ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಗುರುವಾರ ವಕೀಲರ ಗೌನ್ ಧರಿಸಿ ಕೋಲ್ಕತ್ತಾ ಹೈಕೋರ್ಟ್‌ಗೆ ಆಗಮಿಸಿದರು. ಅವರೊಂದಿಗೆ ಟಿಎಂಸಿ ಲೋಕಸಭಾ ಸಂಸದ ಕಲ್ಯಾಣ್ ಬ್ಯಾನರ್ಜಿ ಹಾಗೂ ಅವರ ಪುತ್ರ ಮತ್ತು ವಕೀಲರಾದ ಶಿರ್ಷಣ್ಯ ಬಂಧೋಪಾಧ್ಯಾಯ ಕೂಡ ಇದ್ದರು. ಟಿಎಂಸಿ ನಾಯಕ ಹಾಗೂ ವಕೀಲ ಬೈಶ್ವನರ್ ಚಟರ್ಜಿ ಸಹ ಅವರ ಜೊತೆಗಿದ್ದರು.
ಮೂಲಗಳ ಪ್ರಕಾರ, ಈ ಬಾರಿಯ ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ದಾಖಲಿಸಿರುವ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿ ವಾದ ಮಂಡಿಸುವ ಸಾಧ್ಯತೆಯಿದೆ. ಇದಕ್ಕೂ ಮೊದಲು ಏಪ್ರಿಲ್‌ನಲ್ಲಿ ಅವರು ಸುಪ್ರೀಂ ಕೋರ್ಟ್ ಪೀಠದ ಮುಂದೆ ಹಾಜರಾಗಿ ಚುನಾವಣಾ ಆಯೋಗ ನಡೆಸಿದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಸವಾಲು ಹಾಕಿದ್ದರು. ವಿಧಾನಸಭಾ ಚುನಾವಣೆಗೆ ಮುನ್ನ ಚುನಾವಣಾ ಆಯೋಗ ಪಶ್ಚಿಮ ಬಂಗಾಳವನ್ನು ಗುರಿಯಾಗಿಸಿದೆ ಎಂದು ಅವರು ವಾದಿಸಿದ್ದರು.
ಕಾಂಗ್ರೆಸ್ ಪಕ್ಷದಲ್ಲಿದ್ದ ಅವಧಿಯಲ್ಲಿ ಮಮತಾ ಬ್ಯಾನರ್ಜಿ ಕನಿಷ್ಠ ಮೂರು ಪ್ರಕರಣಗಳಲ್ಲಿ ವಕೀಲರಾಗಿ ನ್ಯಾಯಾಲಯದಲ್ಲಿ ಹಾಜರಾಗಿದ್ದರು.
ಮಮತಾ ಬ್ಯಾನರ್ಜಿ 1982ರಲ್ಲಿ ಜೋಗೇಶ್ ಚಂದ್ರ ಕಾಲೇಜ್ ಆಫ್ ಲಾನಿಂದ ಕಾನೂನು ಪದವಿ ಪಡೆದರು. ಆಗಲೇ ಅವರು ವಿದ್ಯಾರ್ಥಿ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ಛಾತ್ರ ಪರಿಷತ್ ಪರವಾಗಿ ಪ್ರಚಾರ ನಡೆಸುತ್ತಿದ್ದರು.
1983ರಲ್ಲಿ ಅವರು ಯುವ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಒಂದು ವರ್ಷದ ಬಳಿಕ ದಕ್ಷಿಣ ದಿನಾಜ್‌ಪುರದ ಕುಮಾರ್ಗಂಜ್‌ನಲ್ಲಿ ಶಾಲಾ ಮುಖ್ಯೋಪಾಧ್ಯಾಯರ ಹತ್ಯೆಯ ಬಳಿಕ ರಾಜಕೀಯ ಉದ್ವಿಗ್ನತೆ ಹೆಚ್ಚಾಯಿತು. ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ ಯುವ ಕಾಂಗ್ರೆಸ್ ಕೂಡ ಚಳವಳಿಯಲ್ಲಿ ಭಾಗವಹಿಸಿತ್ತು. ಅದನ್ನು ಮಮತಾ ಬ್ಯಾನರ್ಜಿ ಮುನ್ನಡೆಸಿದ್ದರು.
ಪ್ರತಿಭಟನೆಗಳ ವೇಳೆ ಹಲವಾರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದಾಗ, ಮಮತಾ ಬ್ಯಾನರ್ಜಿ ಅವರ ಪರ ವಕೀಲರಾಗಿ ನಿಂತು ಬಲುರ್ಘಾಟ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.
1984ರ ಆ ಪ್ರಕರಣವನ್ನು ಸ್ಮರಿಸಿದ ಮಾಜಿ ಯುವ ಕಾಂಗ್ರೆಸ್ ನಾಯಕ ಶಂಕರ್ ಚಕ್ರವರ್ತಿ, ಬಳಿಕ ಮಮತಾ ಸರ್ಕಾರದಲ್ಲಿ ಸಚಿವರಾಗಿದ್ದ ಅವರು, “ವಕೀಲರ ಕಪ್ಪು ಗೌನ್ ವ್ಯವಸ್ಥೆ ಮಾಡಲು ಮಮತಾ ಬ್ಯಾನರ್ಜಿ ತಮ್ಮನ್ನು ಕೇಳಿದ್ದರು ಎಂದು ಹೇಳುತ್ತಾರೆ.
ಅವರಿಗೆ ಕಾನೂನು ಪದವಿ ಇದೆ ಎಂದು ಹೇಳಿ ಸ್ವತಃ ನ್ಯಾಯಾಲಯದಲ್ಲಿ ವಾದ ಮಂಡಿಸಿದಾಗ ತಾವು ಅಚ್ಚರಿಪಟ್ಟಿದ್ದಾಗಿ ನೆನಪಿಸಿಕೊಂಡಿದ್ದಾರೆ. ಅಂತಿಮವಾಗಿ ನ್ಯಾಯಾಲಯ ಬಂಧಿತ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಜಾಮೀನು ಮಂಜೂರು ಮಾಡಿತ್ತು.
1993ರ ಜುಲೈ 21ರಂದು ಮತದಾರರ ಫೋಟೋ ಗುರುತಿನ ಚೀಟಿ ಕಡ್ಡಾಯಗೊಳಿಸುವಂತೆ ಆಗ್ರಹಿಸಿ ಕೋಲ್ಕತ್ತಾದ ರೈಟರ್ಸ್ ಬಿಲ್ಡಿಂಗ್‌ಗೆ ನಡೆದ ಪ್ರತಿಭಟನೆ ಮೆರವಣಿಗೆಯಲ್ಲಿ ಹಿಂಸಾಚಾರ ಉಂಟಾಗಿತ್ತು. ಪೊಲೀಸರು ಆಶ್ರುವಾಯು ಮತ್ತು ಲಾಠಿ ಚಾರ್ಜ್ ನಡೆಸಿದ ಬಳಿಕ ಗುಂಡಿನ ದಾಳಿ ನಡೆಸಿದ್ದರಿಂದ 13 ಮಂದಿ ಮೃತಪಟ್ಟಿದ್ದರು. ತೃಣಮೂಲ ಕಾಂಗ್ರೆಸ್ ಈಗಲೂ ಆ ದಿನವನ್ನು ‘ಶಹೀದ್ ದಿವಸ್’ ಎಂದು ಆಚರಿಸುತ್ತದೆ.
ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಮಾರು 40 ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಅವರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು.
1996ರ ಜುಲೈನಲ್ಲಿ ಮಮತಾ ಬ್ಯಾನರ್ಜಿ ಕೋಲ್ಕತ್ತಾದ ಬ್ಯಾಂಕ್ಷಾಲ್ ನ್ಯಾಯಾಲಯದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ ಬಂಧಿತ ಕಾಂಗ್ರೆಸ್ ಕಾರ್ಯಕರ್ತರ ಪರ ಜಾಮೀನು ಕೋರಿದ್ದರು.
ಮಾಜಿ ರಾಜ್ಯಸಭಾ ಸಂಸದ ಹಾಗೂ ವಕೀಲ ಶೇಭಾಶಿಶ್ ಭಟ್ಟಾಚಾರ್ಯ ಕೂಡ 1990ರ ದಶಕದ ಮತ್ತೊಂದು ಘಟನೆಯನ್ನು ಸ್ಮರಿಸಿದ್ದಾರೆ. ರೀಜೆಂಟ್ ಪಾರ್ಕ್ ಪೊಲೀಸ್ ಠಾಣೆ ಧ್ವಂಸ ಪ್ರಕರಣದ ಬಳಿಕ ದಿವಂಗತ ನಾಯಕ ಪಂಕಜ್ ಬ್ಯಾನರ್ಜಿ ಸೇರಿದಂತೆ ಹಲವು ಕಾರ್ಯಕರ್ತರನ್ನು ಬಂಧಿಸಿದಾಗ, ಅಲಿಪುರ ನ್ಯಾಯಾಲಯದಲ್ಲಿ ಮಮತಾ ಬ್ಯಾನರ್ಜಿ ಜಾಮೀನು ಅರ್ಜಿಯ ಪರ ವಾದ ಮಂಡಿಸಿದ್ದರು ಎನ್ನುತ್ತಾರೆ.
1997ರ ಜುಲೈನಲ್ಲಿ ಗುಪ್ತಿಪಾರಾದಲ್ಲಿ ನಡೆದ ಪೊಲೀಸ್ ಗುಂಡಿನ ದಾಳಿಯಲ್ಲಿ ಮೃತಪಟ್ಟ ಹಲಧರ್ ಮಂಡೋಲ್ ಕುಟುಂಬದ ಪರವಾಗಿ ಮಮತಾ ಬ್ಯಾನರ್ಜಿ ಚಿನ್ಸುರಾ ಜಿಲ್ಲಾ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.