ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ 
ದೇಶ

ತುರ್ತು ವಿಚಾರಣೆ ಕೋರಿ Supreme Courtಗೆ ಅರ್ಜಿಗಳ ಮಹಾಪೂರ: ನ್ಯಾಯಾಂಗ ಪ್ರಕ್ರಿಯೆ ಸುಧಾರಣೆಗೆ CJI ಸೂರ್ಯ ಕಾಂತ್ ಸಲಹೆ

ಹೈಕೋರ್ಟ್‌ಗಳ ಸಾಂಸ್ಥಿಕ ಸ್ವಾಯತ್ತತೆಯನ್ನು, ಅದರಲ್ಲೂ ನ್ಯಾಯಮೂರ್ತಿಗಳಿಗೆ ಪ್ರಕರಣಗಳನ್ನು ಹಂಚಿಕೆ ಮಾಡುವ ಅಧಿಕಾರವನ್ನು ಸುಪ್ರೀಂ ಕೋರ್ಟ್ ನಿರಂತರವಾಗಿ ಗೌರವಿಸುತ್ತಾ ಬಂದಿದೆ.

ಕೊಚ್ಚಿ: ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಪ್ರಕರಣಗಳ ತುರ್ತು ವಿಚಾರಣೆ ಅಥವಾ ಶೀಘ್ರ ವಿಚಾರಣೆ ಕೋರಿ ಅರ್ಜಿದಾರರು ಸುಪ್ರೀಂ ಕೋರ್ಟ್‌ನ ಮೊರೆ ಹೋಗುತ್ತಿರುವ ಪ್ರವೃತ್ತಿ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ನ್ಯಾಯಾಂಗ ಪ್ರಕ್ರಿಯೆಯನ್ನು ಮತ್ತಷ್ಟು ತ್ವರಿತವಾಗಿ ಸ್ಪಂದಿಸುವಂತೆ ಸುಧಾರಿಸಲು ಅವಕಾಶವಿದೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಭಾನುವಾರ ಕರೆ ನೀಡಿದ್ದಾರೆ.

ಕೊಚ್ಚಿಯಲ್ಲಿ ಕೇರಳ ಹೈಕೋರ್ಟ್‌ನ 70ನೇ ವರ್ಷದ ಸಂಭ್ರಮಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಇದು ಈಗ ಸುಪ್ರೀಂ ಕೋರ್ಟ್‌ಗೆ ಅರ್ಜಿಗಳ ಮಹಾಪೂರವೇ ಹರಿದುಬರುವ ಹೊಸ ರೀತಿಯ ವ್ಯಾಜ್ಯ ಪ್ರಕ್ರಿಯೆಯಾಗಿ ಬೆಳೆದಿದೆ ಎಂದು ಹೇಳಿದರು.

ಹೈಕೋರ್ಟ್‌ಗಳ ಸಾಂಸ್ಥಿಕ ಸ್ವಾಯತ್ತತೆಯನ್ನು, ಅದರಲ್ಲೂ ನ್ಯಾಯಮೂರ್ತಿಗಳಿಗೆ ಪ್ರಕರಣಗಳನ್ನು ಹಂಚಿಕೆ ಮಾಡುವ ಅಧಿಕಾರವನ್ನು ಸುಪ್ರೀಂ ಕೋರ್ಟ್ ನಿರಂತರವಾಗಿ ಗೌರವಿಸುತ್ತಾ ಬಂದಿದೆ. ಆದರೆ, ಇಂತಹ ಮನವಿಗಳು ಪದೇಪದೆ ಸಲ್ಲಿಕೆಯಾಗುತ್ತಿರುವುದು ನಮ್ಮ ನ್ಯಾಯಾಂಗ ಪ್ರಕ್ರಿಯೆ ಇನ್ನಷ್ಟು ತ್ವರಿತವಾಗಿ ಸ್ಪಂದಿಸುವಂತೆ ಸುಧಾರಿಸಲು ಅವಕಾಶವಿದೆಯೇ ಎಂದು ಪರಿಶೀಲಿಸುವಂತೆ ಮಾಡಿದೆ ಎಂದು ತಿಳಿಸಿದ್ದಾರೆ.

ತುರ್ತು ಪ್ರಕರಣಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಗುರುತಿಸಲು ಸಾಧ್ಯವೇ? ವಿಚಾರಣೆಗೆ ಪ್ರಕರಣಗಳನ್ನು ಪಟ್ಟಿ ಮಾಡುವ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಮತ್ತು ನಿರೀಕ್ಷಿತವಾಗಿಸಲು ಸಾಧ್ಯವೇ? ವಿಳಂಬದಿಂದ ಸರಿಪಡಿಸಲಾಗದ ಹಾನಿ ಉಂಟಾಗಬಹುದಾದ ಪ್ರಕರಣಗಳಿಗೆ ಆದ್ಯತೆ ನೀಡಲು ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದೇ? ಸಕಾಲದಲ್ಲಿ ನ್ಯಾಯ ಪಡೆಯಲು ಅರ್ಜಿದಾರರು ರಾಷ್ಟ್ರ ರಾಜಧಾನಿಗೆ ಪ್ರಯಾಣಿಸುವ ಸಾಮರ್ಥ್ಯವನ್ನು ಅವಲಂಬಿಸಬೇಕಾದ ಪರಿಸ್ಥಿತಿ ತಪ್ಪಿಸಲು ಸಾಧ್ಯವೇ? ಇವು ನ್ಯಾಯಾಂಗ ವ್ಯವಸ್ಥೆಯ ಟೀಕೆಯ ಪ್ರಶ್ನೆಗಳಲ್ಲ; ಬದಲಿಗೆ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯ ಪ್ರಶ್ನೆಗಳಾಗಿವೆ ಎಂದು ಹೇಳಿದರು.

ಭಾರತದಲ್ಲಿ ಸಾಂವಿಧಾನಿಕ ನ್ಯಾಯವು ನವದೆಹಲಿಯಿಂದಲೇ ಆರಂಭವಾಗಿ ಅಲ್ಲಿಯೇ ಅಂತ್ಯಗೊಳ್ಳುವುದಿಲ್ಲ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.

ದೇಶದಾದ್ಯಂತ ಇರುವ 25 ಹೈಕೋರ್ಟ್‌ಗಳ ಬಲಿಷ್ಠ ಜಾಲದಲ್ಲಿ ನ್ಯಾಯಾಂಗ ವ್ಯವಸ್ಥೆಯ ಶಕ್ತಿ ಅಡಗಿದೆ. ಪ್ರತಿಯೊಂದು ಹೈಕೋರ್ಟ್‌ಗೂ ಹಕ್ಕುಗಳನ್ನು ರಕ್ಷಿಸುವ ಮತ್ತು ಕಾನೂನಿನ ಆಳ್ವಿಕೆಯನ್ನು ಎತ್ತಿಹಿಡಿಯುವ ಜವಾಬ್ದಾರಿ ಇದೆ ಎಂದರು.

ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ಮತ್ತು ನಾಗರಿಕರ ಹಕ್ಕುಗಳನ್ನು ರಕ್ಷಿಸುವಲ್ಲಿ ಕೇರಳ ಹೈಕೋರ್ಟ್ ಮಹತ್ವದ ಪಾತ್ರ ವಹಿಸಿದೆ. ಹಲವು ಮಾನದಂಡಗಳನ್ನು ಸ್ಥಾಪಿಸಿದೆ ಎಂದು ಸಿಜೆಐ ಶ್ಲಾಘಿಸಿದರು.

ಇತಿಹಾಸದೊಂದಿಗೆ ಹೆಜ್ಜೆ ಹಾಕುವುದಷ್ಟೇ ಅಲ್ಲದೆ, ಹಲವು ಸಂದರ್ಭಗಳಲ್ಲಿ ಅದಕ್ಕಿಂತಲೂ ಮುಂದೆ ಸಾಗುವ ಮೂಲಕ ಕೇರಳ ಹೈಕೋರ್ಟ್ ತನ್ನದೇ ಆದ ಛಾಪು ಮೂಡಿಸಿದೆ ಎಂದು ಹೇಳಿದರು.

ಇದಕ್ಕೆ ಉದಾಹರಣೆಯಾಗಿ 1999ರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿ ಕೇರಳ ಹೈಕೋರ್ಟ್ ನೀಡಿದ ಆದೇಶವನ್ನು ಉಲ್ಲೇಖಿಸಿದರು. ವಿಶ್ವದಲ್ಲೇ ಇಂತಹ ಆದೇಶ ನೀಡಿದ ಮೊದಲ ಸಾಂವಿಧಾನಿಕ ನ್ಯಾಯಾಲಯ ಕೇರಳ ಹೈಕೋರ್ಟ್ ಎಂದು ತಿಳಿಸಿದರು.

ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವುದರಲ್ಲಿಯೂ ಕೇರಳ ಹೈಕೋರ್ಟ್ ಮಹತ್ವದ ಪಾತ್ರ ವಹಿಸಿದೆ. ಪರಿಸರ ಸಂರಕ್ಷಣೆ ಮತ್ತು ಮೂಲಭೂತ ಹಕ್ಕುಗಳ ರಕ್ಷಣೆಯಂತಹ ಕ್ಷೇತ್ರಗಳಲ್ಲಿ ಪ್ರಗತಿಪರ ತೀರ್ಪುಗಳ ಮೂಲಕ ಸಾಂವಿಧಾನಿಕ ತತ್ವಗಳನ್ನು ಜನರ ದೈನಂದಿನ ಬದುಕಿನಲ್ಲಿ ಅಳವಡಿಸುವ ಕೆಲಸವನ್ನೂ ಮಾಡಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ಮೊದಲ ದಿನವೇ 1,539 ವಾಹನಗಳಿಗೆ ನಿರ್ಬಂಧ, 68.4 ಲಕ್ಷ ರೂ. ದಂಡ ವಸೂಲಿ..!

ಅಮೆರಿಕದಲ್ಲಿ ಭೀಕರ ವಿಮಾನ ದುರಂತ: ಬೆಂಕಿ ಉಂಡೆಯಂತೆ ಜನನಿಬಿಡ ರಸ್ತೆಗೆ ಅಪ್ಪಳಿಸಿದ ಖಾಸಗಿ ಜೆಟ್; 9 ಮಂದಿ ದುರ್ಮರಣ..!

INDIA bloc's rally:'ಸರಿಯಾಗಿ ನಕಲಿ ಮಾಡಲೂ ಆಗಿಲ್ಲ; ರಾಮಲೀಲಾ ಮೈದಾನದ ಜನಸಾಗರ ತೋರಿಸಲು ಕಾಂಗ್ರೆಸ್ AI ಫೋಟೋ ಬಳಕೆ- ಕಿರಣ್ ರಿಜಿಜು ಲೇವಡಿ

'ಮಾನಸಿಕವಾಗಿ ಬಳಲಿದ್ದೇನೆ, ಆದರೆ ಒತ್ತಡ ನಿಭಾಯಿಸುವ ಶಕ್ತಿ ನನಗಿದೆ': ಕೊನೆಗೂ ಮೌನ ಮುರಿದ ಗೌತಮ್ ಗಂಭೀರ್!

ಟಿ20 ವಿಶ್ವಕಪ್‌ಗೆ ಇನ್ನೂ ಸಮಯವಿದೆ, ಈಗ ಭುವನೇಶ್ವರ್‌ ಕುಮಾರ್‌ ಆಯ್ಕೆ ಯಾಕೆ?; BCCI ಆಯ್ಕೆ ಸಮಿತಿ ನಿರ್ಧಾರಕ್ಕೆ ಇರ್ಫಾನ್ ಪಠಾಣ್ ಕಿಡಿ!