ ಪೋಸ್ಟ್‌ನಲ್ಲಿ ಅವರು, "ಭಾರತದಲ್ಲಿ ನನ್ನನ್ನು ಅಚ್ಚರಿಗೊಳಿಸಿದ ಪ್ರಮುಖ ವಿಷಯಗಳಲ್ಲಿ ಒಂದೆಂದರೆ, ನನಗೆ ನಗದು ಹಣದ ಅಗತ್ಯ ಬಹಳ ಕಡಿಮೆ ಇತ್ತು. ನಾನು ಭೇಟಿ ನೀಡಿದ ಬಹುತೇಕ ಎಲ್ಲೆಡೆ ಸಣ್ಣ ಚಹಾ ಅಂಗಡಿ, ಸ್ಥಳೀಯ ಹೋಟೆಲ್ ಅಥವಾ ರಸ್ತೆಬದಿಯ ಅಂಗಡಿಯಾಗಲಿ ಜನರು ಕೇವಲ ಒಂದು ಕ್ಯೂಆರ್ ಕೋಡ್ ತೋರಿಸುತ್ತಿದ್ದರು" ಎಂದು ಬರೆದುಕೊಂಡಿದ್ದಾರೆ.

ಭಾರತದ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಅನ್ನು ಅತ್ಯಂತ ಅನುಕೂಲಕರ ಪಾವತಿ ವ್ಯವಸ್ಥೆಗಳಲ್ಲಿ ಒಂದೆಂದು ಬಣ್ಣಿಸಿದ ಅವರು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಕ್ಷಣಾರ್ಧದಲ್ಲಿ ಹಣ ಪಾವತಿಸುವ ವ್ಯವಸ್ಥೆ ನಿಜಕ್ಕೂ ವರದಾನವಾಗಿದೆ ಎಂದು ಹೇಳಿದ್ದಾರೆ.

"ಇದು ಭಾರತದ ತ್ವರಿತ ಪಾವತಿ ವ್ಯವಸ್ಥೆಯಾದ ಯುಪಿಐ ಕಾರಣದಿಂದ ಸಾಧ್ಯವಾಗಿದೆ. ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸುವ ಬದಲು, ಜನರು ಕೇವಲ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುತ್ತಾರೆ ಮತ್ತು ಕೆಲವೇ ಸೆಕೆಂಡುಗಳಲ್ಲಿ ಹಣ ವರ್ಗಾವಣೆಯಾಗುತ್ತದೆ. ಪ್ರವಾಸದ ವೇಳೆ ನಾನು ಕಂಡ ಅತ್ಯಂತ ಅನುಕೂಲಕರ ಪಾವತಿ ವ್ಯವಸ್ಥೆಗಳಲ್ಲಿ ಇದು ಒಂದು" ಎಂದು ಅವರು ಹೇಳಿದ್ದಾರೆ.

ನಗದು ಇದ್ದರೆ ಉತ್ತಮ

ಅಂತೆಯೇ ಭಾರತಕ್ಕೆ ಬರುವ ಪ್ರವಾಸಿಗರು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಜೊತೆಗೆ ಸ್ವಲ್ಪ ನಗದು ಹಣವನ್ನೂ ಇಟ್ಟುಕೊಳ್ಳುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ. "ಭಾರತ ಡಿಜಿಟಲ್ ವಹಿವಾಟಿನಲ್ಲಿ ಅತ್ಯಂತ ಮುಂದುವರಿದ ದೇಶ. ಆದರೂ ಸಣ್ಣ ಪಟ್ಟಣಗಳು, ದೂರದ ಪ್ರದೇಶಗಳು ಅಥವಾ ಇಂಟರ್ನೆಟ್ ಸಂಪರ್ಕದಲ್ಲಿ ಸಮಸ್ಯೆ ಉಂಟಾದಾಗ ಪರ್ಯಾಯ ಪಾವತಿ ವ್ಯವಸ್ಥೆ ಇದ್ದರೆ ತೊಂದರೆ ತಪ್ಪುತ್ತದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪೋಸ್ಟ್ ವೈರಲ್, ವ್ಯಾಪಕ ಪ್ರತಿಕ್ರಿಯೆ

ಈ ಪೋಸ್ಟ್ ವೈರಲ್ ಆದ ಬಳಿಕ, ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಯುಪಿಐ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಹೊಗಳಿದ್ದಾರೆ. ಕೆಲವರು ಇಂಟರ್ನೆಟ್ ಇಲ್ಲದೆಯೂ ಯುಪಿಐ ಬಳಸಬಹುದೆಂದು ಜೂಲಿಯಾಗೆ ಮಾಹಿತಿ ನೀಡಿದ್ದಾರೆ. ಒಬ್ಬ ಬಳಕೆದಾರ, "ಪಾಶ್ಚಾತ್ಯ ದೇಶಗಳಿಗೆ ಹೋದರೆ ನನಗೆ ಎರಡು ವಿಷಯಗಳ ಭಯ — 1) ಟಾಯ್ಲೆಟ್ ಪೇಪರ್, 2) ಯುಪಿಐ ಇಲ್ಲದಿರುವುದು!" ಎಂದು ಪ್ರತಿಕ್ರಿಯಿಸಿದ್ದಾರೆ.

ಮತ್ತೊಬ್ಬರು, "ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಮೂಲಕ ವಹಿವಾಟು ಮಾಡಬಹುದು" ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, "ಯುಪಿಐಯ ಅತ್ಯಂತ ವಿಶೇಷ ಸಂಗತಿಯೆಂದರೆ, ಹಣ ನೇರವಾಗಿ ಬ್ಯಾಂಕ್ ಖಾತೆಗೆ ತಕ್ಷಣ ಜಮೆಯಾಗುತ್ತದೆ. ಪಾವತಿ ಬಂದ ಕೂಡಲೇ ಅದನ್ನು ಬಳಸಬಹುದು" ಎಂದು ಬರೆದಿದ್ದಾರೆ.

ಯುಪಿಐ ಯಶೋಗಾಥೆ

ಅಂದಹಾಗೆ 2016ರಲ್ಲಿ National Payments Corporation of India (ಎನ್‌ಪಿಸಿಐ) ಯುಪಿಐ ವ್ಯವಸ್ಥೆಯನ್ನು ಆರಂಭಿಸಿತು. ಇದು ಬ್ಯಾಂಕ್ ಖಾತೆಗೆ ಸಂಪರ್ಕಿತ ಮೊಬೈಲ್ ಆ್ಯಪ್‌ಗಳ ಮೂಲಕ 24x7 ತ್ವರಿತ ಹಣ ವರ್ಗಾವಣೆಗೆ ಅವಕಾಶ ನೀಡುತ್ತದೆ.

2026ರ ಜನವರಿಯಲ್ಲಿ ಯುಪಿಐ ಮೂಲಕ 21.70 ಬಿಲಿಯನ್ ವಹಿವಾಟುಗಳು ನಡೆದಿದ್ದು, ಅವುಗಳ ಒಟ್ಟು ಮೌಲ್ಯ 28.33 ಲಕ್ಷ ಕೋಟಿ ರೂಪಾಯಿಗೂ ಅಧಿಕವಾಗಿತ್ತು. ಇದು ಯುಪಿಐ ಭಾರತದ ದೈನಂದಿನ ವಾಣಿಜ್ಯ ಚಟುವಟಿಕೆಗಳಲ್ಲಿ ಎಷ್ಟು ಆಳವಾಗಿ ಬೆರೆತಿದೆ ಎಂಬುದನ್ನು ತೋರಿಸುತ್ತದೆ.

2025ರ ಜೂನ್‌ನಲ್ಲಿ ಬಿಡುಗಡೆಗೊಂಡ ವರದಿಯಲ್ಲಿ International Monetary Fund, ಯುಪಿಐಯನ್ನು ವಹಿವಾಟಿನ ಪ್ರಮಾಣದ ಆಧಾರದ ಮೇಲೆ ವಿಶ್ವದ ಅತಿದೊಡ್ಡ ಚಿಲ್ಲರೆ ತ್ವರಿತ ಪಾವತಿ ವ್ಯವಸ್ಥೆ ಎಂದು ಗುರುತಿಸಿತ್ತು. ಅದೇ ರೀತಿ, 2024ರ ACI Worldwide ವರದಿ Prime Time for Real Time ಪ್ರಕಾರ, ಜಾಗತಿಕ ಮಟ್ಟದಲ್ಲಿ ನಡೆಯುವ ರಿಯಲ್-ಟೈಮ್ ಪಾವತಿ ವಹಿವಾಟುಗಳ ಪೈಕಿ ಸುಮಾರು 49 ಪ್ರತಿಶತ ಯುಪಿಐ ಮೂಲಕವೇ ನಡೆಯುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಿ 7 ಸಭೆ: ಸಂಬಂಧಗಳಲ್ಲಿನ ಬಿಕ್ಕಟ್ಟಿನ ನಡುವೆ ಪ್ರಧಾನಿ ಮೋದಿ-ಡೊನಾಲ್ಡ್ ಟ್ರಂಪ್ ಪರಸ್ಪರ ಶುಭಾಶಯ ವಿನಿಮಯ; ಜೂ.17 ರಂದು ದ್ವಿಪಕ್ಷೀಯ ಸಭೆ

'ನಾನಿಲ್ಲದಿದ್ದರೆ ಇಸ್ರೇಲ್ ಇರುತ್ತಿರಲಿಲ್ಲ': ನೆತನ್ಯಾಹು ವಿರುದ್ಧ ಟ್ರಂಪ್ ಅಸಮಾಧಾನ; 'ಅವರಿಗೆ' ಸಾಧ್ಯವಾಗದಿದ್ದರೆ ಹಿಜ್ಬೊಲ್ಲಾನ ಸಿರಿಯಾ ನೋಡಿಕೊಳ್ಳುತ್ತೆ; Video

ಶ್ವೇತಭವನದ UFC ಕಾರ್ಯಕ್ರಮದ ಮೇಲೆ ಯೋಜಿತ ದಾಳಿ ಸಂಚು ವಿಫಲ, ತಪ್ಪಿದ ಭಾರಿ ಅನಾಹುತ: ಐವರ ಬಂಧನ

RSS ಇಂತಹ ದಬ್ಬಾಳಿಕೆಗೆ ತಲೆ ಬಾಗಲ್ಲ: ನೋಂದಣಿ ಕಡ್ಡಾಯ ಕಾನೂನು ಎಲ್ಲಿದೆ; ಪ್ರಿಯಾಂಕ್ ಖರ್ಗೆಗೆ VHP ತಿರುಗೇಟು!

ರಾಜಸ್ಥಾನದಲ್ಲಿ ಲಂಚಕ್ಕೆ ಕೈಯೊಡ್ಡಿ ರಾಜ್ಯಕ್ಕೆ ಕಳಂಕ: PSI ಅನಿತಾ ಸೇರಿ ಮೂವರ ಅಮಾನತು- ಪ್ರಿಯಾಂಕ್ ಖರ್ಗೆ

SCROLL FOR NEXT