ನವದೆಹಲಿ: ಭಾರತದಲ್ಲಿ ತನ್ನ ಮೂಲ X ಹ್ಯಾಂಡಲ್ ಅನ್ನು ತಡೆಹಿಡಿದ ನಂತರ, "ಜಿರಳೆಗಳು ಎಂದಿಗೂ ಸಾಯುವುದಿಲ್ಲ" ಎಂಬ ಟ್ಯಾಗ್‌ಲೈನ್‌ನೊಂದಿಗೆ ಮತ್ತೆ ಬಂದ ಕಾಕ್ರೋಚ್ ಜನತಾ ಪಾರ್ಟಿ(CJP)ಯ, ವಿಡಂಬನಾತ್ಮಕ ಸಾಮಾಜಿಕ ಮಾಧ್ಯಮ ಖಾತೆಯು ಶುಕ್ರವಾರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಅಭಿಯಾನವನ್ನು ಪ್ರಾರಂಭಿಸಿದೆ.
ಸಿಜೆಪಿಯ ಹೊಸ ಎಕ್ಸ್ ಹ್ಯಾಂಡಲ್ - "ಜಿರಳೆ ಮತ್ತೆ ಬಂದಿದೆ" - ಮತ್ತು ಅದರ ಇನ್‌ಸ್ಟಾಗ್ರಾಮ್ ವೇದಿಕೆಯ ಮೂಲಕ ಮುನ್ನಡೆಸಿದ ಈ ಅಭಿಯಾನವು ಶಿಕ್ಷಣ ಕ್ಷೇತ್ರದಲ್ಲಿನ ವ್ಯವಸ್ಥಿತ ವೈಫಲ್ಯಗಳನ್ನು, ವಿಶೇಷವಾಗಿ NEET-UG 2026 "ಪೇಪರ್-ಲೀಕ್" ವಿವಾದದ ಸುತ್ತಲಿನ ಕಳವಳಗಳನ್ನು ಕೇಂದ್ರೀಕರಿಸುತ್ತದೆ ಎಂದು ಹೇಳಿದೆ.
ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸುವ ಆನ್‌ಲೈನ್ ಅರ್ಜಿಯನ್ನು ಬೆಂಬಲಿಸುವಂತೆ ಫಾಲೋವರ್ಸ್ ಗಳಿಗೆ ಕರೆ ನೀಡಿದ್ದಾರೆ.
"ಜಿರಳೆಗಳು ಹೇಗಿದ್ದೀರಿ? ನೀವು ಇಂಟರ್ನೆಟ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೀರಿ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಈಗ ನಿಜವಾದ ಕೆಲಸ ಮಾಡುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಇಂದು, ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಅರ್ಜಿಯನ್ನು ಪ್ರಾರಂಭಿಸುತ್ತಿದ್ದೇವೆ" ಎಂದು ದಿಪ್ಕೆ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
ಹೊಣೆಗಾರಿಕೆಗೆ ಕರೆ ನೀಡುತ್ತಾ, ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳು ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ ಎಂದು ಅವರು ಹೇಳಿದರು.
"ವ್ಯವಸ್ಥೆಯನ್ನು ಹೊಣೆಗಾರರನ್ನಾಗಿ ಮಾಡುವ ಸಮಯ ಈಗ ಬಂದಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಿದ್ದು ವ್ಯವಸ್ಥೆಯ ತಪ್ಪಿನಿಂದಲೇ, ನೀಟ್ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು ವ್ಯವಸ್ಥೆಯ ತಪ್ಪಿನಿಂದಲೇ. ಏನೇ ಆದರೂ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕಾಗುತ್ತದೆ" ಎಂದು ಅವರು ಹೇಳಿದ್ದಾರೆ.
ಮೇ 3 ರಂದು ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ರಾಷ್ಟ್ರೀಯ ಅರ್ಹತಾ-ಪ್ರವೇಶ ಪರೀಕ್ಷೆ(ಪದವಿಪೂರ್ವ)ಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಇತ್ತೀಚೆಗೆ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿದೆ. ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ.