ಅಮರಾವತಿ: ಇಂದು ಮಂಗಳವಾರ ನಸುಕಿನ ಜಾವ ಆಂಧ್ರಪ್ರದೇಶದ ದಕ್ಷಿಣ ಕರಾವಳಿಗೆ ಅಪ್ಪಳಿಸಿದ ತೀವ್ರ ಚಂಡಮಾರುತ ‘ಮುರಸು’ ಭಾರಿ ಅನಾಹುತ ಸೃಷ್ಟಿಸಿದೆ. ಚಂಡಮಾರುತದ ಅಬ್ಬರಕ್ಕೆ ಸಾವಿರಾರು ಮರಗಳು ಧರೆಗುರುಳಿದ್ದು, ನೂರಾರು ವಿದ್ಯುತ್ ಕಂಬಗಳು ಹಾನಿಗೊಳಗಾಗಿವೆ. ಮೀನುಗಾರಿಕಾ ದೋಣಿಗಳು ನಾಶವಾಗಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ.
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಪ್ರಕಾಶಂ ಜಿಲ್ಲೆಯ ಒಂಗೋಲ್ ಸಮೀಪ ನೆಲ್ಲೂರು ಮತ್ತು ನರಸಾಪುರ ನಡುವಿನ ಕರಾವಳಿಗೆ ಇಂದು ನಸುಕಿನ ಜಾವ 3.30ರಿಂದ 5.30ರ ಅವಧಿಯಲ್ಲಿ ಚಂಡಮಾರುತ ಅಪ್ಪಳಿಸಿದೆ. ಈ ವೇಳೆ ಗಂಟೆಗೆ 100ರಿಂದ 110 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಿದ್ದು, ಗಾಳಿಯ ವೇಗ ಕೆಲವೊಮ್ಮೆ ಗಂಟೆಗೆ 120 ಕಿ.ಮೀ.ವರೆಗೂ ತಲುಪಿದೆ.
ಪ್ರಕಾಶಂ, ಬಾಪಟ್ಲ, ಪಲ್ನಾಡು ಮತ್ತು ಗುಂಟೂರು ಜಿಲ್ಲೆಗಳು ಚಂಡಮಾರುತದ ತೀವ್ರ ಹೊಡೆತಕ್ಕೆ ಸಿಲುಕಿವೆ. ಭಾರಿ ಮಳೆಯಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು, ಸಂಪರ್ಕ ವ್ಯವಸ್ಥೆಯಲ್ಲಿಯೂ ವ್ಯತ್ಯಯ ಉಂಟಾಗಿದೆ. ಜಮೀನುಗಳಲ್ಲಿ ಬೆಳೆದು ನಿಂತಿದ್ದ ಬೆಳೆಗಳು ಹಾನಿಗೀಡಾಗಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ.
ನಿನ್ನೆ ಸೋಮವಾರ ಬೆಳಗ್ಗೆ 8.30ರಿಂದ ಇಂದು ನಸುಕಿನ ಜಾವ 5 ಗಂಟೆಯವರೆಗೆ ಪ್ರಕಾಶಂ ಜಿಲ್ಲೆಯ ಕೋತಪಟ್ಟಣಂನಲ್ಲಿ 16.4 ಸೆಂ.ಮೀ ಮಳೆಯಾಗಿದ್ದು, ಈ ಅವಧಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ದಾಖಲಾದ ಪ್ರದೇಶ ಎನಿಸಿದೆ. ಇದೇ ಜಿಲ್ಲೆಯ ನಾಗುಲುಪ್ಪಲಪಾಡುವಿನಲ್ಲಿ 11.4 ಸೆಂ.ಮೀ ಹಾಗೂ ಬಾಪಟ್ಲ ಜಿಲ್ಲೆಯ ಚಿರಾಲದಲ್ಲಿ 10 ಸೆಂ.ಮೀ ಮಳೆಯಾಗಿದೆ.
ಚಂಡಮಾರುತದ ಅಬ್ಬರದಿಂದ ಮನೆಗಳು, ಮೀನುಗಾರಿಕಾ ದೋಣಿಗಳು ಹಾಗೂ ಇತರ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದ್ದು, ಕರಾವಳಿ ಗ್ರಾಮಗಳ ನಿವಾಸಿಗಳು ತಮ್ಮ ಸಂಕಷ್ಟದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಕಳೆದ 14 ವರ್ಷಗಳಲ್ಲಿ ನಾವು ಕಂಡ ಅತ್ಯಂತ ಭೀಕರ ಚಂಡಮಾರುತ ಇದಾಗಿದೆ. ಸರ್ಕಾರ ನಮಗೆ ಸಾಕಷ್ಟು ನೆರವು ನೀಡಿದೆ. ನಮ್ಮ ಗ್ರಾಮದಿಂದ ಸುಮಾರು 400 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳೂ ಸುರಕ್ಷಿತ ಸ್ಥಳಗಳಿಗೆ ತೆರಳಲು ನೆರವಾಗಿವೆ ಎಂದು ಪ್ರಕಾಶಂ ಜಿಲ್ಲೆಯ ಕೋತಪಟ್ಟಣಂನ ಮೀನುಗಾರ್ತಿ ಕೃಷ್ಣಮ್ಮ ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಮೀನುಗಾರಿಕಾ ದೋಣಿಗಳಿಗೆ ಉಂಟಾಗಿರುವ ಹಾನಿಯ ಪ್ರಮಾಣವನ್ನು ಇನ್ನೂ ಪರಿಶೀಲಿಸಿಲ್ಲ ಎಂದು ಹೇಳಿದ್ದಾರೆ.
ಚಂಡಮಾರುತದಿಂದ ರಸ್ತೆ ಸಾರಿಗೆ ವ್ಯವಸ್ಥೆಯೂ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ಗೋಚರತೆ ಕಡಿಮೆಯಾಗಿ ವಾಹನ ಚಾಲನೆ ಕಷ್ಟಕರವಾಗಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಲವು ವಾಹನಗಳು ಸಿಲುಕಿಕೊಂಡಿವೆ. ರಸ್ತೆಗಳ ಮೇಲೆ ಮರಗಳು ಉರುಳಿಬಿದ್ದಿರುವುದು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿರುವುದು ಸಂಚಾರಕ್ಕೆ ಮತ್ತಷ್ಟು ಅಡ್ಡಿಯಾಗಿದೆ.
ದುರ್ಬಲಗೊಳ್ಳಲಿರುವ ಚಂಡಮಾರುತ ‘ಮುರಸು’
ಇಂದು ಮಧ್ಯಾಹ್ನ ವೇಳೆಗೆ ಚಂಡಮಾರುತದ ತೀವ್ರತೆ ಕ್ರಮೇಣ ಕಡಿಮೆಯಾಗಿ ಸಾಮಾನ್ಯ ಚಂಡಮಾರುತವಾಗಿ ದುರ್ಬಲಗೊಳ್ಳುವ ಸಾಧ್ಯತೆಯಿದೆ. ಇಂದು ಮಧ್ಯರಾತ್ರಿ ವೇಳೆಗೆ ಅದು ತೀವ್ರ ವಾಯುಭಾರ ಕುಸಿತವಾಗಿ ಬದಲಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಆಂಧ್ರಪ್ರದೇಶದ ಕರಾವಳಿಯ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆಯಿಂದ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕೆಲವು ಪ್ರತ್ಯೇಕ ಸ್ಥಳಗಳಲ್ಲಿ ಅತ್ಯಂತ ಭಾರಿ ಮಳೆಯಾಗುವ ಮುನ್ಸೂಚನೆಯನ್ನೂ ನೀಡಲಾಗಿದೆ. ದಕ್ಷಿಣ ಕರಾವಳಿ ಆಂಧ್ರಪ್ರದೇಶದಲ್ಲಿ ಸಂಜೆವರೆಗೂ ಭಾರಿ ಮಳೆ ಮುಂದುವರಿಯುವ ನಿರೀಕ್ಷೆಯಿದೆ.