ಚೆನ್ನೈ: ತಮಿಳುನಾಡು ಸರ್ಕಾರ ರಚನೆ ಕಸರತ್ತು ದಿನಕ್ಕೊಂದು ತಿರುವು ಪಡೆಯುತ್ತಿದ್ದು, 108 ಸ್ಥಾನಗಳ ಮೂಲರ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ನಟ ವಿಜಯ್ ರ ಟಿವಿಕೆ ಪಕ್ಷ ಸರ್ಕಾರ ರಚನೆಗೆ ಭಾರಿ ಕಸರತ್ತು ನಡೆಸಿದೆ.
ಈಗಾಗಲೇ ಟಿವಿಕೆಗೆ ಈಗಾಗಲೇ ಕಾಂಗ್ರೆಸ್ (5), ಸಿಪಿಐ (2), ಸಿಪಿಐ-ಎಂ (2) ಬೆಂಬಲ ಘೋಷಣೆಯಾಗಿದೆಯಾದರೂ ನಟ ವಿಜಯ್ ಸಿಎಂಗಾದಿಗೇರಲು ಇನ್ನೂ 2 ಸದಸ್ಯರ ಬೆಂಬಲ ಬೇಕಿದೆ.
ಹೀಗಾಗಿ ಟಿವಿಕೆ ಪಕ್ಷ ವಿಸಿಕೆ ಪಕ್ಷದತ್ತ ಮುಖ ಮಾಡಿದ್ದು, ವಿಸಿಕೆ ಇದೀಗ ಅಕ್ಷರಶಃ ಕಿಂಗ್ ಮೇಕರ್ ಸ್ಥಾನದಲ್ಲಿದೆ. ಈಗಾಗಲೇ ನಟ ವಿಜಯ್ ವಿಸಿಕೆ ನಾಯಕರೊಂದಿಗೆ ಚರ್ಚೆ ನಡೆಸಿದ್ದು ಈ ವೇಳೆ ಟಿವಿಕೆಗೆ ಬೆಂಬಲ ನೀಡಲು ವಿಸಿಕೆ ಕೆಲ ಷರತ್ತುಗಳನ್ನು ಮುಂದಿಟ್ಟಿದೆ ಎನ್ನಲಾಗಿದೆ.
ಟಿವಿಕೆ ಬೆಂಬಲಿಸರು 5 ಷರತ್ತು?
ಸರ್ಕಾರ ರಚನೆ ವಿಳಂಬದ ನಡುವೆ ವಿಸಿಕೆ ಜೊತೆ ಟಿವಿಕೆ ಕಠಿಣ ಮಾತುಕತೆ ನಡೆಸುತ್ತಿದೆ ಎಂಬ ವರದಿಗಳು ಕೇಳಿಬಂದಿವೆ. ಬೆಂಬಲದ ಬದಲಿಗೆ ವಿಸಿಕೆ ದೊಡ್ಡ ಮಟ್ಟದ ಅಧಿಕಾರ ಹಂಚಿಕೆ ಬೇಡಿಕೆ ಮುಂದಿಟ್ಟಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ತಮಿಳುನಾಡು ಮಾಧ್ಯಮಗಳು ವರದಿ ಮಾಡಿದ್ದು, ಮೂಲಗಳ ಪ್ರಕಾರ ವಿಸಿಕೆ ಮುಖ್ಯಸ್ಥ ತೋಲ್ ತಿರುಮಾವಳವನ್ ಅವರನ್ನು ವಿಜಯ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬುದು ಪಕ್ಷದ ಪ್ರಮುಖ ಬೇಡಿಕೆಯಾಗಿದೆ. ಇದಲ್ಲದೆ ವಿಸಿಕೆ ಒಂದು ಸಚಿವ ಸ್ಥಾನ ನೀಡಬೇಕು. ವಿಜಯ್‌ರಿಂದ ತೆರವಾಗುವ ಕ್ಷೇತ್ರದಿಂದ ವಿಸಿಕೆ ಸ್ಪರ್ಧೆ ಮಾಡಬೇಕು ಮತ್ತು ಎಸ್‌ಸಿ ಕಲ್ಯಾಣಕ್ಕಾಗಿ ಶಾಸಕಾಂಗ ಕಾಯ್ದೆ ತಿದ್ದುಪಡಿ ಮಾಡಬೇಕು ಎಂದು ವಿಸಿಕೆ ಷರತ್ತು ಇರಿಸಿದೆ ಎನ್ನಲಾಗಿದೆ.
ಆದರೆ ಟಿವಿಕೆ ಪ್ರಸ್ತುತ ನಗರಾಭಿವೃದ್ಧಿ ಖಾತೆಯನ್ನು ನೀಡಲು ಸಿದ್ಧವಿದೆ ಎನ್ನಲಾಗಿದೆ. ಇದಕ್ಕೆ ವಿಸಿಕೆ ಏನು ಉತ್ತರ ನೀಡಿದೆ ಎಂದು ತಿಳಿದುಬಂದಿಲ್ಲ ಎಂದು ಹೇಳಲಾಗಿದೆ.
ಈ ಬೆಳವಣಿಗೆ ಸರ್ಕಾರ ರಚನೆಯ ನಿರ್ಣಾಯಕ ಹಂತದಲ್ಲಿ ವಿಸಿಕೆ ಇನ್ನಷ್ಟು ಕಠಿಣ ಮಾತುಕತೆ ನಡೆಸುತ್ತಿದೆ ಎಂಬ ಊಹಾಪೋಹಗಳಿಗೆ ಕಾರಣವಾಯಿತು. ಮತ್ತು ವಿಸಿಕೆ ಬೆಂಬಲದೊಂದಿಗೆ ಟಿವಿಕೆ ಬಹುಮತದ ಗಡಿಯತ್ತ ಸಾಗಿದಂತೆ ಕಂಡರೂ, ವಿಸಿಕೆ ನೀಡಿದ ಷರತ್ತುಬದ್ಧ ಬೆಂಬಲ ತಮಿಳುನಾಡಿನ ಸರ್ಕಾರ ರಚನೆ ಚರ್ಚೆಗಳಲ್ಲಿ ಹೊಸ ಗೊಂದಲಕ್ಕೆ ಕಾರಣವಾಗಿದೆ.
ಊಹಾಪೋಹ ನಂಬಬೇಡಿ: ವಿಸಿಕೆ ಟ್ವೀಟ್
ಈ ನಡುವೆ ತಮಿಳುನಾಡಿನಲ್ಲಾಗುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತು ವಿಸಿಕೆ ಟ್ವೀಟ್ ಮಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಊಹಾಪೋಹಗಳನ್ನು ನಂಬದಂತೆ ಮನವಿ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ವಿಸಿಕೆ ನಾಯಕ ಡಾ.ರವಿಕುಮಾರ್, 'ಪ್ರಸ್ತುತ ಹರಿದಾಡುತ್ತಿರುವ, ವಿಸಿಕೆ ವಿವಿಧ ಹುದ್ದೆಗಳನ್ನು ಬೇಡುತ್ತಿದೆ ಹಾಗೂ ಹಲವು ಷರತ್ತುಗಳನ್ನು ಮುಂದಿರಿಸಿದೆ ಎಂಬ ವರದಿಗಳು ಸಂಪೂರ್ಣ ಸತ್ಯಕ್ಕೆ ವಿರುದ್ಧವಾಗಿವೆ. ಇಂತಹ ವರದಿಗಳಿಗೆ ಮಾಧ್ಯಮಗಳು ವಿಶ್ವಾಸ ನೀಡಬಾರದೆಂದು ನಾವು ವಿನಂತಿಸುತ್ತೇವೆ. ವಿಸಿಕೆ ಪಕ್ಷದ ವಿರುದ್ಧ ಅಪಪ್ರಚಾರ ನಡೆಸುವ ಪ್ರಯತ್ನಗಳಲ್ಲಿ ಮಾಧ್ಯಮಗಳು ಭಾಗಿಯಾಗಬಾರದೆಂದೂ ನಾವು ಮನವಿ ಮಾಡುತ್ತೇವೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸತತ ಚರ್ಚೆ, ಶುಕ್ರವಾರ ಸಂಪರ್ಕಕ್ಕೇ ಸಿಗದ ವಿಸಿಕೆ ನಾಯಕರು
ಶುಕ್ರವಾರ ರಾತ್ರಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದ್ದು, ಬಹುಮತಕ್ಕೆ ಅಗತ್ಯವಾದ ಎರಡು ಸಹಿಗಳನ್ನು ಪಡೆಯಲು ಟಿವಿಕೆ ನಾಯಕರು ಹರಸಾಹಸ ಪಡುತ್ತಿದ್ದ ಸಂದರ್ಭದಲ್ಲಿ ಸುಮಾರು ಎರಡು ಗಂಟೆಗಳ ಕಾಲ ತಿರುಮಾವಳವನ್ ಸಂಪರ್ಕಕ್ಕೆ ಸಿಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ಮಾಜಿಕ್ ನಂಬರ್ ಜೊತೆ ಬನ್ನಿ ಎಂದ ರಾಜ್ಯಪಾಲರು
ಪ್ರಮುಖ ವಿರೋಧ ಪಕ್ಷಗಳ ಬೆಂಬಲ ಪಡೆದ ಬಳಿಕ ವಿಜಯ್, ಸರ್ಕಾರ ರಚಿಸಲು ಆಹ್ವಾನ ಪಡೆಯುವ ಉದ್ದೇಶದಿಂದ ಲೋಕಭವನದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್‌ಲೆಕರ್ ಅವರನ್ನು ಭೇಟಿಯಾದರು. ಆದರೆ ವಿಸಿಕೆ ಸಹಿಗಳಿಗಾಗಿ ಇನ್ನೂ ಕಾಯಲಾಗುತ್ತಿರುವ ಕಾರಣ ಪ್ರಮಾಣವಚನ ಸಮಾರಂಭದ ದಿನಾಂಕ ಮತ್ತು ಸಮಯವನ್ನು ಅಧಿಕೃತವಾಗಿ ಘೋಷಿಸಲಾಗಿಲ್ಲ ಎಂದು ಲೋಕಭವನ ಮೂಲಗಳು ತಿಳಿಸಿವೆ.
ವಿಜಯ್ 116 ಶಾಸಕರ ಸಹಿಗಳೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿ, ಬಹುಮತದ ಗಡಿ ದಾಟಲು ಅಗತ್ಯ ಉಳಿದ ಬೆಂಬಲವನ್ನು ಪಡೆಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ರಾಜಭವನಕ್ಕೆ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮ್ಯಾಜಿಕ್ ನಂಬರ್ ಲೆಕ್ಕಾಚಾರ
ಸಂಖ್ಯಾಬಲದ ಲೆಕ್ಕಾಚಾರ ಇನ್ನೂ ಸೂಕ್ಷ್ಮ ಹಂತದಲ್ಲಿದೆ. 234 ಸದಸ್ಯರ ವಿಧಾನಸಭೆಯಲ್ಲಿ ಟಿವಿಕೆ ಬಳಿ 107 ಶಾಸಕರಿದ್ದಾರೆ. ಕಾಂಗ್ರೆಸ್ ತನ್ನ ಐದು ಶಾಸಕರ ಬೆಂಬಲ ನೀಡಿದೆ. ಆಂತರಿಕ ಸಭೆಗಳ ಬಳಿಕ ಸಿಪಿಐ ಮತ್ತು ಸಿಪಿಐ(ಎಂ) ತಲಾ ಇಬ್ಬರು ಶಾಸಕರ ಬೆಂಬಲವನ್ನು ಟಿವಿಕೆಗೆ ಘೋಷಿಸಿವೆ. ಇದರಿಂದ ಒಟ್ಟು ಸಂಖ್ಯೆ 116ಕ್ಕೆ ತಲುಪಿದರೂ, ಬಹುಮತಕ್ಕೆ ಅಗತ್ಯವಾದ 118 ಸಂಖ್ಯೆಗೆ ಇನ್ನೂ ಎರಡು ಸದಸ್ಯರ ಕೊರತೆ ಇದೆ.
ಡಿಎಂಕೆ ಜೊತೆಯೇ ಇರುತ್ತೇವೆ ಎಂದ ಐಯುಎಂಎಲ್
ಈ ನಡುವೆ ವಿಜಯ್ ಶಿಬಿರಕ್ಕೆ ಹೊಸ ಹಿನ್ನಡೆಯಾಗಿದ್ದು, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ತನ್ನ ಇಬ್ಬರು ಶಾಸಕರೊಂದಿಗೆ ಡಿಎಂಕೆ ಮೈತ್ರಿಯಲ್ಲೇ ಮುಂದುವರಿಯುವುದಾಗಿ ಶುಕ್ರವಾರ ರಾತ್ರಿ ಸ್ಪಷ್ಟಪಡಿಸಿದೆ.
ಟಿವಿಕೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುವುದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. “ನಾವು ಡಿಎಂಕೆಯೊಂದಿಗೇ ಇದ್ದೇವೆ,” ಎಂದು ಪಕ್ಷದ ಮೂಲಗಳು ಹೇಳಿದ್ದು, ಟಿವಿಕೆಯ ಬಹುಮತ ಯತ್ನಕ್ಕೆ ಇದು ದೊಡ್ಡ ಹೊಡೆತವಾಗಿದೆ. ಇದರಿಂದ ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಕೀಲಿಕೈ ಈಗ ವಿಸಿಕೆ ಕೈಯಲ್ಲಿದೆ ಎಂಬ ಸ್ಥಿತಿ ನಿರ್ಮಾಣವಾಗಿದೆ.