ರಾಂಚಿ/ಜೆಮ್ ಶೆಡ್ ಪುರ: ರಾಂಚಿಯಲ್ಲಿರುವ ಆರ್‌ಎಸ್‌ಎಸ್ ಕಚೇರಿಯ ಮೇಲೆ "ಪೆಟ್ರೋಲ್ ಬಾಂಬ್" ಎಸೆದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ.
ಗುರುವಾರ ಮಧ್ಯಾಹ್ನ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಆರೋಪಿಯೊಬ್ಬ ಪ್ರಯತ್ನಿಸುತ್ತಿದ್ದಾಗ ನಡೆದ ಗುಂಡಿನ ಚಕಮಕಿಯಲ್ಲಿ ಆತನಿಗೆ ಗುಂಡು ತಗುಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬುಧವಾರ ತಡರಾತ್ರಿ ಲೋಹರ್ದಗಾ ಜಿಲ್ಲೆಯಿಂದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರು ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿತ್ತು.
ಇಂದು ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಇವರೆಲ್ಲರೂ ಪಾಕ್ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಶಂಕಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿವರನ್‌ಪುರ ಪ್ರದೇಶದಲ್ಲಿರುವ ಕಚೇರಿಯ ಮೇಲೆ ಬುಧವಾರ ಮುಂಜಾನೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ ಎಂದು ಆರ್ ಎಸ್ ಎಸ್ ಆರೋಪಿಸಿತ್ತು. ಈ ಬಗ್ಗೆ ತನಿಖೆ ನಡೆಸಲು ಪೊಲೀಸರು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದಾರೆ.
ಇದುವರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ರಾಂಚಿಯ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾಗ ಆರೋಪಿಯೊಬ್ಬ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯ ನಂತರ ಆತನನ್ನು ಬಂಧಿಸಲಾಯಿತು. ಆತನ ಒಂದು ಕಾಲಿಗೆ ಗುಂಡು ತಗುಲಿದ್ದು, ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಂಚಿ ನಗರದ ಡಿಎಸ್ಪಿ ಕೆ.ವಿ. ರಾಮನ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಗಾಯಗೊಂಡ ಆರೋಪಿಯನ್ನು ಸೈಫ್ ಅನ್ಸಾರಿ ಅಲಿಯಾಸ್ ರೋಹಿತ್ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು. IED ಯಂತಹ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ ಎಂದು ಮತ್ತೊರ್ವ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಆರ್‌ಎಸ್‌ಎಸ್ ಕಚೇರಿಯ ಮೇಲೆ ನಡೆದ ಪೆಟ್ರೋಲ್ ಬಾಂಬ್ ದಾಳಿಯನ್ನು ಹಿರಿಯ ಬಿಜೆಪಿ ನಾಯಕ ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ರಘುಬರ್ ದಾಸ್ ಖಂಡಿಸಿದ್ದಾರೆ. ಜೆಎಂಎಂ ನೇತೃತ್ವದ ಸರ್ಕಾರದ "ಮತ ಬ್ಯಾಂಕ್ ಮತ್ತು ತುಷ್ಟೀಕರಣ ನೀತಿಯ ಪರಿಣಾಮದಿಂದಾಗಿ ಈ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.