ಪವನ್ ಕಲ್ಯಾಣ್ 
ದೇಶ

ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು; 13 ವರ್ಷಗಳ ದಾಂಪತ್ಯ ಜೀವನ ಅಂತ್ಯ, ಪತ್ನಿ ಅನ್ನಾ ಜೊತೆ ವಿಚ್ಛೇದನ ಘೋಷಣೆ..!

ನಮ್ಮ ದಾಂಪತ್ಯ ಜೀವನ ಅಂತ್ಯಗೊಂಡಿದ್ದರೂ, ನಾವು ಉತ್ತಮ ಸ್ನೇಹಿತರಾಗಿ ಮತ್ತು ನಮ್ಮ ಮುದ್ದಾದ ಮಕ್ಕಳ ಬಗ್ಗೆ ಸಮಾನ ಕಾಳಜಿ ಹೊಂದಿರುವ ಪೋಷಕರಾಗಿ ಮುಂದುವರಿಯುತ್ತೇವೆ. ಅವರ ಸಂತೋಷ ಮತ್ತು ಯೋಗಕ್ಷೇಮವೇ ನಮ್ಮಿಬ್ಬರ ಆದ್ಯತೆಯಾಗಿರಲಿದೆ.

ಅಮರಾವತಿ: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಖ್ಯಾತ ನಟ ಪವನ್ ಕಲ್ಯಾಣ್ ಮತ್ತು ಅವರ ಪತ್ನಿ ಅನ್ನಾ ಕೊನಿಡೇಲಾ (ಮೂಲತಃ ಲೆಜ್ನೆವಾ) ಅವರು ತಮ್ಮ 13 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ. ಪರಸ್ಪರ ಒಪ್ಪಿಗೆಯ ಮೇರೆಗೆ ಬೇರೆಯಾಗುತ್ತಿರುವುದಾಗಿ ದಂಪತಿಗಳು ಅಧಿಕೃತವಾಗಿ ಘೋಷಿಸಿದ್ದಾರೆ.

ಪವನ್ ಕಲ್ಯಾಣ್ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಡರಾತ್ರಿ ಪ್ರಕಟಿಸಿರುವ ಜಂಟಿ ಹೇಳಿಕೆಯಲ್ಲಿ, ಪರಸ್ಪರ ಒಪ್ಪಿಗೆ ಮತ್ತು ಗೌರವದೊಂದಿಗೆ ಈ ನಿರ್ಧಾರ ಕೈಗೊಂಡಿರುವುದಾಗಿ ದಂಪತಿ ತಿಳಿಸಿದ್ದಾರೆ. ಬೇರ್ಪಟ್ಟರೂ ಉತ್ತಮ ಸ್ನೇಹಿತರಾಗಿ ಮುಂದುವರಿಯುವುದಾಗಿ ಅವರು ಹೇಳಿದ್ದಾರೆ.

ನಮ್ಮ ದಾಂಪತ್ಯ ಜೀವನ ಅಂತ್ಯಗೊಂಡಿದ್ದರೂ, ನಾವು ಉತ್ತಮ ಸ್ನೇಹಿತರಾಗಿ ಮತ್ತು ನಮ್ಮ ಮುದ್ದಾದ ಮಕ್ಕಳ ಬಗ್ಗೆ ಸಮಾನ ಕಾಳಜಿ ಹೊಂದಿರುವ ಪೋಷಕರಾಗಿ ಮುಂದುವರಿಯುತ್ತೇವೆ. ಅವರ ಸಂತೋಷ ಮತ್ತು ಯೋಗಕ್ಷೇಮವೇ ನಮ್ಮಿಬ್ಬರ ಆದ್ಯತೆಯಾಗಿರಲಿದೆ ಎಂದು ತಿಳಿಸಿದ್ದಾರೆ.

ಈ ವೈಯಕ್ತಿಕ ಬದಲಾವಣೆಯ ಸಂದರ್ಭದಲ್ಲಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಹಿತೈಷಿಗಳಲ್ಲಿ ದಂಪತಿ ಮನವಿ ಮಾಡಿದ್ದಾರೆ.

ನಮ್ಮ ಜೀವನದ ಈ ವೈಯಕ್ತಿಕ ಬದಲಾವಣೆಯ ಸಂದರ್ಭದಲ್ಲಿ ನಿಮ್ಮ ತಿಳಿವಳಿಕೆ, ದಯೆ ಮತ್ತು ನಮ್ಮ ಖಾಸಗಿತನಕ್ಕೆ ಗೌರವ ನೀಡಬೇಕೆಂದು ಕೋರುತ್ತೇವೆ. ಈ ಪಯಣದಲ್ಲಿ ನಮ್ಮೊಂದಿಗೆ ನಿಂತ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಈ ಬೇರ್ಪಡುವಿಕೆಯೊಂದಿಗೆ ಪವನ್ ಕಲ್ಯಾಣ್ ಅವರ ಮೂರನೇ ದಾಂಪತ್ಯ ಜೀವನವೂ ಅಂತ್ಯಗೊಂಡಂತಾಗಿದೆ.

ಪವನ್ ಕಲ್ಯಾಣ್ 1997ರಲ್ಲಿ ನಂದಿನಿ ಅವರನ್ನು ವಿವಾಹವಾಗಿದ್ದರು. ಆದರೆ, 1999ರಲ್ಲಿ ಇಬ್ಬರೂ ಪ್ರತ್ಯೇಕವಾಗಿದ್ದರು. ಬಳಿಕ 2009ರಲ್ಲಿ ನಟಿ ರೇಣು ದೇಸಾಯಿ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಒಬ್ಬ ಪುತ್ರಿ ಮತ್ತು ಒಬ್ಬ ಪುತ್ರ ಇದ್ದಾರೆ. 2012ರಲ್ಲಿ ಅವರ ದಾಂಪತ್ಯ ಜೀವನ ವಿಚ್ಛೇದನದೊಂದಿಗೆ ಅಂತ್ಯಗೊಂಡಿತ್ತು. 2013ರಲ್ಲಿ ರಷ್ಯಾ ಮೂಲದ ಅನ್ನಾ ಅವರನ್ನು ಪವನ್ ಕಲ್ಯಾಣ್ ವಿವಾಹವಾಗಿದ್ದರು. ಈ ದಂಪತಿಗೆ ಪೋಲೆನಾ ಅಂಜನಾ ಪವನೋವಾ ಮತ್ತು ಮಾರ್ಕ್ ಶಂಕರ್ ಪವನೋವಿಚ್ ಎಂಬ ಇಬ್ಬರು ಮಕ್ಕಳಿದ್ದಾರೆ.

ನಟರಾದ ಚಿರಂಜೀವಿ ಮತ್ತು ನಾಗೇಂದ್ರ ಬಾಬು ಅವರ ಕಿರಿಯ ಸಹೋದರರಾಗಿರುವ ಪವನ್ ಕಲ್ಯಾಣ್, 1996ರಲ್ಲಿ ತೆರೆಕಂಡ 'ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.

2008ರಲ್ಲಿ ತಮ್ಮ ಹಿರಿಯ ಸಹೋದರ ಚಿರಂಜೀವಿ ಸ್ಥಾಪಿಸಿದ್ದ ಪ್ರಜಾರಾಜ್ಯಂ ಪಕ್ಷದ ಯುವ ಘಟಕ 'ಯುವರಾಜ್ಯಂ'ನ ಅಧ್ಯಕ್ಷರಾಗಿ ರಾಜಕೀಯ ಜೀವನ ಆರಂಭಿಸಿದ್ದರು. ಆ ಸಂದರ್ಭದಲ್ಲಿ ಅವರು ಚುನಾವಣೆಗೆ ಸ್ಪರ್ಧಿಸಿರಲಿಲ್ಲ ಅಥವಾ ಯಾವುದೇ ಸಾಂವಿಧಾನಿಕ ಹುದ್ದೆಯನ್ನೂ ಅಲಂಕರಿಸಿರಲಿಲ್ಲ. ಆದರೆ, ಪಕ್ಷದ ಪರವಾಗಿ ಸಕ್ರಿಯವಾಗಿ ಪ್ರಚಾರ ನಡೆಸಿದ್ದರು. 2011ರಲ್ಲಿ ಪ್ರಜಾರಾಜ್ಯಂ ಪಕ್ಷ ಕಾಂಗ್ರೆಸ್‌ನೊಂದಿಗೆ ವಿಲೀನಗೊಂಡ ಬಳಿಕ ಅಸಮಾಧಾನ ವ್ಯಕ್ತಪಡಿಸಿದ್ದ ಪವನ್ ಕಲ್ಯಾಣ್, ರಾಜಕೀಯ ಚಟುವಟಿಕೆಗಳಿಂದ ವಿರಾಮ ಪಡೆದಿದ್ದರು.

2014ರ ಮಾರ್ಚ್‌ನಲ್ಲಿ ಜನಸೇನಾ ಪಕ್ಷವನ್ನು ಸ್ಥಾಪಿಸಿದ ಅವರು, ಅದೇ ವರ್ಷದ ಚುನಾವಣೆಯಲ್ಲಿ ಸಕ್ರಿಯವಾಗಿ ಪ್ರಚಾರ ನಡೆಸಿದ್ದರು.

2019ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜನಸೇನಾ ಪಕ್ಷ 140 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಪವನ್ ಕಲ್ಯಾಣ್ ಗಾಜುವಾಕ ಮತ್ತು ಭೀಮಾವರಂ ಕ್ಷೇತ್ರಗಳಿಂದ ಕಣಕ್ಕಿಳಿದಿದ್ದರೂ, ಎರಡೂ ಕ್ಷೇತ್ರಗಳಲ್ಲಿ ವೈಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಸೋಲು ಕಂಡಿದ್ದರು. ಪಕ್ಷವು ರಜೋಲ್ ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿತ್ತು.

2024ರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಜನಸೇನಾ, ತೆಲುಗು ದೇಶಂ ಪಕ್ಷ (ಟಿಡಿಪಿ) ಹಾಗೂ ಬಿಜೆಪಿ ನಡುವೆ ಮೈತ್ರಿ ಏರ್ಪಡಿಸುವಲ್ಲಿ ಪವನ್ ಕಲ್ಯಾಣ್ ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ಪಕ್ಷ ಸ್ಪರ್ಧಿಸುವ ಕ್ಷೇತ್ರಗಳ ಸಂಖ್ಯೆಯನ್ನು ಸೀಮಿತಗೊಳಿಸುವ ಮೂಲಕ ಮೈತ್ರಿಗೆ ಸಹಕರಿಸಿದ್ದರು. ಈ ಮೈತ್ರಿಕೂಟ ಭರ್ಜರಿ ಗೆಲುವು ದಾಖಲಿಸಿತ್ತು. ಜನಸೇನಾ ಸ್ಪರ್ಧಿಸಿದ್ದ ಎಲ್ಲ ಕ್ಷೇತ್ರಗಳಲ್ಲೂ ಜಯಗಳಿಸಿತ್ತು. 2024ರ ಜೂನ್ 14ರಂದು ಪವನ್ ಕಲ್ಯಾಣ್ ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚೀನಾ 'Spy' ಜೊತೆ ಪ್ರೀತಿ: Nvidia ಸಿಇಒ ಜೆನ್ಸನ್ ಹುವಾಂಗ್‌ಗೆ ಸಂಕಷ್ಟ; FBI ತನಿಖೆ ನಡೆಯುತ್ತಿದೆ ಎಂದ ಟ್ರಂಪ್, ಷೇರು ಮೌಲ್ಯದಲ್ಲಿ ಭಾರೀ ಕುಸಿತ..!

ದೆಹಲಿ ವಾಯು ಗುಣಮಟ್ಟದಲ್ಲಿ ಕೊಂಚ ಸುಧಾರಣೆ: 307ಕ್ಕೆ ಇಳಿದ AQI; ಆದರೂ 'ಅತ್ಯಂತ ಕಳಪೆ' ಸ್ಥಿತಿ ಮುಂದುವರಿಕೆ, ಧೂಳು ನಿಯಂತ್ರಣಕ್ಕೆ ರಸ್ತೆಗಳಲ್ಲಿ ನೀರು ಸಿಂಪಡಣೆ..!

ದೀಪಾವಳಿಯನ್ನು 'ಖುಷಿಯೋಂ ಕಾ ಈದ್' ಎಂದ ಖರ್ಗೆ: 'ಈದ್' ಎಂದರೆ ಹಬ್ಬವಷ್ಟೇ, ಧರ್ಮವಲ್ಲ: ತಂದೆ ಹೇಳಿಕೆ ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ

Sting operation ಸುಳಿಯಲ್ಲಿ 'ಕೈ' ಪಾಳಯ: ಡ್ಯಾಮೇಜ್ ಕಂಟ್ರೋಲ್‌ಗೆ ಮುಂದು; ದಿಢೀರ್ ಸಿದ್ದು ಭೇಟಿಯಾದ ಡಿಕೆಶಿ, ಒಂದೂವರೆ ಗಂಟೆ ರಹಸ್ಯ ಮಾತುಕತೆ..!

BDA ನಿವೇಶನ ಮಾಲೀಕರಿಗೆ ಸಿಹಿಸುದ್ದಿ: ಮಾರ್ಗಸೂಚಿ ದರದಲ್ಲಿ ಶೇ.50 ರಿಯಾಯಿತಿ ಘೋಷಣೆ; 1 ಲಕ್ಷ ಮಂದಿಗೆ ಲಾಭ..!