ನವದೆಹಲಿ: ಪತ್ನಿಯನ್ನು “ನಿಷ್ಪ್ರಯೋಜಕಿ” ಮತ್ತು “ಮೂರ್ಖಿ” ಎಂದು ಕರೆಯುವ ಪತಿಯ ಅಭ್ಯಾಸವು ಕೇವಲ ಸ್ವಭಾವದ ದೋಷವಾಗಿದೆಯೇ ಹೊರತು, ಅದನ್ನು ಅಪರಾಧ ಎನಿಸುವ ಬೆದರಿಕೆ ಅಥವಾ ಗಂಭೀರ ಹಲ್ಲೆಯ ಅಪರಾಧವೆಂದು ಪರಿಗಣಿಸಿ, ಪತ್ನಿಯ ಆತ್ಮಹತ್ಯೆಗೆ ಆತನನ್ನು ಕ್ರಿಮಿನಲ್ ಹೊಣೆಗಾರನನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಯಾವುದೇ ಪೂರಕ ಸಾಕ್ಷ್ಯಗಳಿಲ್ಲದ ಸಂದರ್ಭದಲ್ಲಿ ಹೀಗೆ ಮಾಡುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಮನಮೋಹನ್ ಅವರನ್ನೊಳಗೊಂಡ ನ್ಯಾಯಪೀಠ, ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಮನಸ್ಸಿನಲ್ಲಿ ಯಾವ ಆಲೋಚನೆಗಳಿದ್ದವು ಎಂಬುದನ್ನು ಆಧಾರವಾಗಿಟ್ಟುಕೊಂಡು, ದಾಖಲೆಗಳಲ್ಲಿರುವ ಯಾವುದೇ ನಿರ್ದಿಷ್ಟ ಸಾಕ್ಷ್ಯವಿಲ್ಲದೆ ಪತಿ ಮತ್ತು ಆತನ ಕುಟುಂಬ ಸದಸ್ಯರನ್ನು ಆತ್ಮಹತ್ಯೆಗೆ ಕಾರಣರೆಂದು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ನಿನ್ನೆ ನವೆಂಬರ್ 2ರಂದು ನ್ಯಾಯಾಲಯ ಪಿಯೂಷ್ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿತು. 2025ರ ಜನವರಿ 8ರಂದು ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಗೊಳಿಸಿತು. ಅಲ್ಲದೆ, ಔರಂಗಾಬಾದ್ನ ಸತಾರಾ ಪೊಲೀಸ್ ಠಾಣೆಯಲ್ಲಿ 2023ರ ಜೂನ್ 30ರಂದು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ಗಳಾದ 304ಬಿ, 323, 498ಎ ಮತ್ತು 504ರ ಜತೆಗೆ 34ನೇ ಸೆಕ್ಷನ್ ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ಗಳಾದ 3 ಮತ್ತು 4ರ ಅಡಿಯಲ್ಲಿ ದಾಖಲಿಸಲಾಗಿದ್ದ ಎಫ್ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ಮುಂದಿನ ಪ್ರಕ್ರಿಯೆಗಳನ್ನು ರದ್ದುಗೊಳಿಸಿತು.
ಈ ದಂಪತಿ 2021ರ ಜನವರಿ 3ರಂದು ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು. ಆರಂಭದಲ್ಲಿ ಚಂದ್ರಪುರದಲ್ಲಿ ವಾಸವಿದ್ದ ಅವರು, 2022ರ ಫೆಬ್ರವರಿ 28ರಂದು ಕೆನಡಾದ ಟೊರೊಂಟೊಗೆ ತೆರಳಿದ್ದರು.
2023ರ ಜೂನ್ 11ರಂದು ಪತ್ನಿ ತಾವು ವಾಸವಿದ್ದ ಅಪಾರ್ಟ್ಮೆಂಟ್ನ 22ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾದ ಕೈಬರಹದ ಡೆತ್ ನೋಟ್ ನಲ್ಲಿ, ನಾನು ಜೀವನದಲ್ಲಿ ಸೋತಿದ್ದೇನೆ. ನನಗೆ ಉದ್ಯೋಗ ಸಿಗುತ್ತಿಲ್ಲ. ನಾನು ಮೂರ್ಖಳು ಮತ್ತು ನಿಷ್ಪ್ರಯೋಜಕಿ ಎಂಬ ಭಾವನೆ ನನ್ನನ್ನು ಕಾಡುತ್ತಿದೆ. ಈ ಭಾವನೆಯೊಂದಿಗೆ ಬದುಕಲು ನನಗೆ ಇಷ್ಟವಿಲ್ಲ. ಹಾಗಾಗಿ ಜೀವನವನ್ನು ಅಂತ್ಯಗೊಳಿಸುತ್ತಿದ್ದೇನೆ... ನನ್ನ ಎಲ್ಲ ಅಂಗಾಂಗಗಳನ್ನು ಅಗತ್ಯವಿರುವವರಿಗೆ ದಾನ ಮಾಡಿ, ಇಲ್ಲಿಯೇ ನನ್ನ ಅಂತ್ಯಕ್ರಿಯೆ ನೆರವೇರಿಸಿ. ಇದೇ ನನ್ನ ಕೊನೆಯ ಆಸೆ” ಎಂದು ಬರೆಯಲಾಗಿತ್ತು.
ವರದಕ್ಷಿಣೆ ಸಾವು ಎಂದು ಪರಿಗಣಿಸಲು ಐಪಿಸಿಯ ಸೆಕ್ಷನ್ 304ಬಿ ಅಡಿಯಲ್ಲಿ, ವಿವಾಹವಾದ ಏಳು ವರ್ಷಗಳೊಳಗೆ ಅಸಹಜ ಸನ್ನಿವೇಶಗಳಲ್ಲಿ ಸಾವು ಸಂಭವಿಸಿರಬೇಕು ಮತ್ತು ಸಾವಿಗೂ ಮುನ್ನ ವರದಕ್ಷಿಣೆ ಬೇಡಿಕೆಗೆ ಸಂಬಂಧಿಸಿದಂತೆ ಮಹಿಳೆಗೆ ಕ್ರೌರ್ಯ ಅಥವಾ ಕಿರುಕುಳ ನೀಡಲಾಗಿತ್ತು ಎಂಬುದನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ಈ ಪ್ರಕರಣದಲ್ಲಿ ಅಂತಹ ಯಾವುದೇ ಬಲವಾದ ಸಾಕ್ಷ್ಯಗಳಿಲ್ಲ. ಮಾನಸಿಕ ಕಿರುಕುಳ ನೀಡಲಾಗಿದೆ ಎಂಬ ಅಸ್ಪಷ್ಟ ಮತ್ತು ಸಾಮಾನ್ಯ ಆರೋಪಗಳು, ನಿರ್ದಿಷ್ಟ ಘಟನೆಗಳ ಉಲ್ಲೇಖವಿಲ್ಲದೆ ಐಪಿಸಿಯ ಸೆಕ್ಷನ್ 498ಎ ಅಡಿಯಲ್ಲಿ ಕ್ರೌರ್ಯದ ವ್ಯಾಖ್ಯಾನಕ್ಕೆ ಒಳಪಡುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಪ್ರೀತಿ ಮತ್ತು ವಾತ್ಸಲ್ಯದಿಂದ, ಯಾವುದೇ ಪೂರ್ವ ಬೇಡಿಕೆಯಿಲ್ಲದೆ ವಿನಿಮಯ ಮಾಡಿಕೊಳ್ಳುವ ಸಾಂಪ್ರದಾಯಿಕ ಉಡುಗೊರೆಗಳನ್ನು ವರದಕ್ಷಿಣೆ ಎಂದು ಪರಿಗಣಿಸಲಾಗುವುದಿಲ್ಲ ಎಂದೂ ಹೇಳಿದೆ.
ಪತಿ ತನ್ನ ಪತ್ನಿಯನ್ನು “ಮೂರ್ಖಿ” ಮತ್ತು “ನಿಷ್ಪ್ರಯೋಜಕಿ” ಎಂದು ಕರೆಯುತ್ತಿದ್ದ ಎಂಬ ಆರೋಪವನ್ನು ಪ್ರಾಥಮಿಕವಾಗಿ ಒಪ್ಪಿಕೊಂಡರೂ, ಅದನ್ನು ಯಾವುದೇ ರೀತಿಯಲ್ಲೂ ಕ್ರೌರ್ಯ ಅಥವಾ ಅಪರಾಧ ಎನಿಸುವ ಬೆದರಿಕೆ ಎಂದು ಪರಿಗಣಿಸಲಾಗದು. ಹೆಚ್ಚೆಂದರೆ ಅದು ಪತಿಯ ಸ್ವಭಾವವನ್ನು ಪ್ರತಿಬಿಂಬಿಸಬಹುದು. ಆದರೆ ಅದಕ್ಕೆ ಕ್ರಿಮಿನಲ್ ಸ್ವರೂಪ ನೀಡಿ, ಪತ್ನಿಯ ಆತ್ಮಹತ್ಯೆಗೆ ಕಾರಣವೆಂದು ಬಿಂಬಿಸುವಷ್ಟು ಗಂಭೀರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
1992ರಲ್ಲಿ ಹರಿಯಾಣ ರಾಜ್ಯ ಮತ್ತು ಭಜನ್ ಲಾಲ್ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ಈ ಪ್ರಕರಣದಲ್ಲಿನ ಆರೋಪಗಳು ಅಸ್ಪಷ್ಟವಾಗಿದ್ದು, ಸಾಮಾನ್ಯ ಸ್ವರೂಪದ್ದಾಗಿವೆ ಮತ್ತು ಅವುಗಳಲ್ಲಿ ಪ್ರಾಮಾಣಿಕ ಉದ್ದೇಶ ಕಂಡುಬರುತ್ತಿಲ್ಲ ಎಂದು ಹೇಳಿ, ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿತು.