

ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ವಿಜಯ ಸಾಧಿಸಿದ್ದು, ತೀವ್ರ ಸೇನಾ ದಾಳಿಯಿಂದ ಕಂಗೆಟ್ಟಿರುವ ಇರಾನ್ ಒಪ್ಪಂದಕ್ಕಾಗಿ ಅಮೆರಿಕದ ಮುಂದೆ ಬೇಡಿಕೊಳ್ಳುತ್ತಿದೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.
ಟರ್ಕಿಯ ಅಂಕಾರಾದಲ್ಲಿ ನಡೆದ ನ್ಯಾಟೋ (NATO) ಶೃಂಗಸಭೆಯಿಂದ ಏರ್ ಫೋರ್ಸ್ ಒನ್ ವಿಮಾನದಲ್ಲಿ ಹಿಂತಿರುಗುವಾಗ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ.
ಇರಾನ್‌ನ ಉನ್ನತ ಅಧಿಕಾರಿಗಳು ಹೊಸ ಒಪ್ಪಂದಕ್ಕಾಗಿ ಅಮೆರಿಕವನ್ನು ಸಂಪರ್ಕಿಸಿದ್ದು, ಮಾತುಕತೆಗೆ ಮುಂದಾಗಿದ್ದಾರೆ. ಆದರೆ, ಇರಾನ್ ಯಾವುದೇ ಒಪ್ಪಂದವನ್ನು ಗೌರವಿಸುತ್ತದೆಯೇ ಎಂಬ ಬಗ್ಗೆ ನಮಗೆ ಅನುಮಾನವಿದೆ ಎಂದು ಹೇಳಿದ್ದಾರೆ.
ಇರಾನ್ ಸ್ವಲ್ಪ ಸಮಯದ ಹಿಂದೆ ನಮಗೆ ಕರೆ ಮಾಡಿತ್ತು. ಅವರಿಗೆ ಒಪ್ಪಂದ ಮಾಡಿಕೊಳ್ಳಲು ತುಂಬಾ ಆತುರವಿದೆ. ಆದರೆ, "ಅವರು ಒಪ್ಪಂದಕ್ಕೆ ಅರ್ಹರೇ? ಅವರು ಒಪ್ಪಂದವನ್ನು ಪಾಲಿಸುತ್ತಾರೆಯೇ? ಎಂಬುದೇ ನನ್ನ ದೊಡ್ಡ ಪ್ರಶ್ನೆ" ಎಂದು ಅನುಮಾನ ವ್ಯಕ್ತಪಡಿಸಿದರು.
ಇದೇ ವೇಳೆ ಇರಾನ್ ವಿರುದ್ಧದ ಅಮೆರಿಕದ ಕಾರ್ಯಾಚರಣೆಯ ಉದ್ದೇಶವನ್ನು ವಿವರಿಸಿದ ಟ್ರಂಪ್, "ಇದು ಸಾಂಪ್ರದಾಯಿಕ ಯುದ್ಧವಲ್ಲ. ಇರಾನ್ ಅನ್ನು ಪರಮಾಣು ಶಸ್ತ್ರಮುಕ್ತಗೊಳಿಸುವ ಕಾರ್ಯಾಚರಣೆ. ಇರಾನ್‌ಗೆ ಪರಮಾಣು ಅಸ್ತ್ರಗಳು ಸಿಗದಂತೆ ತಡೆಯುವುದೇ ನಮ್ಮ ಗುರಿ. ಇದನ್ನು ಎಲ್ಲರೂ ಬೆಂಬಲಿಸಬೇಕು" ಎಂದು ಹೇಳಿದರು.
ಇದರ ಜೊತೆಗೆ ಅಮೆರಿಕದ ಸೇನಾ ಸಾಮರ್ಥ್ಯದ ಬಗ್ಗೆಯೂ ಹೆಮ್ಮೆ ವ್ಯಕ್ತಪಡಿಸಿದ ಟ್ರಂಪ್, "ಈ ಯುದ್ಧವನ್ನು ಗೆಲ್ಲಲು ನಮಗೆ ಹಲವು ಮಾರ್ಗಗಳಿವೆ. ಮಿಲಿಟರಿ ದೃಷ್ಟಿಯಿಂದ ನಾವು ಈಗಾಗಲೇ ಗೆದ್ದಿದ್ದೇವೆ. ಇರಾನ್ ಬಳಿ ಈಗ ಹೆಚ್ಚಿನ ಶಕ್ತಿ ಉಳಿದಿಲ್ಲ. ಅದಕ್ಕಾಗಿಯೇ ಅವರು ಒಪ್ಪಂದಕ್ಕಾಗಿ ನಮ್ಮನ್ನು ಸಂಪರ್ಕಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಟ್ರಂಪ್ ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಎಂಟು ಯುದ್ಧಗಳನ್ನು ಅಂತ್ಯಗೊಳಿಸಿದ್ದೇನೆ ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ಈ ಹೇಳಿಕೆಗಳು ಹೊರಬಿದ್ದ ಕೆಲವೇ ಗಂಟೆಗಳ ಮೊದಲು ಅಮೆರಿಕ ಇರಾನ್ ವಿರುದ್ಧ ಮತ್ತೊಂದು ಭಾರೀ ವೈಮಾನಿಕ ದಾಳಿ ನಡೆಸಿತ್ತು. ಇರಾನ್ ಸರ್ಕಾರಿ ಮಾಧ್ಯಮಗಳ ಪ್ರಕಾರ, ಹಾರ್ಮುಜ್ ಜಲಸಂಧಿಯ ಸಮೀಪದ ಬಂದರ್ ಅಬ್ಬಾಸ್, ಸಿರಿಕ್, ಚಬಹಾರ್ ಹಾಗೂ ಪರಮಾಣು ವಿದ್ಯುತ್ ಸ್ಥಾವರ ಹೊಂದಿರುವ ಬುಶೆಹರ್ ಪ್ರಾಂತ್ಯ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಸ್ಫೋಟಗಳು ಸಂಭವಿಸಿವೆ. ಹಾರ್ಮುಜ್ ಜಲಸಂಧಿಯ ಮೇಲಿನ ಇರಾನ್‌ನ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುವ ಅಬು ಮೂಸಾ ದ್ವೀಪದಲ್ಲಿಯೂ ಸ್ಫೋಟದ ಶಬ್ದ ಕೇಳಿಬಂದಿದೆ ಎಂದು ವರದಿಯಾಗಿದೆ.
ದಾಳಿಯ ಬಳಿಕ ತಮ್ಮ ಸಾಮಾಜಿಕ ಜಾಲತಾಣ ಟ್ರೂತ್ ಸೋಷಿಯಲ್ನಲ್ಲಿ ಪ್ರತಿಕ್ರಿಯಿಸಿದ ಟ್ರಂಪ್, "ನಿನ್ನೆ ಇರಾನ್ ವ್ಯಾಪಾರ ಹಡಗುಗಳ ಮೇಲೆ ನಡೆಸಿದ ದಾಳಿಗೆ ಇದು ಪ್ರತೀಕಾರ. ಮತ್ತೆ ಇಂತಹ ದಾಳಿ ನಡೆದರೆ ಅದರ ಪರಿಣಾಮ ಇನ್ನಷ್ಟು ಭೀಕರವಾಗಲಿದೆ" ಎಂದು ಎಚ್ಚರಿಕೆ ನೀಡಿದರು.
ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಕೂಡ ದಾಳಿಯನ್ನು ದೃಢಪಡಿಸಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ನೌಕಾಯಾನ ಸ್ವಾತಂತ್ರ್ಯಕ್ಕೆ ಇರಾನ್ ಒಡ್ಡುತ್ತಿರುವ ಬೆದರಿಕೆಯನ್ನು ಮತ್ತಷ್ಟು ಕುಗ್ಗಿಸುವ ಉದ್ದೇಶದಿಂದ ಹೆಚ್ಚುವರಿ ದಾಳಿಗಳನ್ನು ನಡೆಸಲಾಗಿದೆ ಎಂದು ತಿಳಿಸಿದೆ.
"ಅಂತರರಾಷ್ಟ್ರೀಯ ಸಮುದ್ರ ಮಾರ್ಗದಲ್ಲಿ ಮುಕ್ತವಾಗಿ ಸಂಚರಿಸುತ್ತಿದ್ದ ವಾಣಿಜ್ಯ ಹಡಗುಗಳು ಮತ್ತು ನಾಗರಿಕ ಸಿಬ್ಬಂದಿಯ ಮೇಲೆ ಇರಾನ್ ನಡೆಸಿದ ಅನ್ಯಾಯದ ದಾಳಿಗಳಿಗೆ ಅಮೆರಿಕ ಸೂಕ್ತ ಉತ್ತರ ನೀಡುತ್ತಿದೆ" ಎಂದು ಸೆಂಟ್ಕಾಮ್ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಅಮೆರಿಕದ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ರಾಯಿಟರ್ಸ್‌ಗೆ ನೀಡಿರುವ ಮಾಹಿತಿಯ ಪ್ರಕಾರ, ಬುಧವಾರ ರಾತ್ರಿ ನಡೆದ ದಾಳಿಗಳು ಮಂಗಳವಾರದ ದಾಳಿಗಳಿಗಿಂತ ಹೆಚ್ಚು ವ್ಯಾಪಕ ಮತ್ತು ತೀವ್ರವಾಗಿದ್ದವು ಎಂದು ತಿಳಿಸಿದ್ದಾರೆ.
ಇದರಿಂದ ಅಮೆರಿಕ-ಇರಾನ್ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ಆತಂಕ ಮತ್ತೊಮ್ಮೆ ಹೆಚ್ಚಾಗಿದೆ. ವಿಶೇಷವಾಗಿ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ ಭದ್ರತೆ ಮತ್ತು ವಿಶ್ವ ಇಂಧನ ಮಾರುಕಟ್ಟೆಯ ಮೇಲೂ ಈ ಬೆಳವಣಿಗೆಗಳು ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.