ಜೈಪುರ: ರಾಜಸ್ಥಾನದಲ್ಲಿ ರಸ್ತೆ ಕಾಮಗಾರಿ ವೇಳೆ ಘೋರ ದುರಂತ ಸಂಭವಿಸಿದ್ದು, ಜಲ್ಲಿಕಲ್ಲು ಮಿಶ್ರಣದ ಯಂತ್ರಕ್ಕೆ ವಿದ್ಯುತ್ ತಗುಲಿದ ಪರಿಣಾಮ ಎಂಟು ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ.
ರಾಜಸ್ಥಾನದ ಜುಂಜುನು ಜಿಲ್ಲೆಯ ಉದಯಪುರವಾಟಿ ಪೊಲೀಸ್ ಠಾಣಾ ವ್ಯಾಪ್ತಿಯ ಛಾಪೋಲಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಮೃತಪಟ್ಟ ಕಾರ್ಮಿಕರು ಸ್ಥಳೀಯ ನಿವಾಸಿಗಳಾಗಿದ್ದಾರೆ.
ಛಾಪೋಲಿ ಮತ್ತು ಕದಮ್‌ಕುಂಡ್ ಅನ್ನು ಸಂಪರ್ಕಿಸುವ ಕಿರಿದಾದ ರಸ್ತೆಯೊಂದನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತಿತ್ತು.
ಜಲ್ಲಿಕಲ್ಲು ಮಿಶ್ರಣ ಮಾಡಲು ಬಳಸುತ್ತಿದ್ದ ಯಂತ್ರವು, ಮೇಲ್ಭಾಗದಲ್ಲಿದ್ದ ಹೈ-ಟೆನ್ಷನ್ ವಿದ್ಯುತ್ ತಂತಿಗೆ ತಗುಲಿದ್ದೇ ಈ ದುರಂತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಇತರ ಐವರಿಗೆ ಸುಟ್ಟಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರು ಈ ಘಟನೆಗೆ ತೀವ್ರ ಸಂತಾಪ ಸೂಚಿಸಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.
ಇಂಧನ ಸಚಿವ ಹೀರಾ ಲಾಲ್ ನಗರ್ ಅವರ ಪ್ರಕಾರ, ಈ ರಸ್ತೆಯನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತಿತ್ತು ಮತ್ತು ಕಾಮಗಾರಿಯನ್ನು ಖಾಸಗಿಯಾಗಿ, ಸಣ್ಣ ಪ್ರಮಾಣದಲ್ಲಿ ಕೈಗೊಳ್ಳಲಾಗಿತ್ತು.