ಚೆನ್ನೈ: ತಮಿಳುನಾಡಿನಲ್ಲಿ ದಿನಕ್ಕೊಂದು, ಕ್ಷಣಕ್ಕೊಂದು ರೀತಿಯ ರಾಜಕೀಯ ಬೆಳವಣಿಗೆಯಾಗುತ್ತಿದೆ. ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಪಡೆದು ಅತಿದೊಡ್ಡ ಪಕ್ಷವಾಗಿ ಟಿವಿಕೆ ಹೊರಹೊಮ್ಮಿದ್ದರೂ ಅತಂತ್ರ ಫಲಿತಾಂಶದಿಂದಾಗಿ ಸರ್ಕಾರ ರಚಿಸಲು ಇನ್ನೂ ಸಾಧ್ಯವಾಗಿಲ್ಲ.
ಕಾಂಗ್ರೆಸ್ , ಎಡಪಕ್ಷಗಳ ಬೆಂಬಲ ಹೊರತಾಗಿಯೂ ಟಿವಿಕೆಗೆ 116 ಶಾಸಕರ ಬೆಂಬಲ ಮಾತ್ರವಿದ್ದು, ಸರ್ಕಾರ ರಚನೆಗೆ ಇನ್ನೂ ಇಬ್ಬರು ಶಾಸಕರ ಬೆಂಬಲ ಅಗತ್ಯವಿದೆ. ಹೀಗಾಗಿ ವಿಸಿಕೆ ಕಿಂಗ್ ಮೇಕರ್ ಆಗಿದೆ. ವಿಸಿಕೆ ದಿನಕ್ಕೊಂದು ರೀತಿಯ ಹೇಳಿಕೆ ನೀಡುತ್ತಾ ಹೊಸ ಹೊಸ ಡಿಮ್ಯಾಂಡ್ ಹಾಕುತ್ತಾ ಬಂದಿದೆ.
VCK ಬೇಡಿಕೆಗಳೇನು?
ನೂತನ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು. ವಿಜಯ್ ಅವರಿಂದ ತೆರವಾಗುವ ಸ್ಥಾನ ಮತ್ತು ತಿರುಮಾವ ವಳವನ್ ರಿಂದ ತೆರವಾದ ಎಂಪಿ ಸ್ಥಾನ ನೀಡಬೇಕು , SC ಕಲ್ಯಾಣ ಕಾಯ್ದೆ ರೂಪಿಸಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿವೆ. ಈ ಮಧ್ಯೆ ಸಂಜೆ 4 ಗಂಟೆಗೆ ವಿಸಿಕೆ ನಾಯಕರು ಸುದ್ದಿಗೋಷ್ಠಿ ನಡೆಸಲಿದ್ದು, ಅಲ್ಲಿ ಅಧಿಕೃತವಾಗಿ ಬೆಂಬಲ ನೀಡುವ ಸಾಧ್ಯತೆಯಿದೆ.
VCK ಮುಖ್ಯಸ್ಥನಿಗೆ ಸಿಎಂ ಹುದ್ದೆ ಆಫರ್!
ಈ ಮಧ್ಯೆ ಬದ್ಧವೈರಿಗಳಾಗಿರುವ DMK ಹಾಗೂ ಎಐಎಡಿಎಂಕೆ ನಡುವೆ ಮೈತ್ರಿ ಮಾತುಕತೆ ಮುಂದುವರೆದಿದ್ದು, ವಿಕೆಸಿ ಮುಖ್ಯಸ್ಥನಿಗೆ ಸಿಎಂ ಹುದ್ದೆ ಆಫರ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪುದುಚೇರಿಗೆ ಶಿಫ್ಟ್ ಆಗಿದ್ದ AIADMK ಶಾಸಕರು ಚೆನ್ನೈನತ್ತ ವಾಪಸ್ ಆಗುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸರ್ಕಾರ ರಚನೆ ಕಸರತ್ತು ಇನ್ನಷ್ಟು ದಿನ ಮುಂದುವರೆಯಲಿದ್ದು, ರಾಜ್ಯದಲ್ಲಿ ರಾಜಕೀಯ, ಸಂವಿಧಾನಿಕ ಬಿಕ್ಕಟ್ಟು ಎದುರಾಗಿದೆ. ಈ ಮೂಲಕ ರಾಷ್ಟ್ರಪತಿ ಆಡಳಿತ ಹೇರಲು ಕೇಂದ್ರ ಸರ್ಕಾರ ಹವಣಿಸುತ್ತಿದೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ.
ವಿಜಯ್ ಗೆ ಇದೇ ಮುಳುವಾಯ್ತಾ?
ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡು ಕೇಂದ್ರ ಸರ್ಕಾರವನ್ನು ಎದುರುಹಾಕಿಕೊಂಡಿದ್ದೇ ವಿಜಯ್ ಗೆ ಮುಳವಾಗಿದೆ. ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ವಿಜಯ್ ಸಿಎಂ ಆಗುವುದು ಇಷ್ಟವಿಲ್ಲ. ಹೀಗಾಗಿ ರಾಜ್ಯಪಾಲರನ್ನು ಬಳಸಿಕೊಂಡು ರಾಜ್ಯದಲ್ಲಿ ರಾಜಕೀಯ ಹಾಗೂ ಸಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುವ ಮೂಲಕ ರಾಷ್ಟ್ರಪತಿ ಆಡಳಿತ ಜಾರಿಗೆ ಹುನ್ನಾರ ನಡೆದಿದೆ ಎಂಬಂತಹ ಮಾತುಗಳು ಕೇಳಿಬರುತ್ತಿದೆ.
ರಾಜ್ಯಪಾಲರ ವಿರುದ್ಧ ಸಿಡಿದೆದ್ದ TVK ಕಾರ್ಯಕರ್ತರು
ಈ ಮಧ್ಯೆ ವಿಜಯ್ ಗೆ ಸರ್ಕಾರ ರಚನೆಗೆ ಅವಕಾಶ ನೀಡದ ರಾಜ್ಯಪಾಲರ ವಿರುದ್ಧ ಟಿವಿಕೆ ಕಾರ್ಯಕರ್ತರು ಸಿಡಿದೆದಿದ್ದು, ಹಲವೆಡೆ ರಸ್ತೆ ತಡೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಒಟ್ಟಾರೇ ತಮಿಳುನಾಡಿನಲ್ಲಿ ಕ್ಷಣಕ್ಕೊಂದು ರೀತಿಯಲ್ಲಿ ವಿದ್ಯಮಾನಗಳು ನಡೆಯುತ್ತಿದ್ದು, ದೇಶದ ರಾಜಕೀಯದಲ್ಲಿ ಗಮನ ಸೆಳೆದಿದೆ.