ವಿದೇಶಾಂಗ ಸಚಿವಾಲಯ ವಕ್ತಾರ ರಣಧೀರ್ ಜೈಸ್ವಾಲ್ 
ದೇಶ

'ಇದು ಬಹಿರಂಗ ಆಕ್ರಮಣ, ಪ್ರಾದೇಶಿಕ ಸ್ಥಿರತೆಗೆ ಧಕ್ಕೆ': ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ವೈಮಾನಿಕ ದಾಳಿಗೆ ಭಾರತ ತೀವ್ರ ಖಂಡನೆ

ಪಾಕಿಸ್ತಾನದ ಈ ಆಕ್ರಮಣವು ಅಫ್ಘಾನಿಸ್ತಾನದ ಸಾರ್ವಭೌಮತ್ವದ ಮೇಲಿನ ದಾಳಿಯಷ್ಟೇ ಅಲ್ಲ, ಇಡೀ ಪ್ರದೇಶದ ಶಾಂತಿ ಮತ್ತು ಸ್ಥಿರತೆಗೆ ನೇರ ಬೆದರಿಕೆಯಾಗಿದೆ. ತನ್ನ ಆಂತರಿಕ ವೈಫಲ್ಯಗಳನ್ನು ಮುಚ್ಚಿಹಾಕಲು ಗಡಿದಾಟಿ ಹಿಂಸಾಚಾರ ನಡೆಸುವ ಪಾಕಿಸ್ತಾನದ ನಿರ್ಲಕ್ಷ್ಯದ ಧೋರಣೆಯನ್ನು ಇದು ಮತ್ತೊಮ್ಮೆ ಬಯಲಿಗೆಳೆದಿದೆ.

ನವದೆಹಲಿ: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಇದನ್ನು "ಬಹಿರಂಗ ಆಕ್ರಮಣ" (Blatant Act of Aggression) ಹಾಗೂ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ನೇರ ಬೆದರಿಕೆ ಎಂದು ಬಣ್ಣಿಸಿದೆ.

ಈ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವು ನಾಗರಿಕರು ಮೃತಪಟ್ಟಿರುವುದಕ್ಕೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.

ಭಾನುವಾರ ಮತ್ತು ಸೋಮವಾರ ಮಧ್ಯರಾತ್ರಿ ಪಾಕಿಸ್ತಾನವು ಅಫ್ಘಾನಿಸ್ತಾನದ ಪೂರ್ವ ಭಾಗದಲ್ಲಿರುವ ಮೂರು ಪ್ರಾಂತ್ಯಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು.

ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ ಎಂದು ಪಾಕಿಸ್ತಾನ ಹೇಳಿತ್ತು. ಆದರೆ, ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನ ಸರ್ಕಾರ ಈ ದಾಳಿಯಲ್ಲಿ ನಿರಪರಾಧ ನಾಗರಿಕರೇ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದೆ. ಈ ದಾಳಿಯಲ್ಲಿ 36 ನಾಗರಿಕರು ಮೃತಪಟ್ಟಿದ್ದು, 163ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಹೇಳಿದೆ.

ಆದರೆ, ಪಾಕಿಸ್ತಾನ ತನ್ನ ದಾಳಿಯಲ್ಲಿ 29 ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿಕೊಂಡಿದೆ. ಕರಾಚಿಯಲ್ಲಿ ನಡೆದ ಮಾರಣಾಂತಿಕ ದಾಳಿಗೆ ಸಂಬಂಧಿಸಿದ ಉಗ್ರರು ಅಫ್ಘಾನಿಸ್ತಾನದಲ್ಲಿ ಅಡಗಿಕೊಂಡಿದ್ದರು ಎಂಬುದು ಪಾಕಿಸ್ತಾನದ ವಾದವಾಗಿದೆ. ಆದರೆ, ತನ್ನ ನೆಲದಲ್ಲಿ ಅಂತಹ ಉಗ್ರರಿಗೆ ಆಶ್ರಯ ನೀಡಿಲ್ಲ ಎಂದು ಅಫ್ಘಾನಿಸ್ತಾನ ಸ್ಪಷ್ಟಪಡಿಸಿದೆ.

ಈ ಕುರಿತು ಭಾರತದ ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿದ್ದು, ಅಫ್ಘಾನಿಸ್ತಾನದ ಭೂಪ್ರದೇಶದ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯನ್ನು ಭಾರತ "ಬಲವಾಗಿ ಖಂಡಿಸುತ್ತದೆ" ಎಂದು ತಿಳಿಸಿದೆ.

ಪಾಕಿಸ್ತಾನದ ಈ ಬಹಿರಂಗ ಆಕ್ರಮಣವು ಅಫ್ಘಾನಿಸ್ತಾನದ ಸಾರ್ವಭೌಮತ್ವದ ಮೇಲಿನ ದಾಳಿಯಷ್ಟೇ ಅಲ್ಲ, ಇಡೀ ಪ್ರದೇಶದ ಶಾಂತಿ ಮತ್ತು ಸ್ಥಿರತೆಗೆ ನೇರ ಬೆದರಿಕೆಯಾಗಿದೆ. ತನ್ನ ಆಂತರಿಕ ವೈಫಲ್ಯಗಳನ್ನು ಮುಚ್ಚಿಹಾಕಲು ಗಡಿದಾಟಿ ಹಿಂಸಾಚಾರ ನಡೆಸುವ ಪಾಕಿಸ್ತಾನದ ನಿರ್ಲಕ್ಷ್ಯದ ಧೋರಣೆಯನ್ನು ಇದು ಮತ್ತೊಮ್ಮೆ ಬಯಲಿಗೆಳೆದಿದೆ ಎಂದು ಹೇಳಿದೆ.

ಇದೇ ವೇಳೆ, ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಭಾರತ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದೆ. ಜೊತೆಗೆ, ಅಫ್ಘಾನಿಸ್ತಾನದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಭಾರತ ತನ್ನ ಅಚಲ ಬೆಂಬಲವನ್ನು ಪುನರುಚ್ಚರಿಸಿದೆ.

ಇತ್ತೀಚಿನ ತಿಂಗಳುಗಳಲ್ಲಿ ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸಿದ ಅತ್ಯಂತ ಭೀಕರ ದಾಳಿಗಳಲ್ಲಿ ಇದೂ ಒಂದಾಗಿದೆ. 2021ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳು ಹದಗೆಟ್ಟಿದ್ದು, ಗಡಿ ಭಾಗದಲ್ಲಿ ಉದ್ವಿಗ್ನತೆ ನಿರಂತರವಾಗಿ ಹೆಚ್ಚುತ್ತಿದೆ. ಕಳೆದ ಫೆಬ್ರವರಿಯಲ್ಲಿ ಆರಂಭವಾದ ಗಡಿ ಸಂಘರ್ಷಗಳ ಬಳಿಕ ಉಭಯ ದೇಶಗಳ ನಡುವೆ ಹಲವಾರು ಬಾರಿ ಗುಂಡಿನ ಚಕಮಕಿ ಮತ್ತು ವೈಮಾನಿಕ ದಾಳಿಗಳು ನಡೆದಿವೆ.

ಅಫ್ಘಾನಿಸ್ತಾನದ ಪಕ್ತಿಯಾ ಪ್ರಾಂತ್ಯದ ನಿವಾಸಿ ಆದಂ ಖಾನ್ ಮಾತನಾಡಿ, ಆಸ್ಪತ್ರೆಯಲ್ಲಿ ಗಾಯಗೊಂಡ ಮಕ್ಕಳ ಪರಿಸ್ಥಿತಿ ಹಾಗೂ ಅವರ ಕುಟುಂಬಸ್ಥರ ಆಕ್ರಂದನವನ್ನು ವರ್ಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ದಾಳಿಯಲ್ಲಿ ಮೃತಪಟ್ಟವರು ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಸೇರಿದಂತೆ ಸಂಪೂರ್ಣ ನಿರಪರಾಧ ನಾಗರಿಕರಾಗಿದ್ದರು ಎಂದು ಆರೋಪಿಸಿದ್ದಾರೆ.

ಪಕ್ಕದ ಪಕ್ತಿಕಾ ಪ್ರಾಂತ್ಯದಲ್ಲಿಯೂ ಪಾಕಿಸ್ತಾನದ ಬಾಂಬ್ ದಾಳಿಯಲ್ಲಿ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಸಮುದಾಯದ ಮುಖಂಡ ಅಮೀನ್ ಮಂಗಲ್ ತಿಳಿಸಿದ್ದಾರೆ.

ಮೃತರು ಅತ್ಯಂತ ಬಡ ಕುಟುಂಬಕ್ಕೆ ಸೇರಿದವರಾಗಿದ್ದು, ಯಾವುದೇ ರೀತಿಯ ಉಗ್ರ ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿರಲಿಲ್ಲ ಎಂದು ಹೇಳಿದ್ದಾರೆ.

ಇನ್ನೊಂದೆಡೆ, ಅಫ್ಘಾನಿಸ್ತಾನದ ಸರ್ಕಾರದ ವಕ್ತಾರ ಹಮ್ದುಲ್ಲಾ ಫಿತ್ರತ್, ಪಕ್ತಿಯಾ ಪ್ರದೇಶದಲ್ಲಿ ಮೊದಲ ದಾಳಿಯ ಬಳಿಕ ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದವರ ಮೇಲೆ ಮತ್ತೆ ಬಾಂಬ್ ದಾಳಿ ನಡೆಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ರೀತಿಯ "ಡಬಲ್-ಟ್ಯಾಪ್" ದಾಳಿ ಅಂತರರಾಷ್ಟ್ರೀಯ ಮಾನವೀಯ ಕಾನೂನುಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಆದರೆ ಈ ಆರೋಪಕ್ಕೆ ಪಾಕಿಸ್ತಾನದ ಸೇನೆ ಹಾಗೂ ಪ್ರಧಾನಿ ಕಚೇರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಶ್ನೆಪತ್ರಿಕೆ ಸೋರಿಕೆ,'ಚಂದಾ ಚೋರಿ' ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ; 'ವಂದೇ ಮಾತರಂ'ನ ಎರಡು ಪ್ಯಾರಾ ಮಾತ್ರ ಹಾಡಲು ನಿರ್ಣಯ!

illegal gold mine: ಮಧ್ಯ ಆಫ್ರಿಕಾದಲ್ಲಿ ಭಯಾನಕ ದುರಂತ, ಚಿನ್ನದ ಗಣಿಯಲ್ಲಿ ಕುಸಿತ,100 ಮಂದಿ ದುರ್ಮರಣ! Video

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ರೋಚಕ ಪಂದ್ಯದಲ್ಲಿ ಭಾರತ 5-3 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿ ವಿಶ್ವಕಪ್‌ನಿಂದ ಹೊರದೂಡಿದೆ!

ಬಾಲಿವುಡ್ ನಟ ಗೋವಿಂದಾ ದಾಂಪತ್ಯ ಕಿತ್ತಾಟದಲ್ಲಿ ಸ್ಫೋಟಕ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ ಸುನೀತಾ ಅಹುಜಾ!