ಮುಂಬೈ: ಮಂಗಳವಾರವಷ್ಟೇ ಮಾನ್ಸೂನ್ ಮಾರುತಗಳು ಮಹಾರಾಷ್ಟ್ರ ಪ್ರವೇಶಿಸಿದ್ದು ಇದರ ಬೆನ್ನಲ್ಲೇ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಭಾರಿ ಮಳೆ ಸುರಿಯುತ್ತಿದೆ.
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಹಾರಾಷ್ಟ್ರಕ್ಕೆ ಮುಂಗಾರು ಭರ್ಜರಿಯಾಗಿಯೇ ಎಂಟ್ರಿ ಕೊಟ್ಟಿದ್ದು, ನಗರದ ಹಲವು ಕಡೆ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಯಿತು.
ಭಾರೀ ಮಳೆಯ ಪರಿಣಾಮವಾಗಿ ಪಶ್ಚಿಮ ವಿಕ್ರೋಲಿಯ ಜೋಗೇಶ್ವರಿ-ವಿಕ್ರೋಲಿ ಲಿಂಕ್ ರಸ್ತೆಯ ಸಮೀಪದ ಸನ್ ಸಿಟಿ ಕಾಂಪ್ಲೆಕ್ಸ್ ಪಕ್ಕದಲ್ಲಿರುವ ವಸತಿ ಕಟ್ಟಡಕ್ಕೆ ಹೊಂದಿಕೊಂಡಿದ್ದ ಗೋಡೆಯೊಂದು ಕುಸಿದಿದೆ.
ಮತ್ತೊಂದು ಪ್ರದೇಶದಲ್ಲಿ ಮರವು ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ವಾಹನ ಸಂಪೂರ್ಣ ಜಖಂಗೊಂಡಿದ್ದು, ಅದರೊಳಗಿದ್ದ ಚಾಲಕ ಗಾಯಗೊಂಡಿದ್ದಾನೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಮರವನ್ನು ತೆರವುಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ದಾಖಲೆಯ ಮಳೆ
ನಗರದ ಹಲವು ಭಾಗಗಳಲ್ಲಿ ರಾತ್ರಿಯಿಡೀ 300 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದೆ. ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ಗಂಟೆಗಳಲ್ಲಿ ಪಶ್ಚಿಮ ಮತ್ತು ಪೂರ್ವ ಉಪನಗರಗಳಲ್ಲಿ 208 ಮಿ.ಮೀ. ಮತ್ತು 167 ಮಿ.ಮೀ. ಮಳೆಯಾಗಿದೆ ಎಂದು ನಾಗರಿಕ ಮಾಹಿತಿ ತಿಳಿಸಿದೆ. ಐಎಂಡಿ ಪ್ರಕಾರ, ಕೊಲಾಬಾದಲ್ಲಿ 248 ಮಿ.ಮೀ. ಮಳೆ ದಾಖಲಾಗಿದ್ದರೆ, ಸಾಂತಾಕ್ರೂಜ್‌ನಲ್ಲಿ ಕಳೆದ 24 ಗಂಟೆಗಳಲ್ಲಿ 225 ಮಿ.ಮೀ. ಮಳೆಯಾಗಿದೆ.
ಮಂಗಳವಾರ ರಾತ್ರಿ 8.30 ಗಂಟೆಯಿಂದ ಬುಧವಾರ ಬೆಳಗ್ಗೆ 8.30 ಗಂಟೆಯವರೆಗೆ ಅಂದರೆ ಕೇವಲ 12 ಗಂಟೆಯಲ್ಲೇ ಮುಂಬೈನ ಮೂರು ಹವಾಮಾನ ಕೇಂದ್ರಗಳಲ್ಲಿ ಅತ್ಯಂತ ಭಾರೀ ಮಳೆಯಾಗಿದೆ. 204.5 ಮಿ.ಮೀ. ಅಥವಾ ಅದಕ್ಕಿಂತ ಹೆಚ್ಚಿನ ಮಳೆಯನ್ನು ಅತ್ಯಂತ ಭಾರೀ ಮಳೆ ಎಂದು ಪರಿಗಣಿಸಲಾಗುತ್ತದೆ.
ಅಂತೆಯೇ ರಾಮ ಮಂದಿರ ಪ್ರದೇಶದಲ್ಲಿ 238 ಮಿ.ಮೀ. ಹಾಗೂ ಸಾಂತಾಕ್ರೂಜ್‌ನಲ್ಲಿ 224.8 ಮಿ.ಮೀ. ಮಳೆಯಾಗಿದ್ದು, ಇದಲ್ಲದೆ, ಸಿಯೋನ್, ವಿಕ್ರೋಲಿ, ವಿದ್ಯಾವಿಹಾರ್, ಟಾಟಾ ಪವರ್ ಚೆಂಬೂರ್, ಬೈಕುಲ್ಲಾ ಹಾಗೂ ಬಾಂದ್ರಾ ಪ್ರದೇಶಗಳಲ್ಲಿ 115.6 ಮಿ.ಮೀ.ದಿಂದ 204.4 ಮಿ.ಮೀ.ವರೆಗೆ ಭಾರೀ ಮಳೆಯಾಗಿದೆ.
ಮಳೆ ರಾಜಕೀಯ; ನಾಯಕರ ವಾಕ್ಸಮರ
ಈ ನಡುವೆ, ಆಡಳಿತಾರೂಢ ಮಹಾಯುತಿ ಸರ್ಕಾರದ ವಿರುದ್ಧ ಶಿವಸೇನೆ (ಉದ್ಧವ ಬಾಳಾಸಾಹೇಬ್ ಠಾಕ್ರೆ) ನಾಯಕ ಆದಿತ್ಯ ಠಾಕ್ರೆ ವಾಗ್ದಾಳಿ ನಡೆಸಿದ್ದಾರೆ. ಆಡಳಿತ ನಡೆಸುವುದಕ್ಕಿಂತ ರಾಜಕೀಯ ಲಾಭಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಆದಿತ್ಯ ಠಾಕ್ರೆ, ಭಾರತೀಯ ಜನತಾ ಪಕ್ಷ (BJP) ನೇತೃತ್ವದ ಸರ್ಕಾರವು ಬಿಎಂಸಿಯ ನಿಧಿಗಳನ್ನು ಖಾಲಿ ಮಾಡಿದೆ ಎಂದು ಟೀಕಿಸಿದ್ದಾರೆ. ಹಿಂದಿನ ಮಹಾ ವಿಕಾಸ್ ಅಘಾಡಿ ಸರ್ಕಾರ ಶಿಫಾರಸು ಮಾಡಿದ್ದ ಮಳೆನೀರು ಸಂಗ್ರಹ ಟ್ಯಾಂಕ್‌ಗಳನ್ನು ನಿರ್ಮಿಸದೆ ಆಡಳಿತಾರೂಢ ಪಕ್ಷ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ್ದಾರೆ.
"ಮುಂಬೈಯಂತಹ ಕರಾವಳಿ ನಗರಕ್ಕೆ ಮಳೆನೀರು ಸಂಗ್ರಹ ಟ್ಯಾಂಕ್‌ಗಳು, ಪಂಪಿಂಗ್ ಸ್ಟೇಷನ್‌ಗಳು ಹಾಗೂ ಮಳೆನೀರು ಚರಂಡಿಗಳ ವ್ಯಾಸವನ್ನು ಹೆಚ್ಚಿಸುವುದು ಅಗತ್ಯವಾಗಿದೆ. 2020ರಿಂದ 2022ರ ಅವಧಿಯಲ್ಲಿ ಹಿಂದ್ ಮಾತಾ, ಗಾಂಧಿ ಮಾರ್ಕೆಟ್ ಹಾಗೂ ಮಿಲನ್ ಸಬ್‌ವೇ ಪ್ರದೇಶಗಳಲ್ಲಿ ಈ ಯೋಜನೆಗಳು ಪರಿಣಾಮಕಾರಿಯಾಗಿರುವುದನ್ನು ನಾವು ಸಾಬೀತುಪಡಿಸಿದ್ದೇವೆ. ಆದರೆ ಈಗ ಅಲ್ಲಿನ ಪಂಪ್‌ಗಳು ಮತ್ತು ಸಂಗ್ರಹ ಟ್ಯಾಂಕ್‌ಗಳನ್ನು ಸರಿಯಾಗಿ ನಿರ್ವಹಿಸದೇ ಪ್ರದೇಶ ಮತ್ತೆ ಜಲಾವೃತವಾಗುವಂತಾಗಿದೆ" ಎಂದು ಆದಿತ್ಯ ಠಾಕ್ರೆ ಬರೆದುಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ರಿತು ತಾವಡೆ, "ಮನೆಯಲ್ಲೇ ಕುಳಿತುಕೊಂಡರೆ ಕೆಲಸ ಆಗುವುದಿಲ್ಲ. ಜನರ ನಡುವೆ ತೆರಳಿ ಕೆಲಸ ಮಾಡಬೇಕು," ಎಂದು ತಿರುಗೇಟು ನೀಡಿದ್ದಾರೆ. ಕೋವಿಡ್-19 ಸಂದರ್ಭದಲ್ಲಿ ಆದಿತ್ಯ ಠಾಕ್ರೆ ಮನೆಯಿಂದಲೇ ಆಡಳಿತ ನಡೆಸುತ್ತಿದ್ದರು ಎಂದು ಆರೋಪಿಸಿದ ಅವರು, ವಿರೋಧ ಪಕ್ಷದ ನಾಯಕರು ಕ್ಷೇತ್ರಕ್ಕೆ ಇಳಿದು ಪರಿಸ್ಥಿತಿಯನ್ನು ವೀಕ್ಷಿಸಬೇಕು ಎಂದು ಸಲಹೆ ನೀಡಿದ್ದಾರೆ.