ಸೋಮವಾರ ಪ್ರಕಟವಾದ ವಿಧಾನಸಭಾ ಚುನಾವಣಾ ಫಲಿತಾಂಶಗಳು ದೇಶದ ಚುನಾವಣಾ ರಾಜಕೀಯದಲ್ಲಿ ಐತಿಹಾಸಿಕ ಬದಲಾವಣೆ ಪರ್ವ ಸೂಚಿಸಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಪಶ್ಚಿಮ ಬಂಗಾಳದಲ್ಲಿ ನಿರ್ಣಾಯಕ ವಿಜಯವನ್ನು ದಾಖಲಿಸಿದೆ.
ಒಂದು ಕಾಲದಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) (ಸಿಪಿಎಂ) ದ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟ ರಾಜ್ಯದಲ್ಲೇ ಪಕ್ಷ ಅಸ್ತಿತ್ವ ಕಳೆದುಕೊಂಡಿದೆ. ಇದೇ ವೇಳೆ ತಮಿಳುನಾಡಿನಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಹೊರಹೊಮ್ಮುವ ಮೂಲಕ ರಾಜ್ಯದಲ್ಲಿ ಹೊಸ ರಾಜಕೀಯ ಶಕ್ತಿಯ ಆಗಮನ ಸೂಚಿಸಿದೆ.
ಸಿಪಿಎಂ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಕೇರಳದಲ್ಲಿ ಅಧಿಕಾರ ಕಳೆದುಕೊಂಡಿರುವುದು ಅತ್ಯಂತ ಪರಿಣಾಮಕಾರಿ ಬೆಳವಣಿಗೆಯಾಗಿದೆ. 1977 ರ ನಂತರ ಮೊದಲ ಬಾರಿಗೆ, ಕಮ್ಯುನಿಸ್ಟ್ ಪಕ್ಷವು ದೇಶದ ಯಾವುದೇ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡಿಲ್ಲ. ಅಥವಾ ಯಾವುದೇ ರಾಜ್ಯವು ಕಮ್ಯುನಿಸ್ಟ್ ಮುಖ್ಯಮಂತ್ರಿಯನ್ನು ಹೊಂದಿಲ್ಲ.
1957 ರಲ್ಲಿ ಕೇರಳದಲ್ಲಿ ನಡೆದ ಮೊದಲ ವಿಧಾನಸಭಾ ಚುನಾವಣೆಯಲ್ಲಿ, ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಸರ್ಕಾರವನ್ನು ರಚಿಸಿತು, ಇ.ಎಂ.ಎಸ್. ನಂಬೂದಿರಿಪಾಡ್ ದೇಶದ ಮೊದಲ ಕಮ್ಯುನಿಸ್ಟ್ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ವಿಶ್ವದ ಮೊದಲ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಕಮ್ಯುನಿಸ್ಟ್ ಸರ್ಕಾರವೂ ಆಗಿತ್ತು. ಆದರೆ ಎರಡು ವರ್ಷಗಳಲ್ಲಿ, ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಯಿತು. 1964 ರಲ್ಲಿ ಸಿಪಿಐನಲ್ಲಿ ವಿಭಜನೆ ಉಂಟಾಯಿತು. ಸಿಪಿಎಂನಿಂದ ಬೇರ್ಪಟ್ಟ ಬಣ ಅಧಿಕಾರ ವಹಿಸಿಕೊಂಡಾಗ ನಂಬೂದಿರಿಪಾಡ್ ಮತ್ತೆ ಮುಖ್ಯಮಂತ್ರಿಯಾದರು.
1980 ರ ದಶಕದಿಂದ, ಕೇರಳವು ಸಾಂಪ್ರದಾಯಿಕವಾಗಿ ಎಡರಂಗ ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ನಡುವೆ ಪ್ರತಿ ಐದು ವರ್ಷಗಳಿಗೊಮ್ಮೆ ಅಧಿಕಾರ ವಹಿಸಿಕೊಂಡಿದೆ. 2021 ರ ಚುನಾವಣೆಯವರೆಗೆ ಈ ಟ್ರೆಂಡ್ ಮುಂದುವರಿದಿತ್ತು. ಆದರೆ ಪಿಣರಾಯಿ ವಿಜಯನ್ 2021 ರಲ್ಲಿ ಸತತ ಎರಡನೇ ಅವಧಿಗೆ ಪ್ರಮಾಣವಚನ ಸ್ವೀಕರಿಸುವ ಮೂಲಕ ಈ ಪ್ರವೃತ್ತಿ ಮುರಿದರು.
ಸಿಪಿಎಂ ನೇತೃತ್ವದ ಎಡರಂಗವು 1977 ರಲ್ಲಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದಿತು, ಅಲ್ಲಿಂದ ಐತಿಹಾಸಿಕ ಚುನಾವಣಾ ಪ್ರಯಾಣವನ್ನು ಪ್ರಾರಂಭಿಸಿತು, ಸುಮಾರು 34 ವರ್ಷಗಳ ಕಾಲ ರಾಜ್ಯವನ್ನು ನಿರಂತರವಾಗಿ ಆಳಿತು. ಜ್ಯೋತಿ ಬಸು ಚುಕ್ಕಾಣಿ ಹಿಡಿದರು, ನಂತರ ಬುದ್ಧದೇಬ್ ಭಟ್ಟಾಚಾರ್ಜಿ ಅಧಿಕಾರ ವಹಿಸಿಕೊಂಡರು ಮತ್ತು 11 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.
ನೃಪೇನ್ ಚಕ್ರವರ್ತಿ ಅವರ ನೇತೃತ್ವದಲ್ಲಿ, ಸಿಪಿಎಂ ನೇತೃತ್ವದ ಎಡರಂಗವು 1977 ರ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಮೊದಲು ಗೆದ್ದಿತು. ನಂತರದ ಚುನಾವಣೆಗಳಲ್ಲಿ ಅಧಿಕಾರವನ್ನು ಉಳಿಸಿಕೊಂಡಿತು. ಒಂದು ಅವಧಿಗೆ ಅಧಿಕಾರ ಕಳೆದುಕೊಂಡರೂ, ಸಿಪಿಎಂನ ದಶರಥ್ ದೇಬ್ ಮತ್ತೆ 1993 ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ನಂತರ, ಎಡ ರಂಗವು ಸತತ ಐದು ಚುನಾವಣೆಗಳನ್ನು ಗೆದ್ದಿತು. 1998 ರಿಂದ ಮಾಣಿಕ್ ಸರ್ಕಾರ್ ತ್ರಿಪುರಾದ ಮುಖ್ಯಮಂತ್ರಿಯಾಗಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದರು, ಅವರು ರಾಜ್ಯದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಸಿಎಂ ಎಂಬ ಖ್ಯಾತಿಗೆ ಪಾತ್ರರಾದರು.
ಕೇರಳದಲ್ಲಿ ಎಡ ಸರ್ಕಾರದ ಪತನದೊಂದಿಗೆ, ದಶಕಗಳ ನಂತರ ಪಶ್ಚಿಮ ಬಂಗಾಳ ಮತ್ತು ತ್ರಿಪುರಾದಲ್ಲಿ ಸೋಲಿನ ಸರಣಿಯೊಂದಿಗೆ, ಸಿಪಿಎಂನ ಜನಪ್ರಿಯತೆಯು ಕೆಳಮಟ್ಟಕ್ಕೆ ತಲುಪಿದೆ ಎಂದು ತೋರುತ್ತದೆ. ಈಗಾಗಲೇ ಕುಸಿತ ಕಂಡಿರುವ ಎಡ ರಾಜಕೀಯವು ಕೇರಳದಲ್ಲಿ ಎಲ್‌ಡಿಎಫ್ ಸರ್ಕಾರವನ್ನು ಪದಚ್ಯುತಗೊಳಿಸುವುದರೊಂದಿಗೆ ಈಗ ಅಂತಿಮ ಘಟ್ಟ ತಲುಪಿದೆ.
ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ. ಎ. ಬೇಬಿ ಈ ಸೋಲನ್ನು ಎಲ್‌ಡಿಎಫ್‌ಗೆ "ಗಂಭೀರ ಹಿನ್ನಡೆ" ಎಂದು ಕರೆದಿದ್ದಾರೆ. ಪಕ್ಷವು ಸೋಲಿನ ಹಿಂದಿನ ಕಾರಣಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತದೆ ಎಂದು ಹೇಳಿದರು. ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಜನರ ಹಕ್ಕುಗಳಿಗಾಗಿ ಮತ್ತು ಜಾತ್ಯತೀತತೆ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಟವನ್ನು ಮುಂದುವರಿಸುತ್ತದೆ ಎಂದು ನಾವು ಭರವಸೆ ನೀಡುತ್ತೇವೆ. ಮುಂಬರುವ ಪೊಲಿಟ್ ಬ್ಯೂರೋ ಮತ್ತು ಕೇಂದ್ರ ಸಮಿತಿಯ ಸಭೆಗಳಲ್ಲಿ ಸಮಗ್ರ ವಿಶ್ಲೇಷಣೆಯನ್ನು ಕೈಗೊಳ್ಳುತ್ತವೆ. ಚುನಾವಣಾ ಫಲಿತಾಂಶಗಳಿಂದ ಹೊರಹೊಮ್ಮುತ್ತಿರುವ ಹೊಸ ರಾಜಕೀಯ ಪರಿಸ್ಥಿತಿಯಿಂದ ಉಂಟಾಗುವ ಸವಾಲುಗಳನ್ನು ಎದುರಿಸಲು ಕ್ರಿಯಾ ಯೋಜನೆಯನ್ನು ರೂಪಿಸುತ್ತವೆ ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿನ ಚುನಾವಣಾ ಫಲಿತಾಂಶಗಳು ಬಿಜೆಪಿ ನೇತೃತ್ವದ ಬಲಪಂಥೀಯ ಶಕ್ತಿಗಳ ಪ್ರಾಬಲ್ಯವನ್ನು ತೋರಿಸುತ್ತವೆ, ಇದು ಜಾತ್ಯತೀತ, ಪ್ರಗತಿಪರ ಮತ್ತು ಪ್ರಜಾಪ್ರಭುತ್ವ ಗುಂಪುಗಳಿಗೆ ಕಳವಳಕಾರಿ ವಿಷಯವಾಗಿದೆ ಎಂದಿದ್ದಾರೆ.
ಆಡಳಿತ ವಿರೋಧಿ ಅಲೆಯ ಜೊತೆಗೆ, ಕೋಮುವಾದಿ ಮತ್ತು ವಿಭಜಕ ರಾಜಕೀಯವು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಗೆಲುವಿಗೆ ಸಹಾಯ ಮಾಡಿದೆ ಎಂದು ಶ್ರೀ ಬೇಬಿ ಹೇಳಿದ್ದಾರೆ. ಟಿಎಂಸಿ ಸರ್ಕಾರದ ವಿರುದ್ಧ ಬಲವಾದ ಆಡಳಿತ ವಿರೋಧಿ ಅಲೆ ಸೇರಿದಂತೆ ಹಲವಾರು ಅಂಶಗಳಿಂದ ಬಿಜೆಪಿ ಲಾಭ ಪಡೆಯಿತು.
ಒಡೆದು ಆಳುವ ನೀತಿ ಗಣನೀಯ ಆರ್ಥಿಕ ಸಂಪನ್ಮೂಲಗಳು ಮತ್ತು ಭಾರತ ಚುನಾವಣಾ ಆಯೋಗ (ಇಸಿಐ) ಸೇರಿದಂತೆ ಕೇಂದ್ರ ಸಂಸ್ಥೆಗಳ ದುರುಪಯೋಗ ಹಾಗೂ ಎಸ್‌ಐಆರ್ ನಿಯಮ ಎಲ್ಲವೂ ಬಿಜೆಪಿ ಗೆಲುವಿಗೆ ಕಾರಣವಾಗಿವೆ. ಅಂತಹ ಧ್ರುವೀಕೃತ ಪರಿಸ್ಥಿತಿಯಲ್ಲಿಯೂ ಸಹ, ಎಡಪಂಥೀಯರು ತಮ್ಮ ಕಾರ್ಯಕ್ಷಮತೆಯನ್ನು ಸ್ವಲ್ಪಮಟ್ಟಿಗೆ ಸುಧಾರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.