ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟ ಇಮ್ರಾನ್ ಖಾನ್, ಬಾಂಬೆ ಹೈಕೋರ್ಟ್ ಎದುರು ಬೇಷರತ್ ಕ್ಷಮೆಯಾಚಿಸಿದ್ದಾರೆ.
ಅಲ್ಲದೆ, ಭವಿಷ್ಯದಲ್ಲಿ ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ. ಇದೇ ವೇಳೆ, ಭಾರತ ತೊರೆಯುವಂತೆ ಅವರಿಗೆ ನೀಡಲಾಗಿದ್ದ ನೋಟಿಸ್ಗೆ ಮುಂದಿನ ವಿಚಾರಣೆಯವರೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
43 ವರ್ಷದ ನಟ ಇಮ್ರಾನ್ ಖಾನ್ ಅಮೆರಿಕದ ಪ್ರಜೆಯಾಗಿದ್ದು, ಸಾಗರೋತ್ತರ ಭಾರತೀಯ ಪೌರತ್ವ (OCI) ಕಾರ್ಡ್ ಹೊಂದಿದ್ದಾರೆ. ಅಕ್ಟೋಬರ್ 10ರಂದು ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ನಟ ಸೇರಿದಂತೆ ಸುಮಾರು 400 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಇದರ ಬೆನ್ನಲ್ಲೇ ಎರಡು ವಾರಗಳ ಹಿಂದೆ ವಲಸೆ ಕಾಯ್ದೆಯ ನಿಯಮಗಳಡಿ ಇಮ್ರಾನ್ ಖಾನ್ ಅವರಿಗೆ ಭಾರತ ತೊರೆಯುವಂತೆ (Leave India Notice) ನೋಟಿಸ್ ನೀಡಲಾಗಿತ್ತು. ಈ ನೋಟಿಸ್ ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದಾಗಿ ಅವರ ಪರ ವಕೀಲರು ತಿಳಿಸಿದ್ದರು.
ವಿದೇಶಿ ಪ್ರಜೆಯೊಬ್ಬರು ನಿಗದಿತ ಅವಧಿಯೊಳಗೆ ದೇಶ ತೊರೆಯುವಂತೆ ಸೂಚಿಸುವುದೇ 'ಲೀವ್ ಇಂಡಿಯಾ ನೋಟಿಸ್'. ಈ ಆದೇಶ ಪಾಲಿಸದಿದ್ದರೆ ಬಂಧನ, ಗಡಿಪಾರು ಅಥವಾ ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸುವ ಕ್ರಮ ಕೈಗೊಳ್ಳಬಹುದು. ನ್ಯಾಯಾಲಯಕ್ಕೆ ಸಲ್ಲಿಸಿರುವ ಲಿಖಿತ ಭರವಸೆಯಲ್ಲಿ, ಒಸಿಐ ಕಾರ್ಡ್ ಹೊಂದಿರುವವರಿಗೆ ಅನ್ವಯವಾಗುವ ನಿರ್ಬಂಧಗಳನ್ನು ಉಲ್ಲೇಖಿಸಿರುವ ಇಮ್ರಾನ್ ಖಾನ್, ಮುಂದೆ ಯಾವುದೇ ರೀತಿಯ ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
"ಅಮೆರಿಕದಲ್ಲಿ ಕಳೆದ ಎರಡು ವರ್ಷ ಕಳೆದಿದ್ದನ್ನು ಹೊರತುಪಡಿಸಿದರೆ, ನಾನು ನನ್ನ ಜೀವನದ ಬಹುತೇಕ ಸಮಯವನ್ನು ಭಾರತದಲ್ಲೇ ಕಳೆದಿದ್ದೇನೆ. ಭಾರತವೇ ನನ್ನ ಮನೆ. ನನ್ನ ಮಗು ಇಲ್ಲಿಯೇ ಇದೆ. ನನ್ನ ವೃತ್ತಿ ಮತ್ತು ವೈಯಕ್ತಿಕ ಬದುಕು ಇಲ್ಲಿಯೇ ನೆಲೆಗೊಂಡಿದೆ. ನನ್ನ ಕೆಲಸ, ಕುಟುಂಬ ಮತ್ತು ಬೇರುಗಳೆಲ್ಲವೂ ಭಾರತದಲ್ಲಿವೆ" ಎಂದು ಇಮ್ರಾನ್ ಖಾನ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಬೇಷರತ್ ಕ್ಷಮೆಯಾಚನೆ
"ಪ್ರತಿಭಟನೆ ಅಥವಾ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳ ಮುಂದೆ ಉದ್ದೇಶಪೂರ್ವಕವಲ್ಲದೆ ಏನಾದರೂ ಹೇಳಿಕೆ ನೀಡಿದ್ದರೆ ಅದಕ್ಕೆ ಅವರು ವಿಷಾದ ವ್ಯಕ್ತಪಡಿಸಿದ್ದಾರೆ" ಎಂದು ಇಮ್ರಾನ್ ಖಾನ್ ಅವರ ಕಾನೂನು ತಂಡದ ಭಾಗವಾಗಿರುವ ಎಂಝೆಡ್ಎಂ ಲೀಗಲ್ ಏಡ್ನ ವ್ಯವಸ್ಥಾಪಕ ಪಾಲುದಾರ ವಕೀಲ ಜುಲ್ಫಿಕರ್ ಮೆಮನ್ ತಿಳಿಸಿದ್ದಾರೆ.
ಇಷ್ಟು ವರ್ಷ ಇಲ್ಲದ ಪ್ರತಿಭಟನೆ ಈಗೇಕೆ? ಕೋರ್ಟ್ ಪ್ರಶ್ನೆ
ವಿಚಾರಣೆ ವೇಳೆ ಇಮ್ರಾನ್ ಖಾನ್ ಅವರ ಪ್ರತಿಭಟನೆಯ ಆಸಕ್ತಿಯ ಬಗ್ಗೆ ಬಾಂಬೆ ಹೈಕೋರ್ಟ್ ಪ್ರಶ್ನೆ ಎತ್ತಿದೆ. "ಇಷ್ಟು ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದೀರಿ. ಆದರೆ ಈ ಹಿಂದೆ ಎಂದಿಗೂ ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸಿರಲಿಲ್ಲ. ಇಷ್ಟು ವರ್ಷಗಳ ನಂತರ ಈಗ ಇದ್ದಕ್ಕಿದ್ದಂತೆ ಪ್ರತಿಭಟನೆಯಲ್ಲಿ ಭಾಗವಹಿಸಲು ನಿರ್ಧರಿಸಿದ್ದೇಕೆ?" ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಮುಖ್ಯ ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಅವರು, ಒಸಿಐ ಕಾರ್ಡ್ ಹೊಂದಿರುವವರು ಭಾರತದಲ್ಲಿ ವಾಸಿಸುತ್ತಿರುವಾಗ ಸರ್ಕಾರವನ್ನು ಟೀಕಿಸುವುದು ಅಥವಾ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂತಹ ವರ್ತನೆಯನ್ನು ಸಹಿಸುವುದಿಲ್ಲ ಎಂದೂ ಎಚ್ಚರಿಸಿದ್ದಾರೆ.
"ನೀವು ಅಮೆರಿಕಕ್ಕೆ ಹೋಗಿ ಅಲ್ಲಿ ಪ್ರತಿಭಟನೆ ಮಾಡಿ. ಅಷ್ಟೇ ಅಲ್ಲ, ಅಲ್ಲಿಗೆ ಹೋಗಿ ನಿಮ್ಮ ಮತವನ್ನೂ ಚಲಾಯಿಸಬಹುದು. ಆದರೆ ಇಲ್ಲಿ ನೀವು ಪ್ರತಿಭಟನೆ ಮಾಡುವುದನ್ನು ಸಹಿಸುವುದಿಲ್ಲ" ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ ಎಂದು ಲೈವ್ಲಾ ವರದಿ ಮಾಡಿದೆ.
ಒಸಿಐ ಕಾರ್ಡ್ ಹೊಂದಿರುವವರು ಭಾರತೀಯ ಮೂಲದ ವಿದೇಶಿ ಪ್ರಜೆಗಳಾಗಿದ್ದು, ಅವರಿಗೆ ಜೀವಿತಾವಧಿಯ ವೀಸಾ ಸೌಲಭ್ಯ ದೊರೆಯುತ್ತದೆ. ಆದರೆ, ಭಾರತದಲ್ಲಿ ಮತದಾನ ಮಾಡುವ ಅಥವಾ ಚುನಾವಣೆಗೆ ಸ್ಪರ್ಧಿಸುವ ಹಕ್ಕು ಇರುವುದಿಲ್ಲ. ಒಸಿಐ ನಿಯಮಗಳಲ್ಲಿ ಸಾರ್ವಜನಿಕ ಪ್ರತಿಭಟನೆಯಲ್ಲಿ ಭಾಗವಹಿಸುವುದನ್ನು ಪೂರ್ವಾನುಮತಿ ಪಡೆಯಬೇಕಾದ ಚಟುವಟಿಕೆ ಎಂದು ನೇರವಾಗಿ ಉಲ್ಲೇಖಿಸಿಲ್ಲ. ಆದರೆ, ಸಂವಿಧಾನದ 19ನೇ ವಿಧಿಯಡಿ ನೀಡಲಾಗಿರುವ ವಾಕ್ ಸ್ವಾತಂತ್ರ್ಯ ಮತ್ತು ಶಾಂತಿಯುತ ಸಭೆ ಸೇರುವ ಹಕ್ಕುಗಳು ಭಾರತೀಯ ನಾಗರಿಕರಿಗೆ ಮಾತ್ರ ಅನ್ವಯಿಸುತ್ತವೆ.
ದೇಶದ ಸಾರ್ವಭೌಮತ್ವ ಮತ್ತು ಭದ್ರತೆಗೆ ಧಕ್ಕೆ ತರುವಂತಹ ಕಾರಣಗಳಿದ್ದರೆ ಪೌರತ್ವ ಕಾಯ್ದೆಯ ಸೆಕ್ಷನ್ 7ಡಿ ಅಡಿಯಲ್ಲಿ ಒಸಿಐ ನೋಂದಣಿಯನ್ನು ರದ್ದುಗೊಳಿಸುವ ಅವಕಾಶವೂ ಇದೆ. ಇನ್ನು, ವೀಸಾ ನಿಯಮಗಳನ್ನು ಉಲ್ಲಂಘಿಸುವ ವಿದೇಶಿ ಪ್ರಜೆಗಳು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಹಾರಾಷ್ಟ್ರ ಸರ್ಕಾರವೂ ನ್ಯಾಯಾಲಯಕ್ಕೆ ತಿಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಪ್ರತಿಕ್ರಿಯೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಡಿಸೆಂಬರ್ 7ಕ್ಕೆ ಮುಂದೂಡಲಾಗಿದೆ. ಅಲ್ಲಿಯವರೆಗೆ ಇಮ್ರಾನ್ ಖಾನ್ ಭಾರತ ತೊರೆಯುವಂತೆ ನೀಡಲಾಗಿದ್ದ ನೋಟಿಸ್ಗೆ ತಡೆ ಮುಂದುವರಿಯಲಿದೆ.
'ಜಾನೆ ತು... ಯಾ ಜಾನೆ ನಾ' ಚಿತ್ರದ ಮೂಲಕ ಖ್ಯಾತಿ ಗಳಿಸಿರುವ ಇಮ್ರಾನ್ ಖಾನ್ ಯಾವುದೇ ರಾಜಕೀಯ ಪಕ್ಷ ಅಥವಾ ಪ್ರತಿಭಟನೆ ಆಯೋಜಿಸಿದ್ದ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿಲ್ಲ ಎಂದು ಅವರ ಕಾನೂನು ತಂಡ ಸ್ಪಷ್ಟಪಡಿಸಿದೆ.