ಅಮರಾವತಿ: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಸೋಮವಾರ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿ ಸತ್ಯವೊಂದನ್ನು ಒಪ್ಪಿಕೊಂಡಿದ್ದಾರೆ.
ತಮ್ಮ ಪಕ್ಷದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಕಲ್ಯಾಣ್, ತಮಿಳುನಾಡಿನ ಹೊಸ ಮುಖ್ಯಮಂತ್ರಿ ವಿಜಯ್, ಇಷ್ಟು ಬೇಗ ಯಶಸ್ಸನ್ನು ಸಾಧಿಸಿದ್ದನ್ನು ನೋಡಿ ಸ್ವಲ್ಪ ಅಸೂಯೆ ಪಟ್ಟಿರುವುದಾಗಿ ಹೇಳಿಕೊಂಡರು.
ಇತ್ತೀಚಿನ ದಿನಗಳಲ್ಲಿ ತಮಿಳುನಾಡಿನ ರಾಜಕೀಯವನ್ನು ನೋಡುತ್ತಿದ್ದೇನೆ. ವಿಜಯ್ ತುಂಬಾ ಸುಲಭವಾಗಿ ಯಶಸ್ಸು ಸಾಧಿಸಿದ್ದಾರೆ. ನನಗೆ ಅಸೂಯೆ ಅನಿಸಿತು. ಅವರು ಕಟೌಟ್‌ಗಳು ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸಿ ಸುಲಭವಾಗಿ ಗೆದ್ದರು" ಎಂದು ಅವರು ನಗುತ್ತಾ ಹೇಳಿದರು.
ಬಳಿಕ ಗಂಭೀರ ಮಾತಿನ ಕಡೆಗೆ ಹೊರಳಿದ ಪವನ್ ಕಲ್ಯಾಣ್, ನಾನು ಹದಿನೈದು ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ರಾಜಕೀಯ ಪಕ್ಷವನ್ನು ನಿರ್ವಹಿಸುವುದು ಎಂದರೆ ಲಕ್ಷಾಂತರ ಜನರನ್ನು ಒಂದುಗೂಡಿಸುವುದು. ಎಷ್ಟೋ ಸಂದರ್ಭಗಳಲ್ಲಿ ನಮ್ಮ ಸ್ವಂತ ಕುಟುಂಬ ಸದಸ್ಯರು ಮನವೊಲಿಸುವಲ್ಲಿ ಸಾಧ್ಯವಿರುವುದಿಲ್ಲ. ಅಂತಹುದರಲ್ಲಿ ಪಕ್ಷವನ್ನು ಪ್ರಾರಂಭಿಸಿ ಸಮಾಜವನ್ನು ಪರಿವರ್ತಿಸಲು ಪ್ರಯತ್ನಿಸುವುದು ಒಂದು ದೊಡ್ಡ ಸವಾಲಿನ ಕೆಲಸ ಎಂದರು.
ನೆರೆಯ ದಕ್ಷಿಣ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ರಾಜಕೀಯ ಮತ್ತು ನಾಯಕತ್ವದ ನಡುವಿನ ನೇರ ಹೋಲಿಕೆಗಳನ್ನು ಅವರು ಈ ಹಿಂದೆ ತಿರಸ್ಕರಿಸಿದ್ದರು. ಇದೇ ತಿಂಗಳು ಅಮರಾವತಿಯಲ್ಲಿ ನಡೆದ ಹಿಂದಿನ ಕಾರ್ಯಕ್ರಮವೊಂದರಲ್ಲಿ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜಕೀಯವಾಗಿ ಹೋಲಿಸಲಾಗದು ಮತ್ತು ಮೈತ್ರಿ ಆಧಾರಿತ ರಾಜಕಾರಣ ಆಂಧ್ರಕ್ಕೆ ಅರ್ಥಪೂರ್ಣವಾಗಿದೆ ಎಂದು ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದರು.
ಟಿವಿಕೆಯ ಬ್ಲಾಕ್‌ಬಸ್ಟರ್ ಗೆಲುವು: ನಟನೆಯಿಂದ ರಾಜಕೀಯದತ್ತ ವಾಲಿದ ವಿಜಯ್, ಇತ್ತೀಚಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅವರ ಪಕ್ಷ ಟಿವಿಕೆ ಗಮನಾರ್ಹ ಗೆಲುವು ಸಾಧಿಸಿತು. 2024 ರಲ್ಲಿ ತಮ್ಮ ಪಕ್ಷ ಟಿವಿಕೆ ಅನ್ನು ಪ್ರಾರಂಭಿಸಿದ ವಿಜಯ್, 2026ರ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗಳಿಸುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ದೀರ್ಘಕಾಲದ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಗಳ ದಶಕಗಳ ಪ್ರಾಬಲ್ಯವನ್ನು ಕೊನೆಗಾಣಿಸಿ ತಮಿಳುನಾಡಿನ ಮುಖ್ಯಮಂತ್ರಿಯಾದರು.