ನವದೆಹಲಿ: ಮಾರಕ ಹಂಟಾ ವೈರಸ್ ಸ್ಫೋಟಗೊಂಡಿರುವ ಡಚ್ ಕ್ರೂಸ್ ಹಡಗು MV Hondiusನಲ್ಲಿ ಇಬ್ಬರು ಭಾರತ ಮೂಲದ ಪ್ರಜೆಗಳು ಇದ್ದಾರೆ ಎಂದು ತಿಳಿದುಬಂದಿದೆ.
ಹೌದು.. ಡಚ್ ಕ್ರೂಸ್ ಹಡಗು MV Hondiusನಲ್ಲಿ ಸಂಭವಿಸಿರುವ ಹಾಂಟಾವೈರಸ್ ಸೋಂಕು ಜಾಗತಿಕ ಆತಂಕಕ್ಕೆ ಕಾರಣವಾಗಿದ್ದು, ಈಗಾಗಲೇ ಐದು ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಮೂವರು ಮೃತಪಟ್ಟಿದ್ದಾರೆ.
ಇದು ಜಾಗತಿಕವಾಗಿ ದೊಡ್ಡ ಆತಂಕಕ್ಕೆ ಕಾರಣವಾಗಿದ್ದು, ಓಷ ನ್ ವೈಡ್ ಎಕ್ಸಿಪಿಡಿಷನ್ಸ್ ಸಂಸ್ಥೆ (Oceanwide Expeditions) ನಿರ್ವಹಿಸುತ್ತಿರುವ ಈ ಐಷಾರಾಮಿ ಸಂಶೋಧನಾ ಹಡಗಿನಲ್ಲಿ ಕನಿಷ್ಠ ಇಬ್ಬರು ಭಾರತೀಯರು ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ಹಡಗು ಏಪ್ರಿಲ್ 1ರಂದು ಉಶುವಾಯಾ (Ushuaia)ದಿಂದ ಪ್ರಯಾಣ ಆರಂಭಿಸಿದ್ದು, ಮೇ 10ರಂದು ಕೆನರಿ ಐಲ್ಯಾಂಡ್ (Canary Islands) ತಲುಪುವ ನಿರೀಕ್ಷೆಯಿದೆ. ಆರಂಭದಲ್ಲಿ ಸುಮಾರು 150 ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ 28 ದೇಶಗಳ ನಾಗರಿಕರು ಹಡಗಿನಲ್ಲಿ ಇದ್ದರು.
ಏಪ್ರಿಲ್ 24ರಂದು ಕೆಲವರು ಸೆಂಟ್ ಹೆಲಿನಾ (Saint Helena) ದ್ವೀಪದಲ್ಲಿ ಇಳಿದಿದ್ದರು. ಪ್ರಯಾಣಿಕರ ಪಟ್ಟಿಯಲ್ಲಿ ಫಿಲಿಪೈನ್ಸ್, ಯುಕೆ, ಅಮೆರಿಕಾ, ನೆದರ್‌ಲ್ಯಾಂಡ್ಸ್, ಸ್ಪೇನ್, ಜರ್ಮನಿ, ಕೆನಡಾ ಹಾಗೂ ಭಾರತ ಸೇರಿದಂತೆ ಹಲವು ದೇಶಗಳ ನಾಗರಿಕರು ಇದ್ದರು ಎಂದು ವರದಿಯಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ (World Health Organization-WHO) ತಿಳಿಸಿದಂತೆ, ಶಂಕಿತ ಎಂಟು ಪ್ರಕರಣಗಳಲ್ಲಿ ಐದು ಮಂದಿಗೆ ಹಾಂಟಾವೈರಸ್ ಸೋಂಕು ದೃಢಪಟ್ಟಿದೆ. ಮೃತಪಟ್ಟವರಲ್ಲಿ ಸೋಂಕು ದೃಢಪಟ್ಟಿದ್ದ 69 ವರ್ಷದ ಡಚ್ ಮಹಿಳೆ, ಅವರ ಪತಿ ಮತ್ತು ಜರ್ಮನ್ ಮಹಿಳೆ ಸೇರಿದ್ದಾರೆ. ಈ ಸಾವುಗಳ ಬಗ್ಗೆ ತನಿಖೆ ಮುಂದುವರಿದಿದೆ ಎನ್ನಲಾಗಿದೆ.
ಡಬ್ಲ್ಯುಎಚ್‌ಒ ಸೋಂಕು ತಜ್ಞೆ ಮರಿಯಾ ವ್ಯಾನ್ ಕೆರ್ಕೋವ್ (Maria Van Kerkhove) ಮಾತನಾಡಿ, ಈ ಪರಿಸ್ಥಿತಿಯನ್ನು COVID-19 ಮಹಾಮಾರಿಯೊಂದಿಗೆ ಹೋಲಿಸಬಾರದು ಎಂದು ಹೇಳಿದ್ದಾರೆ. ಹಂಟಾವೈರಸ್ ಅತ್ಯಂತ ಸಮೀಪದ ಸಂಪರ್ಕದಿಂದ ಮಾತ್ರ ಹರಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಹಡಗಿನಲ್ಲಿರುವ ಎಲ್ಲರೂ ಮಾಸ್ಕ್ ಧರಿಸುವಂತೆ ಆರೋಗ್ಯ ಅಧಿಕಾರಿಗಳು ಸೂಚಿಸಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡುವವರು ಮತ್ತು ಸಂಪರ್ಕದಲ್ಲಿರುವವರು ಹೆಚ್ಚಿನ ಮಟ್ಟದ ರಕ್ಷಣಾ ಸಾಧನಗಳನ್ನು ಬಳಸಬೇಕು ಎಂದು ಸಲಹೆ ನೀಡಲಾಗಿದೆ.
ಸಾಮಾನ್ಯವಾಗಿ ಹಾಂಟಾವೈರಸ್ ಸೋಂಕಿತ ಇಲಿಗಳು ಅಥವಾ ಅವುಗಳ ಮಲಮೂತ್ರದ ಸಂಪರ್ಕದಿಂದ ಹರಡುತ್ತದೆ. ಆದರೆ ಈ ಬಾರಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಧ್ಯತೆಯೂ ದಾಖಲಾಗಿರುವುದಾಗಿ ಡಬ್ಲ್ಯುಎಚ್‌ಒ ತಿಳಿಸಿದೆ.
ಹಡಗಿನಿಂದ ಇತ್ತೀಚೆಗೆ ಇಳಿದ ಪ್ರಯಾಣಿಕರನ್ನು ಪತ್ತೆಹಚ್ಚಲು ಆರೋಗ್ಯ ಅಧಿಕಾರಿಗಳು ತೀವ್ರ ಕ್ರಮ ಕೈಗೊಂಡಿದ್ದು, ಸೋಂಕು ಮತ್ತಷ್ಟು ಹರಡದಂತೆ ನಿಗಾವಹಿಸುತ್ತಿದ್ದಾರೆ.