ನಾಸಿಕ್: ಮಹಾರಾಷ್ಟ್ರದ ನಾಸಿಕ್ ಜಿಲ್ಲೆ ಟಾಟಾ ಕನ್ಸಲ್ಟೆನ್ಸಿ ಸಂಸ್ಥೆಯಲ್ಲಿ ನಡೆದಿದ್ದ ಕಾರ್ಪೋರೆಟ್ ಜಿಹಾದ್ ಪ್ರಕರಣದ ಪ್ರಮುಖ ಆರೋಪಿ ನಿದಾಖಾನ್ ಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಟಿಸಿಎಸ್ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಹಾಗೂ ಬಲವಂತದ ಮತಾಂತರ ಪ್ರಕರಣದ ಆರೋಪಿ ನಿದಾ ಖಾನ್ ಳನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ K G Joshi ಅವರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಆರೋಪಿ ನಿದಾಖಾನ್ ಳನ್ನು ನಾಶಿಕ್ ನ್ಯಾಯಾಲಯ ಸೋಮವಾರ ಮೇ 24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಮೇ 7ರಂದು ಛತ್ರಪತಿ ಸಂಭಾಜಿ ನಗರದಲ್ಲಿ ಬಂಧಿಸಲ್ಪಟ್ಟ ನಿದಾ ಖಾನ್, ಪ್ರಕರಣ ಬಹಿರಂಗವಾದ ನಂತರದಿಂದ ತಲೆಮರೆಸಿಕೊಂಡಿದ್ದಳು. ಟಿಸಿಎಸ್‌ನ ನಾಸಿಕ್ ಘಟಕದ ಸಿಬ್ಬಂದಿಯಿಂದ ಬಂದ ದೂರುಗಳ ನಂತರ ಈ ಪ್ರಕರಣ ಬೆಳಕಿಗೆ ಬಂದಿತ್ತು.
ಗರ್ಭಿಣಿಯಾಗಿರುವ ನಿದಾ ಖಾನ್ ಅವರನ್ನು ವಿಚಾರಣೆಯ ವೇಳೆ ಪೊಲೀಸರು ಮತ್ತಷ್ಟು ಕಸ್ಟಡಿ ಕೇಳದ ಕಾರಣ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ಪ್ರಸ್ತುತ ಆರೋಪಿ ನಿದಾಖಾನ್ ಳನ್ನು ನಾಸಿಕ್ ರೋಡ್ ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿದೆ.
ಅಟ್ರಾಸಿಟಿ ಕೇಸ್
ಲೈಂಗಿಕ ಕಿರುಕುಳ ಮತ್ತು ಮಾನಹಾನಿಗೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತಾ ವಿಧಿಗಳ ಜೊತೆಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿಗೂ ಪ್ರಕರಣ ದಾಖಲಿಸಲಾಗಿದೆ. ದೂರುದಾರರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಈ ವಿಷಯ ತಿಳಿದಿದ್ದರೂ ಅವರನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಲು ಪ್ರಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಸಿಕ್ ಪೊಲೀಸರ ವಿಶೇಷ ತನಿಖಾ ತಂಡ (SIT) ಒಟ್ಟು ಒಂಬತ್ತು FIRಗಳನ್ನು ತನಿಖೆ ಮಾಡುತ್ತಿದೆ. ಅವುಗಳಲ್ಲಿ ಒಂದು ಪ್ರಕರಣ ಡಿಯೋಲಾಲಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದರೆ, ಎಂಟು ಪ್ರಕರಣಗಳು ಮುಂಬೈ ನಾಕಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ದೂರುದಾರರು ಶೋಷಣೆ, ಬಲವಂತದ ಇಸ್ಲಾಂ ಮತಾಂತರ ಯತ್ನ, ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಲೈಂಗಿಕ ಕಿರುಕುಳ ಮತ್ತು ಮಾನಸಿಕ ಹಿಂಸೆ ಆರೋಪಗಳನ್ನು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಯೋಲಾಲಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ ನಂತರ, 27 ವರ್ಷದ ನಿದಾ ಖಾನ್ ಕಳೆದ ತಿಂಗಳು ಸೆಷನ್ಸ್ ನ್ಯಾಯಾಲಯದಲ್ಲಿ ಮುಂಗಡ ಜಾಮೀನು ಅರ್ಜಿ ಸಲ್ಲಿಸಿದ್ದರು. ತಾವು ನಿರ್ದೋಷಿಯಾಗಿದ್ದು, ಮೂರು ತಿಂಗಳ ಗರ್ಭಿಣಿಯಾಗಿರುವುದಾಗಿ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಆದರೆ ಮೇ 2ರಂದು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ, “ಬಾಧಿತೆಯ ಮನೋಭಾವವನ್ನು ವ್ಯವಸ್ಥಿತವಾಗಿ ಬದಲಾಯಿಸುವ ಯೋಜನೆ ನಡೆದಿರುವಂತೆ ಕಾಣುತ್ತದೆ” ಎಂದು ಅಭಿಪ್ರಾಯಪಟ್ಟಿತ್ತು.
ಅಮಾನತುಗೊಳಿಸಿದ್ದ ಟಿಸಿಎಸ್
ವರದಿಗಳ ಪ್ರಕಾರ, ನಾಶಿಕ್‌ನ ಟಿಸಿಎಸ್ ಕಚೇರಿಯಲ್ಲಿ ಲೈಂಗಿಕ ಕಿರುಕುಳ, ಕಚೇರಿ ದುರುಳತನ ಹಾಗೂ ಧಾರ್ಮಿಕ ಮತಾಂತರಕ್ಕೆ ಒತ್ತಾಯಿಸಿದ ಆರೋಪಗಳು ಹೊರಬಂದ ನಂತರ ಟಿಸಿಎಸ್ ಸಂಸ್ಥೆ ನಿದಾ ಖಾನ್ ಅವರನ್ನು ಅಮಾನತುಗೊಳಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಎಫ್‌ಐಆರ್‌ಗಳು ದಾಖಲಾಗಿದ್ದು, ಇತರ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.