ನವದೆಹಲಿ: ನೀಟ್ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಆರೋಪಿ ಶುಭಂ ಖೈರ್ನಾರ್ ಅವರನ್ನು ಜೂನ್ 6 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ದೆಹಲಿ ನ್ಯಾಯಾಲಯ ಭಾನುವಾರ ಆದೇಶಿಸಿದೆ.
ವಿಶೇಷ ನ್ಯಾಯಾಧೀಶೆ ರುಚಿ ಅಗರ್ವಾಲ್ ಅಸ್ರಾನಿ ಅವರು ಆರೋಪಿಯ ನ್ಯಾಯಾಂಗ ಬಂಧನ ಕೋರಿ ಕೇಂದ್ರ ತನಿಖಾ ದಳ (ಸಿಬಿಐ) ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿದ್ದಾರೆ.
ಪರೀಕ್ಷೆ ಪ್ರಾರಂಭವಾಗುವ ಮೊದಲೇ ಖೈರ್ನಾರ್ ಸೇರಿದಂತೆ ಇತರ ಆರೋಪಿಗಳು ನೀಟ್-ಯುಜಿ 2026ರ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ 'ಸಕ್ರಿಯವಾಗಿ' ಭಾಗಿಯಾಗಿದ್ದರು ಎಂದು ತನಿಖಾ ಸಂಸ್ಥೆ ಹೇಳಿದೆ.
ಸಿಬಿಐ ತನ್ನ ರಿಮಾಂಡ್ ಪತ್ರಿಕೆಯಲ್ಲಿ, 'ತನಿಖೆ ನಡೆಸುವ ಉದ್ದೇಶಕ್ಕಾಗಿ, ಬಂಧಿತ ಆರೋಪಿಗಳು ಸಾಕ್ಷ್ಯಗಳನ್ನು ಹಾಳು ಮಾಡುವುದನ್ನು ಮತ್ತು ತನಿಖೆಗೆ ಸಂಬಂಧಿಸಿದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದನ್ನು ತಡೆಯಲು ನ್ಯಾಯಾಂಗ ಬಂಧನದಲ್ಲಿರಬೇಕಾಗುತ್ತದೆ' ಎಂದು ಹೇಳಿದೆ.
'ಆರೋಪಿಗಳು ಪರಾರಿಯಾಗುವುದನ್ನು, ಭೌತಿಕ ಅಥವಾ ಡಿಜಿಟಲ್ ಸಾಕ್ಷ್ಯಗಳನ್ನು ನಾಶಪಡಿಸುವುದನ್ನು ಮತ್ತು 'ಪ್ರಶ್ನೆ ಪತ್ರಿಕೆಗಳ ಸೋರಿಕೆಯನ್ನು ಒಳಗೊಂಡ ಇದೇ ರೀತಿಯ ಮತ್ತಷ್ಟು ಅಪರಾಧಗಳನ್ನು ಮಾಡುವುದನ್ನು' ತಡೆಯಲು ನ್ಯಾಯಾಂಗ ಬಂಧನ ಅಗತ್ಯವಾಗಿದೆ ಎಂದು ಹೇಳಿದೆ.
ಪ್ರಕರಣವು ಸದ್ಯ ತನಿಖೆಯ ಆರಂಭಿಕ ಹಂತದಲ್ಲಿದೆ ಮತ್ತು ಪ್ರಕರಣದ ಹಿತದೃಷ್ಟಿಯಿಂದ ನ್ಯಾಯಾಂಗ ಬಂಧನ ಅಗತ್ಯವಿದೆ. ಪ್ರಕರಣದ ಬೆಳವಣಿಗೆಗಳನ್ನು ಅವಲಂಬಿಸಿ, ಕಾನೂನು ನಿಬಂಧನೆಗಳ ಪ್ರಕಾರ, ತನಿಖೆಯಲ್ಲಿ ಮತ್ತೊಮ್ಮೆ (ಖೈರ್ನಾರ್) ಪೊಲೀಸ್ ಕಸ್ಟಡಿಗೆ ಅಗತ್ಯವಾಗಬಹುದು' ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ.
ಇದಕ್ಕೂ ಮೊದಲು, ಮೇ 14 ರಂದು, ನ್ಯಾಯಾಲಯವು ಖೈರ್ನಾರ್ ಮತ್ತು ಇತರ ನಾಲ್ವರನ್ನು ಏಳು ದಿನಗಳ ಸಿಬಿಐ ಕಸ್ಟಡಿಗೆ ಕಳುಹಿಸಿತ್ತು. ಹಣಕಾಸಿನ ಲಾಭಕ್ಕಾಗಿ ಗೌಪ್ಯ ಪರೀಕ್ಷಾ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುವ ಮತ್ತು ಪ್ರಸಾರ ಮಾಡುವಲ್ಲಿ 'ಸಂಘಟಿತ ಗ್ಯಾಂಗ್' ಭಾಗಿಯಾಗಿತ್ತು ಎನ್ನಲಾಗಿದೆ.
2026ರ ನೀಟ್-ಯುಜಿ ಪ್ರಶ್ನೆಪತ್ರಿಕೆಗಳನ್ನು ಮಾರಾಟ ಮಾಡಿದ ಇತರ ಸಹ-ಆರೋಪಿಗಳನ್ನು ಗುರುತಿಸಲು ಮತ್ತು ಬಂಧಿಸಲು ಆರೋಪಿಯನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ ಎಂದು ಸಿಬಿಐ ಹೇಳಿದ ನಂತರ, ಮೇ 20 ರಂದು ಖೈರ್ನಾರ್ ಅವರ ಕಸ್ಟಡಿ ವಿಚಾರಣೆಯನ್ನು ಐದು ದಿನಗಳವರೆಗೆ ವಿಸ್ತರಿಸಲಾಯಿತು.
'ಪ್ರಶ್ನೆ ಪತ್ರಿಕೆ ಸೋರಿಕೆ ಜಾಲ'ಕ್ಕೆ ಸಂಬಂಧಿಸಿದ ಸಂವಹನ ದಾಖಲೆಗಳು ಮತ್ತು ಹಣಕಾಸಿನ ಜಾಡು ಸೇರಿದಂತೆ ಡಿಜಿಟಲ್ ಸಾಧನಗಳು ಮತ್ತು ಪುರಾವೆಗಳನ್ನು ಮರುಪಡೆಯುವ ಮತ್ತು ವಿಶ್ಲೇಷಿಸುವ ಅಗತ್ಯವಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದಿರುವ ದೊಡ್ಡ ಪಿತೂರಿ ಮತ್ತು ಮೂಲವನ್ನು ಪತ್ತೆಹಚ್ಚಬೇಕು ಮತ್ತು ಆರೋಪಿಗಳನ್ನು ಮಹಾರಾಷ್ಟ್ರದ ನಾಸಿಕ್ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಕರೆದೊಯ್ಯಬೇಕು ಎಂದು ಸಿಬಿಐ ವಾದಿಸಿತ್ತು.
ಸಿಬಿಐ ಪ್ರಕಾರ, ಕೆಲವು ಅಭ್ಯರ್ಥಿಗಳಿಗೆ ಪ್ರಶ್ನೆಗಳನ್ನು ಬಹಿರಂಗಪಡಿಸಿದ ಸ್ಥಳಗಳನ್ನು ಗುರುತಿಸಲು ಖೈರ್ನಾರ್ ಅವರನ್ನು ವಿಚಾರಣೆ ನಡೆಸಬೇಕಾಗಿತ್ತು.