ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹಲವು ದಿನಗಳಿಂದ ಸಿಎಂ ಅಧಿಕಾರ ಹಸ್ತಾಂತರದ ಕುರಿತು ಶೀತಲ ಸಮರ ನಡೆಯುತ್ತಿದ್ದು, ಪಂಚರಾಜ್ಯಗಳ ಚುನಾವಣೆ ಬಳಿಕ ಹೈಕಮಾಂಡ್ ಈ ಕುತೂಹಲಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಮುಂದಾದಂತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ಗೆ ಕಾಂಗ್ರೆಸ್ ಹೈಕಮಾಂಡ್ನಿಂದ ದೆಹಲಿಗೆ ಬರುವಂತೆ ಬುಲಾವ್ ಬಂದಿದೆ. ಮೇ 26ರಂದು ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಮೇಲ್ನೋಟಕ್ಕೆ ರಾಜ್ಯಸಭಾ ಚುನಾವಣೆ ಸಂಬಂಧ ಚರ್ಚಿಸಲು ಸಿಎಂ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ. ಆದರೆ, ಅಧಿಕಾರ ಹಂಚಿಕೆ ವಿಚಾರ, ಸಂಪುಟ ಪುನಾರಚನೆಯ ವಿಷಯಗಳೂ ಚರ್ಚೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಕೇರಳ ಸೇರಿ ಪಂಚ ರಾಜ್ಯಗಳ ಚುನಾವಣೆಯ ಬಳಿಕ, ಸಂಪುಟ ವಿಸ್ತರಣೆ ಹಾಗೂ ನಾಯಕತ್ವ ಬದಲಾವಣೆ ವಿಚಾರದಲ್ಲಿ ಗಮನ ಹರಿಸುವುದಾಗಿ ಹೈಕಮಾಂಡ್ ಹೇಳಿತ್ತು. ಈಗ ಸಿಎಂ, ಡಿಸಿಎಂಗೆ ದೆಹಲಿಗೆ ಬರುವಂತೆ ಸೂಚನೆ ನೀಡಲಾಗಿರುವುದು ರಾಜ್ಯ ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸಿದೆ.
ಮೇ 26 ರ ಮಂಗಳವಾರ ಉಭಯ ನಾಯಕರು ದೆಹಲಿಗೆ ತೆರಳಲಿದ್ದಾರೆ. ಅಂದು ರಾಹುಲ್ ಗಾಂಧಿ ಅವರನ್ನ ಭೇಟಿಯಾಗಲಿದ್ದು, ಕುರ್ಚಿ ಕದನಕ್ಕೆ ಬ್ರೇಕ್ ಬೀಳಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.