ಚೆನ್ನೈ: ತಮಿಳುನಾಡು ವಿಧಾನಸಭೆಯ ಸ್ಪೀಕರ್ ಆಗಿ ಜೆ.ಸಿ.ಡಿ ಪ್ರಭಾಕರ್ ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಳೆ ವಿಶ್ವಾಸಮತ ಯಾಚಿಸಲು ಸಿಎಂ ವಿಜಯ್ ಸಜ್ಜಾಗುತ್ತಿರುವಂತೆಯೇ ವೇಲುಮಣಿ-ಷಣ್ಮುಗಂ ನೇತೃತ್ವದ ಎಐಎಡಿಎಂಕೆ ಬಣವು ಆಡಳಿತಾರೂಢ ಟಿವಿಕೆಗೆ ಬೆಂಬಲ ಘೋಷಿಸಿದೆ. ಕಳೆದ ದಶಕದಲ್ಲಿ ಪಕ್ಷದ ಚುನಾವಣಾ ಹಿನ್ನಡೆಯೇ ತಮ್ಮ ನಿಲುವಿಗೆ ಕಾರಣ ಎಂದು ಷಣ್ಮುಗಂ ಹೇಳಿದ್ದಾರೆ.
ಇಂದು ಬೆಳ್ಳಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಷಣ್ಮುಗಂ,. ನಾವು ಪಕ್ಷವನ್ನು ಪುನರು ಸಂಘಟಿಸಬೇಕಾಗಿದೆ. ಎಐಎಡಿಎಂಕೆಯ ಭವಿಷ್ಯದ ಬಗ್ಗೆ ಚರ್ಚಿಸಬೇಕಾಗಿದೆ ಎಂದರು. ಆದಾಗ್ಯೂ, ಪಕ್ಷವನ್ನು ವಿಭಜಿಸುವ ಯಾವುದೇ ಯೋಜನೆಗಳಿಲ್ಲ ಎಂದು ಅವರು ತಿಳಿಸಿದರು.
ಕಳೆದ ವಾರ ಸರ್ಕಾರ ರಚನೆ ಕುರಿತಂತೆ ಮಾತುಕತೆ ನಡೆಯುತ್ತಿದ್ದಾಗ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ವಿಜಯ್ ಮತ್ತು ಟಿವಿಕೆ ಜೊತೆಗಿ ಮೈತ್ರಿಯನ್ನು ತಿರಸ್ಕರಿಸಿದ್ದರು. ಡಿಎಂಕೆ ಜೊತೆಗೆ ಮೈತ್ರಿಗೆ ಒಲವು ತೋರಿದ್ದರು. ಇದೇ ವಿಚಾರವಾಗಿ ಎಐಎಡಿಎಂಕೆ ಛಿದ್ರವಾಗಿದ್ದು, ಇದೀಗ ಪಳನಿಸ್ವಾಮಿ ವಿರುದ್ಧ ಸಿಡಿದೆದ್ದಿರುವ ಷಣ್ಮುಗಂ ನೇತೃತ್ವದ ಬಣ ಟಿವಿಕೆಗೆ ಬೆಂಬಲ ಘೋಷಿಸಿದೆ.
ಪಳನಿಸ್ವಾಮಿ ಎಐಎಡಿಎಂಕೆ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿ ರಾಜಕೀಯ ಎದುರಾಳಿ ಡಿಎಂಕೆ ಜೊತೆಗೆ ಮೈತ್ರಿಗೆ ಮುಂದಾಗುವ ಮೂಲಕ ಪಕ್ಷವನ್ನು ನಾಶಪಡಿಸಲು ಮುಂದಾಗಿದ್ದರು ಎಂದು ಷಣ್ಮುಗಂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ವಿಧಾನಸಭೆಯಲ್ಲಿ ಸಭಾನಾಯಕರಾಗಲು ಯೋಜಿಸುತ್ತಿದ್ದ ಪಳನಿಸ್ವಾಮಿಗೆ ಹಿನ್ನಡೆ ಆದಂತಾಗಿದೆ.