ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಜೋಸೆಫ್ ಸಿ ವಿಜಯ್ ಅವರ 'ನಿಮ್ಮ ತಂದೆ ಎಲ್ಲಿದ್ದಾರೆ?' ಎಂಬ ಹೇಳಿಕೆ ಹೊಸ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದು, ಡಿಎಂಕೆಯ ಹಿರಿಯ ನಾಯಕರು ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಉಪಚುನಾವಣೆ ಮೂಲಕ ಸದನಕ್ಕೆ ಮರಳುವ ಬಗ್ಗೆ ಬಹಿರಂಗವಾಗಿ ಸುಳಿವು ನೀಡಿದ್ದಾರೆ.
2026ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆಯನ್ನು ಮುನ್ನಡೆಸಿದ್ದ ಸ್ಟಾಲಿನ್, ತಮ್ಮ ಕೊಳತ್ತೂರು ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ವಿರುದ್ಧವೇ ಆಘಾತಕಾರಿ ಸೋಲನ್ನು ಅನುಭವಿಸಿದ್ದರು. ಅಂದಿನಿಂದ, ಮಾಜಿ ಮುಖ್ಯಮಂತ್ರಿ ವಿಧಾನಸಭೆಯಿಂದ ಹೊರಗೆ ಉಳಿದಿದ್ದಾರೆ. ಆದರೆ, ಅವರ ಮಗ ಉದಯನಿಧಿ ಸ್ಟಾಲಿನ್ ವಿರೋಧ ಪಕ್ಷದ ನಾಯಕರಾಗಿದ್ದಾರೆ.
ಈ ಟೀಕೆಗಳಿಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್, 'ನಾನು ಜನರ ಹೃದಯದಲ್ಲಿದ್ದೇನೆ. ನಾನು ವಿಧಾನಸಭೆಯಲ್ಲಿಲ್ಲ. ಆದರೆ, ಜನರು ನನ್ನನ್ನು ಎಲ್ಲೆಲ್ಲಿ ಹುಡುಕುತ್ತಾರೋ ಅಲ್ಲೇ ಇರುತ್ತೇನೆ' ಎಂದು ಹೇಳಿದರು.
ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಡಿಎಂಕೆ ಹಿರಿಯ ನಾಯಕ ಮತ್ತು ಶಾಸಕ ಕೆಎನ್ ನೆಹರು, ಸ್ಟಾಲಿನ್ ಅವರ ವಿಧಾನಸಭೆಗೆ ಮರುಪ್ರವೇಶ ಸನ್ನಿಹಿತವಾಗಬಹುದು ಎಂದು ಸೂಚಿಸಿದರು.
'ಅವರು ನಮ್ಮ ನಾಯಕರನ್ನು ಕೇಳಿದರು, ನಿಮ್ಮ ತಂದೆ ಎಲ್ಲಿದ್ದಾರೆ? ಎಂದು. ಆದರೆ, ಅವರು ಬರುತ್ತಾರೆ. ಶೀಘ್ರದಲ್ಲೇ ಅವರು ಒಳಗೆ ಬರುತ್ತಾರೆ. ನಾವು ಈಗ ಹೇಳಬಲ್ಲೆ ಅಷ್ಟೆ. ಅವರು ಹಿಂತಿರುಗಿ ಮತ್ತೆ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಅಷ್ಟೇ ಖಚಿತ. ನಿನ್ನೆಯವರೆಗೂ ನಮ್ಮ ಎಲ್ಲ ಕಾರ್ಯಕರ್ತರು ಮೌನವಾಗಿದ್ದರು. ಆದರೆ, ಅವರು ಮಾತನಾಡಿದ ನಂತರ, ತಮಿಳುನಾಡಿನಾದ್ಯಂತ ಕಾರ್ಯಕರ್ತರು ಇದನ್ನು ಬಯಸುತ್ತಾರೆ' ಎಂದು ಹೇಳಿದರು.
ಅವರ ಹೇಳಿಕೆಗಳು, ಡಿಎಂಕೆಯೊಳಗಿನ ಒಂದು ವರ್ಗವು ಮುಂಬರುವ ತಿಂಗಳುಗಳಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆಗಳಲ್ಲಿ ಒಂದಕ್ಕೆ ಸ್ಟಾಲಿನ್ ಸ್ಪರ್ಧಿಸಬೇಕೆಂದು ಬಯಸುತ್ತಿದೆ ಎಂಬುದರ ಸ್ಪಷ್ಟ ಸೂಚನೆಯಾಗಿ ಕಂಡುಬರುತ್ತಿದೆ.
ಸಿಎಂ ವಿಜಯ್ ಹೇಳಿದ್ದೇನು?
ವಿಜಯ್ ಅವರು ವಿಧಾನಸಭೆಯಲ್ಲಿ ಭಾಷಣ ಮಾಡುವಾಗ, 'ನಿಮ್ಮ ತಂದೆ ಎಲ್ಲಿದ್ದಾರೆ?' ಎಂಬ ಪ್ರಶ್ನೆಯನ್ನು ಒಳಗೊಂಡ ಕಥೆಯನ್ನು ಹೇಳಿದ ನಂತರ ವಿವಾದ ಪ್ರಾರಂಭವಾಯಿತು. ಈ ಹೇಳಿಕೆಯನ್ನು ಉದಯನಿಧಿ ಸ್ಟಾಲಿನ್ ವಿರುದ್ಧದ ವಾಗ್ದಾಳಿ ಮತ್ತು ಅವರ ತಂದೆ ಸದನದಲ್ಲಿ ಇಲ್ಲದಿರುವುದು ಎಂದು ಅರ್ಥೈಸಲಾಯಿತು.
ಮುಖ್ಯಮಂತ್ರಿ ಹೇಳಿಕೆಯು ಅವರದೇ ಮೈತ್ರಿಕೂಟದ ಕೆಲವು ಪಾಲುದಾರರಿಂದಲೂ ಟೀಕೆಗೆ ಗುರಿಯಾಗಿದೆ. ಈ ಹೇಳಿಕೆಯು ಮುಖ್ಯಮಂತ್ರಿ ಹುದ್ದೆಯ ಘನತೆಗೆ ಶೋಭೆ ತರುವುದಿಲ್ಲ ಎಂದು ಹೇಳಿದ ವಿಸಿಕೆ ಮುಖ್ಯಸ್ಥ ತೋಲ್ ತಿರುಮಾವಲವನ್, ವಿಜಯ್ ಅವರು ಅಂತಹ ವೈಯಕ್ತಿಕ ಉಲ್ಲೇಖವನ್ನು ಮಾಡುವುದನ್ನು ತಪ್ಪಿಸಬೇಕಿತ್ತು. ಸದನದ ಘನತೆಯನ್ನು ಕಾಪಾಡುವಂತೆ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದರು.
ವಿಧಾನಸಭೆಯಲ್ಲಿ ವಿಜಯ್ ಅವರ ಹೇಳಿಕೆಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಉದಯ ನಿಧಿ ಸ್ಟಾಲಿನ್, 'ಇದು ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ತನ್ನ ಪತಿಯನ್ನು ಹುಡುಕುತ್ತಿರುವ ಹೆಂಡತಿಯ ಕಥೆ' ಎಂದರು.
ತಮಿಳುನಾಡಿನ ಹಲವಾರು ವಿಧಾನಸಭಾ ಸ್ಥಾನಗಳು ಖಾಲಿಯಾಗಿದ್ದು, ಸದ್ಯ ಆರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಾಗಿದೆ. ವಿಜಯ್ ಅವರು ಗೆದ್ದ ಎರಡು ಕ್ಷೇತ್ರಗಳಲ್ಲಿ ಒಂದಾದ ಪೆರಂಬೂರ್ ಅನ್ನು ಉಳಿಸಿಕೊಂಡು, ಮತ್ತೊಂದಕ್ಕೆ ರಾಜೀನಾಮೆ ನೀಡಿದ ನಂತರ ತಿರುಚಿ ಪೂರ್ವ ಸ್ಥಾನ ಖಾಲಿಯಾಗಿದೆ. ಐದು ಎಐಎಡಿಎಂಕೆ ಶಾಸಕರು ಸಹ ರಾಜೀನಾಮೆ ನೀಡಿದ್ದಾರೆ. ಅವರಲ್ಲಿ ನಾಲ್ವರು ನಂತರ ಟಿವಿಕೆ ಸೇರಿದರು.