ನವದೆಹಲಿ: ದೆಹಲಿಯಲ್ಲಿ ಚಳಿಗಾಲದ ಕಾರ್ಯಯೋಜನೆಯಡಿ ವಾಯುಮಾಲಿನ್ಯ ನಿಯಂತ್ರಣ ಕ್ರಮಗಳ ಜಾರಿ ಭಾನುವಾರ ಆರಂಭವಾಗಿದ್ದು, ಮೊದಲ ದಿನವೇ ನಿಯಮ ಉಲ್ಲಂಘಿಸಿದವರಿಂದ ಒಟ್ಟು 68.4 ಲಕ್ಷ ರೂ. ದಂಡ ಮತ್ತು ಪರಿಸರ ಪರಿಹಾರ ಮೊತ್ತವನ್ನು ವಸೂಲಿ ಮಾಡಲಾಗಿದೆ.
ಸುಮಾರು 15,000 ವಾಹನಗಳನ್ನು ತಪಾಸಣೆ ನಡೆಸಲಾಗಿದ್ದು, ಪ್ರವೇಶ ನಿರ್ಬಂಧ ಉಲ್ಲಂಘಿಸಿದ 1,539 ವಾಹನಗಳನ್ನು ಗಡಿ ಚೆಕ್‌ಪೋಸ್ಟ್‌ಗಳಿಂದ ವಾಪಸ್ ಕಳುಹಿಸಲಾಗಿದೆ.
ಭಾನುವಾರ ಸಂಜೆ 5 ಗಂಟೆಯವರೆಗೆ ಲಭ್ಯವಾದ ಅಧಿಕೃತ ಅಂಕಿಅಂಶಗಳ ಪ್ರಕಾರ, ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ನಿಯಮ ಉಲ್ಲಂಘಿಸಿದ 566 ವಾಹನಗಳಿಗೆ ಚಲನ್ ನೀಡಲಾಗಿದ್ದು, 56.6 ಲಕ್ಷ ರೂ. ದಂಡ ವಿಧಿಸಲಾಗಿದೆ. ವಾಹನ ಪ್ರವೇಶ ನಿರ್ಬಂಧ ಉಲ್ಲಂಘನೆಗಾಗಿ ಮತ್ತೊಂದು 2 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ನಿರ್ಮಾಣ ಸ್ಥಳಗಳಲ್ಲಿ ಧೂಳು ನಿಯಂತ್ರಣ ನಿಯಮ ಉಲ್ಲಂಘಿಸಿದ್ದಕ್ಕಾಗಿ 9.8 ಲಕ್ಷ ರೂ. ಪರಿಸರ ಪರಿಹಾರ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ದೆಹಲಿ ಸಂಚಾರ ಪೊಲೀಸರು ಮತ್ತು ಸಾರಿಗೆ ಇಲಾಖೆ ದೆಹಲಿಯ ಹೊರಗಿನ ಬಿಎಸ್-6 ಪೂರ್ವದ ವಾಹನಗಳ ಪ್ರವೇಶ ನಿರ್ಬಂಧದಡಿ 14,930 ವಾಹನಗಳನ್ನು ತಪಾಸಣೆ ನಡೆಸಿವೆ. ಈ ಪೈಕಿ ಶೇ 10.31ರಷ್ಟು ವಾಹನಗಳನ್ನು ವಾಪಸ್ ಕಳುಹಿಸಲಾಗಿದೆ. ಒಟ್ಟು 127 ಚಲನ್‌ಗಳನ್ನು ನೀಡಲಾಗಿದ್ದು, 62 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ವಾಪಸ್ ಕಳುಹಿಸಲಾದ ವಾಹನಗಳಲ್ಲಿ 140 ಲಘು ಮೋಟಾರು ವಾಹನಗಳು, 54 ಲಘು ವಾಣಿಜ್ಯ ವಾಹನಗಳು, 95 ಭಾರಿ ಸರಕು ಸಾಗಣೆ ವಾಹನಗಳು ಮತ್ತು 34 ಬಸ್‌ಗಳು ಸೇರಿವೆ. ದ್ವಿಚಕ್ರ, ತ್ರಿಚಕ್ರ ಸೇರಿದಂತೆ ಇತರ 1,423 ವಾಹನಗಳನ್ನು ಪರಿಶೀಲಿಸಲಾಗಿದ್ದು, ಈ ಪೈಕಿ 789 ವಾಹನಗಳನ್ನು ವಾಪಸ್ ಕಳುಹಿಸಿ, 38 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಪ್ರತ್ಯೇಕವಾಗಿ, ದೆಹಲಿಯನ್ನು ಗಮ್ಯಸ್ಥಾನವನ್ನಾಗಿ ಹೊಂದಿರದ 7,279 ವಾಹನಗಳನ್ನು ತಪಾಸಣೆ ನಡೆಸಲಾಗಿದ್ದು, ಈ ಪೈಕಿ 314 ವಾಹನಗಳನ್ನು ವಾಪಸ್ ಕಳುಹಿಸಲಾಗಿದೆ. ಸಿಎನ್‌ಜಿ, ವಿದ್ಯುತ್ ಚಾಲಿತ ವಾಹನಗಳು ಹಾಗೂ ಅಗತ್ಯ ಸೇವೆಗಳಲ್ಲಿ ತೊಡಗಿರುವ 740 ವಾಹನಗಳನ್ನು ಪರಿಶೀಲಿಸಿ, ನಿರ್ಬಂಧದಿಂದ ವಿನಾಯಿತಿ ಹೊಂದಿದ್ದ ಕಾರಣ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.
ಮಾನ್ಯ ಪಿಯುಸಿಸಿ ಇಲ್ಲದೆ ಸಂಚರಿಸುತ್ತಿದ್ದ ವಾಹನಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಸಂಚಾರ ಪೊಲೀಸರು 493 ಚಲನ್‌ಗಳನ್ನು ನೀಡಿ 49.3 ಲಕ್ಷ ರೂ. ದಂಡ ವಿಧಿಸಿದ್ದಾರೆ. ಸಾರಿಗೆ ಇಲಾಖೆಯು 73 ಚಲನ್‌ಗಳನ್ನು ನೀಡಿ 7.3 ಲಕ್ಷ ರೂ. ದಂಡ ವಿಧಿಸಿದೆ.
ಧೂಳು ಮಾಲಿನ್ಯ ನಿಯಂತ್ರಣ ಕ್ರಮದಡಿ 300 ನಿರ್ಮಾಣ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದ್ದು, ನಿಯಮ ಉಲ್ಲಂಘಿಸಿದ 32 ಸ್ಥಳಗಳಿಗೆ ಒಟ್ಟು 9.8 ಲಕ್ಷ ರೂ. ಪರಿಸರ ಪರಿಹಾರ ವಿಧಿಸಲಾಗಿದೆ.
ತಪಾಸಣೆ ನಡೆಸಿದ 91 ಬೃಹತ್ ನಿರ್ಮಾಣ ಸ್ಥಳಗಳ ಪೈಕಿ 16 ಸ್ಥಳಗಳಲ್ಲಿ ನಿಯಮ ಉಲ್ಲಂಘನೆ ಕಂಡುಬಂದಿದೆ. ಈ ಸ್ಥಳಗಳಿಗೆ ಎರಡು ಕಾಮಗಾರಿ ಸ್ಥಗಿತಗೊಳಿಸುವ ಆದೇಶ ಮತ್ತು ನಾಲ್ಕು ಕಾರಣ ಕೇಳುವ ನೋಟಿಸ್‌ಗಳನ್ನು ನೀಡಲಾಗಿದ್ದು, 4 ಲಕ್ಷ ರೂ. ಪರಿಹಾರ ವಿಧಿಸಲಾಗಿದೆ.
ಇನ್ನು, ತಪಾಸಣೆ ನಡೆಸಿದ 209 ಸಣ್ಣ ನಿರ್ಮಾಣ ಸ್ಥಳಗಳ ಪೈಕಿ 17 ಸ್ಥಳಗಳಲ್ಲಿ ನಿಯಮ ಉಲ್ಲಂಘನೆ ಪತ್ತೆಯಾಗಿದೆ. 15 ಕಾಮಗಾರಿ ಸ್ಥಗಿತಗೊಳಿಸುವ ಆದೇಶ ಹಾಗೂ 15 ಕಾರಣ ಕೇಳುವ ನೋಟಿಸ್‌ಗಳನ್ನು ನೀಡಲಾಗಿದ್ದು, 5.8 ಲಕ್ಷ ರೂ. ಪರಿಹಾರ ವಿಧಿಸಲಾಗಿದೆ. ವಿನಾಯಿತಿ ಪಡೆದ ಮೂಲಸೌಕರ್ಯ ಯೋಜನೆಗಳಲ್ಲಿ ಯಾವುದೇ ಉಲ್ಲಂಘನೆ ಕಂಡುಬಂದಿಲ್ಲ.
ವಾಹನಗಳ ಪ್ರವೇಶ ನಿರ್ಬಂಧ, ಪಿಯುಸಿ ಪ್ರಮಾಣಪತ್ರದ ಕಡ್ಡಾಯತೆ ಮತ್ತು ನಿರ್ಮಾಣ ಸ್ಥಳಗಳ ಧೂಳು ನಿಯಂತ್ರಣ ನಿಯಮಗಳ ಪಾಲನೆಯ ಮೇಲೆ ಜಾರಿ ತಂಡಗಳು ನಿಗಾ ಇರಿಸಿವೆ ಎಂದು ದೆಹಲಿ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ತಿಳಿಸಿದ್ದಾರೆ.
ಇಂದು 14,930 ವಾಹನಗಳನ್ನು ಪರಿಶೀಲಿಸಲಾಗಿದೆ. 566 ಪಿಯುಸಿ ಚಲನ್‌ಗಳನ್ನು ನೀಡಲಾಗಿದ್ದು, 300 ನಿರ್ಮಾಣ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದೆ. ಪಿಯುಸಿ ಪ್ರಮಾಣಪತ್ರವನ್ನು ಮಾನ್ಯವಾಗಿರಿಸಿಕೊಳ್ಳಿ, ಪ್ರವೇಶ ನಿಯಮ ಮತ್ತು ಧೂಳು ನಿಯಂತ್ರಣ ಮಾನದಂಡಗಳನ್ನು ಪಾಲಿಸಿ. ಶುದ್ಧ ಗಾಳಿಗಾಗಿ ಎಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕು ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಾಯುಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಚಳಿಗಾಲದ ಕಾರ್ಯಯೋಜನೆಯಡಿ ವಿಧಿಸಿರುವ ನಿರ್ಬಂಧಗಳು ನವೆಂಬರ್ 1ರಿಂದ ಫೆಬ್ರವರಿ 28ರವರೆಗೆ ವಿವಿಧ ಅವಧಿಗಳಲ್ಲಿ ಜಾರಿಯಲ್ಲಿರಲಿವೆ.
ದೆಹಲಿಯ ಹೊರಗಿನ ಬಿಎಸ್-6 ಪೂರ್ವದ ವಾಹನಗಳಿಗೆ ಜನವರಿ 31ರವರೆಗೆ ರಾಷ್ಟ್ರ ರಾಜಧಾನಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಧೂಳು ಉಂಟುಮಾಡುವ ಕಟ್ಟಡಗಳ ನೆಲಸಮ ಹಾಗೂ ಹೊರಾಂಗಣ ನಾಗರಿಕ ನಿರ್ಮಾಣ ಕಾಮಗಾರಿಗಳಿಗೂ ನಿಷೇಧ ವಿಧಿಸಲಾಗಿದೆ. ಆದರೆ, ನಿರ್ದಿಷ್ಟ ಅಗತ್ಯ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗೆ ವಿನಾಯಿತಿ ನೀಡಲಾಗಿದೆ.
ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ, ಡಿಸೆಂಬರ್ 10ರಿಂದ ಜನವರಿ 20ರವರೆಗೆ ಕಟ್ಟಡ ನಿರ್ಮಾಣ ಮತ್ತು ನೆಲಸಮ ಕಾಮಗಾರಿಗಳ ಮೇಲೆ ಸಂಪೂರ್ಣ ನಿಷೇಧ ಜಾರಿಯಲ್ಲಿರಲಿದೆ.
ಅಧಿಕೃತ ವಾಹನ ನಿಲುಗಡೆ ಸ್ಥಳಗಳ ಶುಲ್ಕವನ್ನು ಫೆಬ್ರವರಿ 28ರವರೆಗೆ ದುಪ್ಪಟ್ಟು ಮಾಡಲಾಗಿದೆ. ಅಲ್ಲದೆ, ನವೆಂಬರ್ 1ರಿಂದ ಜನವರಿ 31ರವರೆಗೆ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಶೇ 50ರಷ್ಟು ಸಿಬ್ಬಂದಿಗೆ ಮಾತ್ರ ಕಚೇರಿಯಿಂದ ಕೆಲಸ ಮಾಡಲು ಸೂಚಿಸಲಾಗಿದೆ. ಉಳಿದ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡಬೇಕು. ಅಗತ್ಯ ಮತ್ತು ತುರ್ತು ಸೇವೆಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ.