ಭೋಪಾಲ್: ಕುನೋ ರಾಷ್ಟ್ರೀಯ ಅಭಯಾರಣ್ಯಕ್ಕೆ ಆಫ್ರಿಕಾದ ಮತ್ತೆರಡು ಚೀತಾಗಳನ್ನು ಬಿಡುಗಡೆ ಮಾಡಲಾಗಿದ್ದು ಆ ಮೂಲಕ ಭಾರತದಲ್ಲಿನ ಒಟ್ಟು ಚೀತಾಗಳ ಸಂಖ್ಯೆ 53ರಷ್ಟಿದೆ.
ಮಧ್ಯ ಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಕುನೋ ರಾಷ್ಟ್ರೀಯ ಉದ್ಯಾನದ ಮುಕ್ತ ಅರಣ್ಯ ಪ್ರದೇಶಕ್ಕೆ ಎರಡು ಹೆಣ್ಣು ಚೀತಾಗಳನ್ನು ಬಿಡುಗಡೆ ಮಾಡುವ ಮೂಲಕ ಚೀತಾ ಪುನರ್ವಸತಿ ಯೋಜನೆಗೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ವನ್ಯಜೀವಿ ತಜ್ಞರು ಉಪಸ್ಥಿತರಿದ್ದರು.
ಚೀತಾಗಳನ್ನು ಸಹಜ ವಾತಾವರಣದಲ್ಲಿ ಬದುಕಲು ಮತ್ತು ಬೇಟೆಯಾಡಲು ಅನುಕೂಲವಾಗುವಂತೆ ವಿಶೇಷ ಮೇಲ್ವಿಚಾರಣೆಯೊಂದಿಗೆ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.
ಭಾರತದಲ್ಲಿ ಚೀತಾಗಳನ್ನು ಮರುಸ್ಥಾಪಿಸುವ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಹಲವು ಚೀತಾಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತಿದೆ. ಯೋಜನೆಯ ಉದ್ದೇಶ ದೇಶದಲ್ಲಿ ಚೀತಾ ಜನಸಂಖ್ಯೆಯನ್ನು ಪುನರುಜ್ಜೀವನಗೊಳಿಸುವುದಾಗಿದೆ.
ಈ ವೇಳೆ ಮಾತನಾಡಿದ ಮಧ್ಯ ಪ್ರದೇಶ ಸಿಎಂ ಮೋಹನ್ ಯಾದವ್ ಈ ಕಾರ್ಯಕ್ರಮವನ್ನು ವನ್ಯಜೀವಿ ಸಂರಕ್ಷಣೆಯ ದಿಕ್ಕಿನಲ್ಲಿ ಐತಿಹಾಸಿಕ ಹೆಜ್ಜೆ ಎಂದು ಬಣ್ಣಿಸಿದರು. ಎರಡು ಹೆಣ್ಣು ಚೀತಾಗಳನ್ನು Kuno National Park ಅರಣ್ಯದ ಮುಕ್ತ ಪ್ರದೇಶಕ್ಕೆ ಬಿಡುಗಡೆ ಮಾಡಿದ ಬಳಿಕವೂ ಭಾರತದಲ್ಲಿನ ಚೀತಾಗಳ ಒಟ್ಟು ಸಂಖ್ಯೆ ಸುಮಾರು 53 ಆಗಿಯೇ ಉಳಿದಿದೆ.
ಈ ಎರಡು ಚೀತಾಗಳು ಈಗಾಗಲೇ ಭಾರತದ ‘ಪ್ರಾಜೆಕ್ಟ್ ಚೀತಾ’ ಯೋಜನೆಯ ಭಾಗವಾಗಿದ್ದು, ಬಿಡುಗಡೆಗಿಂತ ಮೊದಲು ಅವುಗಳನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಆದ್ದರಿಂದ, ಅವುಗಳನ್ನು ಕಾಡಿಗೆ ಬಿಡುವುದರಿಂದ ಚೀತಾಗಳ ಒಟ್ಟು ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ.