‘ದಳಪತಿ’ ಜೋಸೆಫ್ ವಿಜಯ್ ಚಂದ್ರಶೇಖರ್ ಸಮಕಾಲೀನ ಭಾರತೀಯ ರಾಜಕೀಯದಲ್ಲಿನ ಅತ್ಯಂತ ನಾಟಕೀಯ ರಾಜಕೀಯ ಬೆಳವಣಿಗೆಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಚಿತ್ರರಂಗದಲ್ಲಿ ಕರಿಷ್ಮಾ ಬೆಳೆಸಿಕೊಂಡ ನಾಯಕ ದೀರ್ಘಕಾಲ ರೂಪುಗೊಂಡ ರಾಜಕೀಯ ಸಂಸ್ಕೃತಿಯಲ್ಲಿ, ಜೋಸೆಫ್ ವಿಜಯ್ ಚಂದ್ರಶೇಖರ್ ಅವರ ಬೆಳವಣಿಗೆ ಕೇವಲ ಸಿನೆಮಾ ಜನಪ್ರಿಯತೆಯಿಂದ ಮಾತ್ರವೇ ವಿಶಿಷ್ಟವಾಗಿಲ್ಲ;
ಅಭಿಮಾನಿ ಬಳಗವನ್ನು ಕಾರ್ಯನಿರ್ವಹಿಸುವ ರಾಜಕೀಯ ತಂತ್ರವಾಗಿ ಪರಿವರ್ತಿಸಿ, ಪಕ್ಷವನ್ನು ಆರಂಭಿಸಿದ ಕೇವಲ ಎರಡು ವರ್ಷಗಳಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಏರಿರುವ ಜೋಸೆಫ್ ವಿಜಯ್ ಸಾಧನೆ ಕಡಿಮೆಯೇನಲ್ಲ.
ಅವರ ಪಕ್ಷ ತಮಿಳಿಗ ವೆಟ್ರಿ ಕಳಗಂ (TVK), ಈ ಬಾರಿಯ ತಮಿಳು ನಾಡು ವಿಧಾನಸಭಾ ಚುನಾವಣೆಯಲ್ಲಿ ತನ್ನ ಮೊದಲ ಚುನಾವಣಾ ಸ್ಪರ್ಧೆಯಲ್ಲೇ 108 ಸ್ಥಾನಗಳನ್ನು ಗೆದ್ದು ಜನರನ್ನು ಅಚ್ಚರಿಗೊಳಿಸಿತು. ನಂತರ ಕಾಂಗ್ರೆಸ್, ಸಿಪಿಐ, ಸಿಪಿಎಂ, ವಿಸಿಕೆ ಮತ್ತು ಐಯುಎಂಎಲ್ ಪಕ್ಷಗಳ ಹೊರಗಿನ ಬೆಂಬಲದೊಂದಿಗೆ ಬಹುಮತವನ್ನು ಕೂಡ ಸಾಧಿಸಿತು. ಈ ಫಲಿತಾಂಶವು ವಿಜಯ್ ಅವರನ್ನು ಸಿನೆಮಾ ಐಕಾನ್‌ನಿಂದ, ಎಂ ಜಿ ರಾಮಚಂದ್ರನ್ ನಂತರ ತಮಿಳುನಾಡಿನಲ್ಲಿ ಉದಯಿಸಿದ ಅತ್ಯಂತ ಮಹತ್ವದ ಹೊಸ ರಾಜಕೀಯ ಶಕ್ತಿಯಾಗಿ ಪರಿವರ್ತಿಸಿತು.
2024ರ ಫೆಬ್ರವರಿ 2ರಂದು ದಳಪತಿ ವಿಜಯ್ ಅಧಿಕೃತವಾಗಿ ಟಿವಿಕೆ ಪಕ್ಷವನ್ನು ಆರಂಭಿಸಿ, ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದಾಗ, ಅನೇಕರು ಇದನ್ನು ಇನ್ನೊಂದು ಅಲ್ಪಾಯುಷಿ ನಟ-ಆಧಾರಿತ ರಾಜಕೀಯ ಪ್ರಯೋಗವೆಂದು ಅಸಡ್ಡೆ ಮಾಡಿದ್ದರು. ತಮಿಳುನಾಡಿನಲ್ಲಿ ಅನೇಕ ಚಿತ್ರತಾರೆಯರು ರಾಜಕೀಯಕ್ಕೆ ಬಂದಿದ್ದರೂ, ಜನಪ್ರಿಯತೆಯನ್ನು ಚುನಾವಣಾ ಯಶಸ್ಸಾಗಿ ಪರಿವರ್ತಿಸಲು ಕೆಲವರಿಗೆ ಮಾತ್ರ ಸಾಧ್ಯವಾಗಿತ್ತು.
ಆದರೆ ವಿಜಯ್ ನೇತೃತ್ವದ ಟಿವಿಕೆ 2026ರ ಮೇ ತಿಂಗಳ ಚುನಾವಣಾ ಫಲಿತಾಂಶ ಈ ಕಲ್ಪನೆಯನ್ನು ಸಂಪೂರ್ಣವಾಗಿ ಬದಲಿಸಿದೆ.
ಟಿವಿಕೆ ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಏಕೈಕ ಪಕ್ಷವಾಗಿ ಹೊರಹೊಮ್ಮಿ, 108 ಸ್ಥಾನಗಳನ್ನು ಗೆದ್ದು, 1,72,26,209 ಮತಗಳನ್ನು ಪಡೆದು, 34.92 ಶೇಕಡಾ ಮತಪಾಲು ದಾಖಲಿಸಿತು. ನಂತರ ಮೈತ್ರಿ ಪಕ್ಷಗಳ ಬೆಂಬಲದೊಂದಿಗೆ ಒಟ್ಟು 121 ಸ್ಥಾನಗಳನ್ನು ಪಡೆದು ಬಹುಮತದ ಗಡಿ ದಾಟಿತು.
ವಿಜಯ್ ಅವರ ಈ ಭರ್ಜರಿ ಆರಂಭವು ತಮಿಳು ನಾಡಿನಲ್ಲಿ ಎಂ ಜಿ ರಾಮಚಂದ್ರನ್ ಅವರೊಂದಿಗೆ ಹೋಲಿಕೆಗೆ ಕಾರಣವಾಗಿದೆ. 1972ರಲ್ಲಿ ಎಐಎಡಿಎಂಕೆ ಸ್ಥಾಪಿಸಿ, 1977ರಲ್ಲಿ ಸರ್ಕಾರ ರಚಿಸಿದ ಎಂ.ಜಿ.ಆರ್. ಹಲವು ವರ್ಷಗಳ ಡಿಎಂಕೆ ಸಂಘಟನಾ ಅನುಭವದ ನಂತರ ರಾಜಕೀಯಕ್ಕೆ ಬಂದಿದ್ದರು. ಆದರೆ ವಿಜಯ್ ಯಾವುದೇ ಸ್ಥಾಪಿತ ರಾಜಕೀಯ ಯಂತ್ರವನ್ನು ವಂಶಪಾರಂಪರ್ಯವಾಗಿ ಪಡೆದಿರಲಿಲ್ಲ.
ಆದರೆ ಮುಖ್ಯಮಂತ್ರಿ ಹಾದಿಯವರೆಗಿನ ವಿಜಯ್ ಅವರ ಹಾದಿ ಸುಲಭವಾಗಿರಲಿಲ್ಲ. ವಿಜಯ್ ಅವರ ಪ್ರವೇಶ ಮತ್ತೊಂದು ವಿಫಲ ನಟ-ರಾಜಕೀಯ ಪ್ರಯೋಗವಾಗಬಹುದು ಎಂಬ ಆತಂಕ ಸಂಪೂರ್ಣ ಅನಾಧಾರವಾಗಿರಲಿಲ್ಲ. ಕೇವಲ ಎರಡು ವರ್ಷದ ಹಳೆಯ ಪಕ್ಷವು, ತಮಿಳುನಾಡಿನ ಗಾಢ ದ್ರಾವಿಡ ರಾಜಕೀಯ ಸಂಸ್ಕೃತಿಯಲ್ಲಿ ಬೇರು ಬಿಟ್ಟಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಎಂಬ ಎರಡು ದಿಗ್ಗಜ ಪಕ್ಷಗಳನ್ನು ಎದುರಿಸಬೇಕಾಯಿತು. ಇದರ ಜೊತೆಗೆ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಕೂಡ ಎಐಎಡಿಎಂಕೆ ಜೊತೆ ಮೈತ್ರಿಯಲ್ಲಿ ಸ್ಪರ್ಧಿಸಿತು.
ವಿಜಯ್ ಅವರ ರಾಜಕೀಯ ಏರಿಕೆ ಟಿವಿಕೆ ಸ್ಥಾಪನೆಯಿಂದ ಆರಂಭವಾಗಲಿಲ್ಲ. ಹಲವು ವರ್ಷಗಳಿಂದ ಅವರ ಅಭಿಮಾನಿ ಸಂಘಟನೆ — ವಿಜಯ್ ಮಕ್ಕಳ್ ಇಯಕ್ಕಂ (VMI) — ಸಾಮಾಜಿಕ ಸೇವೆ, ಸ್ಥಳೀಯ ಸಂಘಟನೆ ಮತ್ತು ಜನಸಂಪರ್ಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ರಾಜಕೀಯ ತಳಮಟ್ಟದ ಸಂಘಟನೆಯಾಗಿ ಕಾರ್ಯನಿರ್ವಹಿಸುತ್ತಿತ್ತು.
2021ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ, ಯಾವುದೇ ಅಧಿಕೃತ ರಾಜಕೀಯ ಪಕ್ಷದ ಬೆಂಬಲವಿಲ್ಲದೆ ವಿಜಯ್ ಮಕ್ಕಳ್ ಇಯಕ್ಕಂಗೆ ಸಂಬಂಧಿಸಿದ 129 ಸದಸ್ಯರು ಗೆಲುವು ಸಾಧಿಸಿದಾಗ, ಈ ಸಂಘಟನೆಯ ಬಲ ಸ್ಪಷ್ಟವಾಯಿತು.
2025ರ ಕೊನೆಯ ವೇಳೆಗೆ, ಟಿವಿಕೆ ಪಕ್ಷವು 1.5 ಕೋಟಿಗೂ ಹೆಚ್ಚು ನೋಂದಾಯಿತ ಸದಸ್ಯರಿದ್ದಾರೆ ಎಂದು ಹೇಳಿಕೊಂಡಿತ್ತು. ಮೊದಲ ಬಾರಿಗೆ ಮತ ಚಲಾಯಿಸುವ ಯುವಜನತೆ ಮತ್ತು ಹೊಸ ಮತದಾರರ ನಡುವೆ ವಿಜಯ್ ಅವರಿಗೆ ಅಪಾರ ಬೆಂಬಲವಿದೆ ಎಂಬುದನ್ನು ಇದು ತೋರಿಸಿತು. ಪಕ್ಷವು ಧರ್ಮನಿರಪೇಕ್ಷತೆ, ಸಾಮಾಜಿಕ ನ್ಯಾಯ, ಆಡಳಿತ ಪಾರದರ್ಶಕತೆ ಮತ್ತು “ಸಮಾನತೆಯ ರಾಜಕೀಯ” ಎಂಬ ತತ್ವಗಳ ಮೇಲೆ ತನ್ನನ್ನು ಸ್ಥಾಪಿಸಿತು.
ವಿಜಯ್ ಟಿವಿಕೆಯನ್ನು ಭ್ರಷ್ಟಾಚಾರ-ರಹಿತ ಮತ್ತು ಜಾತಿ-ರಹಿತ ಪರ್ಯಾಯವಾಗಿ ನಿರಂತರವಾಗಿ ಪ್ರಚಾರ ಮಾಡಿದರು. ಪಕ್ಷವು ಬಿಜೆಪಿಯನ್ನು ತನ್ನ ತತ್ವಶಾಸ್ತ್ರೀಯ ವಿರೋಧಿಯಾಗಿ ಮತ್ತು ಡಿಎಂಕೆಯನ್ನು ಪ್ರಮುಖ ರಾಜಕೀಯ ಪ್ರತಿಸ್ಪರ್ಧಿಯಾಗಿ ಬಿಂಬಿಸಿತು.
ಜೋಸೆಫ್ ವಿಜಯ್ ಚಂದ್ರಶೇಖರ್ ಅವರು ಚೆನ್ನೈನ ಚಿತ್ರರಂಗ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಎಸ್ ಎ ಚಂದ್ರಶೇಖರ್ ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದು, ತಾಯಿ ಶೋಭಾ ಚಂದ್ರಶೇಖರ್ ಗಾಯಕಿಯಾಗಿದ್ದಾರೆ.
ಕ್ಯಾಥೋಲಿಕ್ ಕುಟುಂಬದಲ್ಲಿ ಬೆಳೆದ ವಿಜಯ್, 12ನೇ ವಯಸ್ಸಿನಲ್ಲಿ ದೀಕ್ಷಾಸ್ನಾನ ಪಡೆದರು. ತಂದೆ ಕ್ರೈಸ್ತರು ಮತ್ತು ತಾಯಿ ಹಿಂದೂ ಧರ್ಮೀಯರು. ಈ ಹಿನ್ನೆಲೆ ನಂತರ ಧಾರ್ಮಿಕ ಸೌಹಾರ್ದತೆಯ ಕುರಿತು ವಿಜಯ್ ಅವರ ಸಾರ್ವಜನಿಕ ನಿಲುವಿನಲ್ಲಿ ಪ್ರತಿಫಲಿಸಿತು. ಚರ್ಚ್ ಆಗಲಿ, ದೇವಸ್ಥಾನವಾಗಲಿ ಅಥವಾ ದರ್ಗಾ ಆಗಲಿ — ಎಲ್ಲೆಡೆ ಒಂದೇ ದೈವಿಕ ಶಕ್ತಿಯ ಉಪಸ್ಥಿತಿಯನ್ನು ನಾನು ಅನುಭವಿಸುತ್ತೇನೆ ಎಂದು ಅವರು ಒಮ್ಮೆ ಹೇಳಿದ್ದರು.
ಅವರು ಚೆನ್ನೈನ ವಿರುಗಂಬಕ್ಕಂನ ಬಾಲ ಲೋಕ್ ಮೆಟ್ರಿಕ್ಯುಲೇಷನ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಶಿಕ್ಷಕರು ಅವರನ್ನು ಶಿಸ್ತಿನ, ಶಾಂತ ಸ್ವಭಾವದ ಮತ್ತು ಕ್ರೀಡೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಎಂದು ನೆನಪಿಸಿಕೊಳ್ಳುತ್ತಾರೆ. ನಂತರ ಅವರು ಲೊಯೊಲಾ ಕಾಲೇಜಿನಲಿ ವಿಷುವಲ್ ಮೀಡಿಯಾ ಅಧ್ಯಯನಕ್ಕೆ ಸೇರಿದರು. ನಂತರ ಪೂರ್ಣಕಾಲಿಕ ನಟನೆಯನ್ನು ಆಯ್ಕೆ ಮಾಡಿಕೊಂಡು ಮಧ್ಯದಲ್ಲೇ ಶಿಕ್ಷಣ ತೊರೆದರು.
ನಾನು ಚಿತ್ರರಂಗ ಕುಟುಂಬದಲ್ಲಿ ಹುಟ್ಟಿದ್ದೇನೆ ಎಂದು ವಿಜಯ್ ಹಿಂದಿನ ಸಂದರ್ಶನದಲ್ಲಿ ಹೇಳಿದ್ದರು. ನನ್ನ ತಂದೆ ಆಗ ಜನಪ್ರಿಯ ನಿರ್ದೇಶಕರಾಗಿದ್ದರು. ಬಾಲನಟನಾಗಿ ಅವರ ಹಲವಾರು ಚಿತ್ರಗಳಲ್ಲಿ ನಟಿಸಿದ್ದೆ. ಸಿನೆಮಾವೇ ನನ್ನ ಭವಿಷ್ಯ ಎಂದು ನಿರ್ಧರಿಸಿದೆ ಎಂದು ಹೇಳಿಕೊಂಡಿದ್ದರು.
ವಿಜಯ್ ಮೊದಲ ಬಾರಿಗೆ 1984ರ ವೆಟ್ರಿ ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಂಡರು. 1992ರ ನಾಲಯ ತೀರ್ಪು ಚಿತ್ರದ ಮೂಲಕ ನಾಯಕನಾಗಿ ಪ್ರವೇಶಿಸಿದರು. ನಂತರ ಪೂವೆ ನಕ್ಕಗ ಚಿತ್ರದ ಯಶಸ್ಸು ಅವರನ್ನು ಕೌಟುಂಬಿಕ ಪ್ರೇಕ್ಷಕರ ಮನಸ್ಸಿನಲ್ಲಿ ಸ್ಥಿರಗೊಳಿಸಿತು. ಕದಲುಕ್ಕು ಮರಿಯಾಧೈ ಅವರಿಗೆ ರಾಜ್ಯ ಪ್ರಶಸ್ತಿಯನ್ನೂ ತಂದುಕೊಟ್ಟಿತು.
2014ರ ಕಟ್ಟಿ ಚಿತ್ರದಲ್ಲಿ ವಿಜಯ್ ರೈತರ ಆತ್ಮಹತ್ಯೆ ಮತ್ತು ಕಾರ್ಪೊರೇಟ್ ಶೋಷಣೆಯ ವಿಚಾರಗಳನ್ನು ಪ್ರಸ್ತಾಪಿಸಿದರು. ಮೆರ್ಸಲ್ ಆರೋಗ್ಯ ವ್ಯವಸ್ಥೆಯ ಭ್ರಷ್ಟಾಚಾರವನ್ನು ಟೀಕಿಸಿತು. ಬಿಗಿಲ್ ಮಹಿಳಾ ಕ್ರೀಡೆಗೆ ಬೆಂಬಲ ನೀಡಿದರೆ, ಸರ್ಕಾರ್ ಚುನಾವಣಾ ಅವ್ಯವಹಾರಗಳ ಬಗ್ಗೆ ಟೀಕಿಸಿತ್ತು.
ಕ್ರಮೇಣ ವಿಜಯ್ ಅವರ ಪರದೆಯ ವ್ಯಕ್ತಿತ್ವವು ಸಾಮಾನ್ಯ ಆಕ್ಷನ್ ಹೀರೋ ಪಾತ್ರವನ್ನು ಮೀರಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ರಕ್ಷಕ ನಾಯಕನ ರೂಪ ಪಡೆದುಕೊಂಡಿತು. ಚಿತ್ರಗಳ ಆಡಿಯೋ ರಿಲೀಸ್ ಸಮಾರಂಭಗಳಲ್ಲಿ ರಾಜಕೀಯ ಭಾಷಣಗಳು ಇಣುಕುತ್ತಿದ್ದವು. ಸಂಭಾಷಣೆಗಳಲ್ಲಿ ಆಡಳಿತ, ಭ್ರಷ್ಟಾಚಾರ ಮತ್ತು ಜನರ ಹಕ್ಕುಗಳ ಕುರಿತ ಸಂದೇಶಗಳನ್ನು ನೀಡುತ್ತಾ ಹೋದರು.
ವಿಜಯ್ ಅವರ ಅಭಿಮಾನಿ ಸಂಸ್ಕೃತಿ ಭಾರತೀಯ ಸಿನೆಮಾದ ಅತ್ಯಂತ ತೀವ್ರ ಅಭಿಮಾನಿಗಳ ಸಂಭ್ರಮಗಳಲ್ಲಿ ಒಂದಾಗಿತ್ತು. ಅವರ ಚಿತ್ರಗಳ ಮೊದಲ ದಿನದ ಮೊದಲ ಪ್ರದರ್ಶನ, ಮಧ್ಯರಾತ್ರಿ ಸಂಭ್ರಮ, ಭಾರಿ ಕಟ್‌ಔಟ್‌ಗಳು, ಹಾಲಿನ ಅಭಿಷೇಕಗಳು, ಡೊಳ್ಳು-ತಾಳ ಮತ್ತು ಮೆರವಣಿಗೆಗಳು ಸಾಮಾನ್ಯವಾಗಿದ್ದವು.
ಆದರೆ ಇತರ ಅಭಿಮಾನಿ ಸಂಘಟನೆಗಳಿಗಿಂತ ವಿಭಿನ್ನವಾಗಿ, ವಿಜಯ್ ಅವರ ಸಂಪರ್ಕ ಶಿಸ್ತುಬದ್ಧ ರಾಜಕೀಯ ಸಂಘಟನೆಯಾಗಿ ರೂಪಾಂತರಗೊಂಡಿತು.
ವಿಜಯ್ ಮಕ್ಕಳ್ ಇಯಕ್ಕಂ ಟಿವಿಕೆ ಪಕ್ಷದ ಅಡಿಪಾಯವಾಗಿ ಕಾರ್ಯನಿರ್ವಹಿಸಿತು. ಅಭಿಮಾನಿ ಬಳಗಗಳನ್ನು ಬೂತ್ ಮಟ್ಟದ ಜಾಲಗಳು, ಸಾಮಾಜಿಕ ಸೇವಾ ಘಟಕಗಳು ಮತ್ತು ಸ್ಥಳೀಯ ಸಂಪರ್ಕ ವೇದಿಕೆಗಳಾಗಿ ಪರಿವರ್ತಿಸಲಾಯಿತು. 2026ರ ಚುನಾವಣೆಯಲ್ಲಿ ಇದು ನಿರ್ಣಾಯಕ ಪಾತ್ರವಹಿಸಿತು.
ಗೋಟ್ ಚಿತ್ರದ ನಂತರ, ವಿಜಯ್ ತಮ್ಮ 69ನೇ ಚಿತ್ರ ಜನ ನಾಯಗನ್ ರಾಜಕೀಯಕ್ಕೆ ಸಂಪೂರ್ಣವಾಗಿ ತೊಡಗಿಕೊಳ್ಳುವ ಮೊದಲು ಅವರ ಕೊನೆಯ ಚಿತ್ರವಾಗಬಹುದು ಎಂದು ಘೋಷಿಸಿದರು. ಈ ಚಿತ್ರಕ್ಕೆ ಅವರಿಗೆ 275 ಕೋಟಿ ರೂಪಾಯಿ ಸಂಭಾವನೆ ದೊರೆತಿದೆ ಎಂಬ ವರದಿಗಳು, ಅವರು ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು ಎಂಬುದನ್ನು ತೋರಿಸುತ್ತದೆ.
ವಿಜಯ್ ಅವರ ಬೆಳವಣಿಗೆ ಎಂ ಕರುಣಾನಿಧಿ ಮತ್ತು ಜೆ ಜಯಲಲಿತಾ ಅವರ ಯುಗದ ನಂತರ ಪರಿವರ್ತನೆಯಲ್ಲಿರುವ ತಮಿಳುನಾಡಿನ ರಾಜಕೀಯದಲ್ಲಿ ದೊಡ್ಡ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ.
ಹಿಂದಿನ ನಟ-ರಾಜಕಾರಣಿಗಳಿಗಿಂತ ಭಿನ್ನವಾಗಿ, ವಿಜಯ್ ಕೇವಲ ತಮ್ಮ ಚಿತ್ರರಂಗದ ಕರಿಷ್ಮಾ ಮೇಲೆ ಅವಲಂಬಿಸದೆ, ತಳಮಟ್ಟದ ಸಂಘಟನೆ, ಸಮಸ್ಯೆ ಆಧಾರಿತ ರಾಜಕೀಯ ಸಂದೇಶ ಮತ್ತು ಯುವಜನಕೇಂದ್ರಿತ ಚಳವಳಿಯನ್ನು ಯಶಸ್ವಿಯಾಗಿ ಒಟ್ಟುಗೂಡಿಸಿದರು.
ಅವರ ಸರ್ಕಾರ ಯಶಸ್ವಿಯಾಗುತ್ತದೆಯೇ ಅಥವಾ ಸವಾಲುಗಳನ್ನು ಎದುರಿಸುತ್ತದೆಯೇ ಎಂಬುದು ತಮಿಳುನಾಡಿನ ರಾಜಕೀಯದ ಮುಂದಿನ ಹಂತವನ್ನು ನಿರ್ಧರಿಸಬಹುದು. ಆದರೆ ಒಂದಂತೂ ಇಲ್ಲಿ ಸ್ಪಷ್ಟ, ಜೋಸೆಫ್ ವಿಜಯ್ ಕೇವಲ ರಾಜಕೀಯಕ್ಕೆ ಬಂದ ಸಿನೆಮಾ ಸೂಪರ್‌ಸ್ಟಾರ್ ಅಲ್ಲ; ಇತ್ತೀಚಿನ ತಮಿಳುನಾಡಿನ ಇತಿಹಾಸದಲ್ಲಿನ ಅತ್ಯಂತ ಪರಿಣಾಮಕಾರಿ ರಾಜಕೀಯ ಬದಲಾವಣೆಯ ಶಿಲ್ಪಿಯಾಗಿ ಅವರು ಈಗಾಗಲೇ ಗುರುತಿಸಿಕೊಂಡಿದ್ದಾರೆ.