ನವದೆಹಲಿ/ಚೆನ್ನೈ: ಇತ್ತೀಚಿಗೆ ಬಿಡುಗಡೆಯಾದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಬಿಲಾಂಗಿಂಗ್ : ಎ ಜರ್ನಿ ಆಫ್ ಲವ್ (Belonging A Jounery of Love) ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವಂತೆಯೇ, ಇದೀಗ ಈ ಪುಸ್ತಕವನ್ನು ಆಧರಿಸಿ ಸಿನಿಮಾ ನಿರ್ಮಾಣ ಮಾಡುವ ಯೋಜನೆ ರೂಪುಗೊಳ್ಳುತ್ತಿದೆ.
ಸಂಗರೆಡ್ಡಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ತೆಲಂಗಾಣ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಜಗ್ಗಾ ರೆಡ್ಡಿ ಇದನ್ನು ಘೋಷಣೆ ಮಾಡಿದ್ದಾರೆ. ಚಿತ್ರದ ನಿರ್ಮಾಣಕ್ಕೆ ಕೊಡುಗೆ ನೀಡುವಂತೆ ಕ್ಷೇತ್ರದ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಮನವಿ ಮಾಡಿದ್ದು, ಸಿನಿಮಾ ಮಾಡಲು ಕ್ಷೇತ್ರದ ಕಾಂಗ್ರೆಸ್ ಸಂಚಾಲಕ ಜೂಲಕಂತಿ ಆಂಜನೇಯಲು 2 ಕೋಟಿ ರೂ. ಹಣ ಘೋಷಣೆ ಮಾಡಿದ್ದಾರೆ. ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಂದ ಹಣ ಸಂಗ್ರಹಿಸಿ ಬಳಿಕ ಸಿನಿಮಾ ಮಾಡಲು ಪಕ್ಷ ತೀರ್ಮಾನಿಸಿದೆ.
ಚಿತ್ರ ನಿರ್ಮಾಣವನ್ನು ಪ್ರಾರಂಭಿಸಲು 50 ಸದಸ್ಯರ ಸಮಿತಿಯನ್ನು ರಚಿಸುವಂತೆ ಜಗ್ಗಾ ರೆಡ್ಡಿ ಸಲಹೆ ನೀಡಿದ್ದಾರೆ. ನೀವು ಚುನಾವಣೆಗಳಿಗಾಗಿ ಖರ್ಚು ಮಾಡುತ್ತೀರಲ್ಲವೇ? ಇದನ್ನೂ ಅಂತಹದೇ ಒಂದು ವೆಚ್ಚ ಎಂದು ಪರಿಗಣಿಸಿ. ಬಜೆಟ್ ಅನ್ನು ಒಗ್ಗೂಡಿಸೋಣ ಮತ್ತು ಒಬ್ಬ ಉತ್ತಮ ನಿರ್ದೇಶಕರನ್ನು ಆಯ್ಕೆ ಮಾಡೋಣ ಎಂದು ಅವರು ಹೇಳಿದರು.
ಸಿದ್ಧತೆಗಳು ಪೂರ್ಣಗೊಂಡ ನಂತರ, ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಲು ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಕುಮಾರ್ ಗೌಡ್ ಅವರನ್ನು ಆಹ್ವಾನಿಸುವುದಾಗಿ ಅವರು ತಿಳಿಸಿದರು. ಸೋನಿಯಾ ಗಾಂಧಿ ಅವರ ಆತ್ಮಚರಿತೆಯ ಪ್ರತಿಗಳನ್ನು ತರಿಸಿ ಪಕ್ಷದ ಕಾರ್ಯಕರ್ತರಿಗೆ ಹಂಚಲಾಗುವುದು, ಇದರಿಂದ ಅವರ ಜೀವನ ಮತ್ತು ಅನುಭವಗಳನ್ನು ಕಾರ್ಯಕರ್ತರು ಆಳವಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದೂ ಜಗ್ಗಾ ರೆಡ್ಡಿ ಹೇಳಿದರು.
ಜಗ್ಗ ರೆಡ್ಡಿ ಅವರ ಪ್ರಕಾರ, ಈ ಸಿನಿಮಾ ಸೋನಿಯಾ ಗಾಂಧಿ ಅವರ ಜೀವನದ ವಿವಿಧ ಮಜಲುಗಳನ್ನು ಅನಾವರಣಗೊಳಿಸಲಿದೆ. ಇಂದಿರಾ ಗಾಂಧಿ ಅವರ ಸೊಸೆಯಾಗಿ ಮತ್ತು ರಾಜೀವ್ ಗಾಂಧಿ ಅವರ ಪತ್ನಿಯಾಗಿ ಅವರಿದ್ದ ಪಾತ್ರದಿಂದ ಹಿಡಿದು, ಇಂದಿರಾ ಗಾಂಧಿ (1984) ಮತ್ತು ರಾಜೀವ್ ಗಾಂಧಿ (1991) ಅವರ ಹತ್ಯೆಗಳ ನಂತರ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಒಬ್ಬ ತಾಯಿಯಾಗಿ ಬೆಳೆಸಿದ ವರ್ಷಗಳವರೆಗಿನ ಅವರ ಜೀವನದ ಪಯಣವನ್ನು ಇದು ಚಿತ್ರಿಸಲಿದೆ.
ಈ ಕುಟುಂಬವು ಎದುರಿಸಿದ ವೈಯಕ್ತಿಕ ದುರಂತಗಳು, ಆ ಘಟನೆಗಳ ನಂತರ ಸೋನಿಯಾ ಗಾಂಧಿ ಅನುಭವಿಸಿದ ಕಷ್ಟಗಳು ಮತ್ತು ಅಂತಿಮವಾಗಿ ಅವರು ಸಕ್ರಿಯ ರಾಜಕೀಯ ಪ್ರವೇಶ ಮಾಡಿದ್ದನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತದೆ. ಸೋನಿಯಾ ಗಾಂಧಿ ಅವರ ಈ ಪಯಣವು ಮಹತ್ವಾಕಾಂಕ್ಷೆಯಿಂದಲ್ಲ, ಬದಲಾಗಿ ದೃಢತೆ ಮತ್ತು ಸ್ಥಿತಪ್ರಜ್ಞೆಯಿಂದ (resilience) ರೂಪುಗೊಂಡಿದೆ ಎಂದು ಜಗ್ಗ ರೆಡ್ಡಿ ವಿವರಿಸಿದರು. ಅವರು ಎಂದಿಗೂ ತಮಗಾಗಿ ಪ್ರಧಾನ ಮಂತ್ರಿ ಹುದ್ದೆಯನ್ನು ಬಯಸಿರಲಿಲ್ಲ ಎಂದು ಅವರು ಹೇಳಿದ್ದಾರೆ.
1991ರಲ್ಲಿ ರಾಜೀವ್ ಗಾಂಧಿ ಅವರ ಹತ್ಯೆಯ ನಂತರ, ಪಿ.ವಿ. ನರಸಿಂಹ ರಾವ್ ಅವರು ಪ್ರಧಾನ ಮಂತ್ರಿಯಾದಾಗ, ಸೋನಿಯಾ ಗಾಂಧಿ ಆ ಹುದ್ದೆಯನ್ನು ಪಡೆಯಲು ಯಾವುದೇ ಪ್ರಯತ್ನ ಮಾಡಲಿಲ್ಲ ಎಂಬುದನ್ನು ಜಗ್ಗ ರೆಡ್ಡಿ ನೆನಪಿಸಿಕೊಂಡರು. ಹಾಗೆಯೇ, 2004ರಲ್ಲಿ ಯುನೈಟೆಡ್ ಪ್ರೋಗ್ರೆಸಿವ್ ಅಲೈಯನ್ಸ್ (ಯುಪಿಎ) ಅಧಿಕಾರಕ್ಕೆ ಬಂದಾಗ, ಕಾಂಗ್ರೆಸ್ ನಾಯಕರು ಅವರನ್ನು ಪ್ರಧಾನ ಮಂತ್ರಿ ಹುದ್ದೆಯನ್ನು ಅಲಂಕರಿಸುವಂತೆ ಒತ್ತಾಯಿಸಿದರೂ, ಅವರು ಅದನ್ನು ನಿರಾಕರಿಸಿ, ಮನಮೋಹನ್ ಸಿಂಗ್ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದರು. ಸೋನಿಯಾ ಗಾಂಧಿ ಅವರ ರಾಜಕೀಯ ಜೀವನದಲ್ಲಿ ಈ ನಿರ್ಧಾರವು ಒಂದು ಐತಿಹಾಸಿಕ ಕ್ಷಣವಾಗಿತ್ತು ಎಂದು ಜಗ್ಗ ರೆಡ್ಡಿ ಬಣಿಸಿದ್ದಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (MGNREGS) ರೂಪಿಸುವಲ್ಲಿ ಮನಮೋಹನ್ ಸಿಂಗ್ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಸೋನಿಯಾ ಗಾಂಧಿ ಅವರ ಪಾತ್ರವೂ ಇದೆ.
ದೇಶದಾದ್ಯಂತ ಜನರು ಗಾಂಧಿ ಕುಟುಂಬದಿಂದ ಮತ್ತೊಬ್ಬರು ಪ್ರಧಾನಿಯಾಗುವುದನ್ನು ನೋಡಲು ಬಯಸಿದ್ದರು. ಸ್ವತಃ ಸೋನಿಯಾ ಗಾಂಧಿ ಕೂಡ ರಾಹುಲ್ ಗಾಂಧಿ ಆ ಸ್ಥಾನದಲ್ಲಿರುವುದನ್ನು ನೋಡಲು ಬಯಸಿದ್ದರು ಎಂದು ಜಗ್ಗಾ ರೆಡ್ಡಿ ಹೇಳಿದ್ದಾರೆ.