ಆರೋಪಿ ಇಂದುಶೇಖರ್ online desk
ದೇಶ

"ನನಗೆ ತೃಪ್ತಿಯಾಗಿದೆ, ಈಗ ನೆಮ್ಮದಿಯಾಗಿದ್ದೀನಿ": ಒಂದೇ ಕುಟುಂಬದ 7 ಮಂದಿ ಹತ್ಯೆ ಕೇಸ್ ಆರೋಪಿಯ ಹೇಳಿಕೆ

ಈ ಹತ್ಯೆಗಳನ್ನು ನಡೆಸಲು ಮತ್ತು ಮೃತದೇಹಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ವಿಲೇವಾರಿ ಮಾಡಲು ಆರೋಪಿ ಸಂಚು ರೂಪಿಸಿದ್ದನೆ ಎಂಬುದು ತನಿಖೆ ವೇಳೆ ಬಹಿರಂಗಗೊಂಡಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡ ಪ್ರಕರಣದಲ್ಲಿ ಆಘತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ.

ತನ್ನ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಿದ ನಂತರ ತಾನು ಈಗ ನೆಮ್ಮದಿಯಾಗಿದ್ದೇನೆ ಎಂದು ಪ್ರಮುಖ ಆರೋಪಿ ಇಂದುಶೇಖರ್ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ. ತನ್ನ ಪತ್ನಿ ನಿರಂತರವಾಗಿ ತನ್ನನ್ನು ಅವಮಾನಿಸುತ್ತಿದ್ದಳು ಮತ್ತು ತೀವ್ರ ಮುಜುಗರಕ್ಕೆ ಈಡುಮಾಡುತ್ತಿದ್ದಳು ಎಂದು ಆತ ಆರೋಪಿಸಿದ್ದಾನೆ.

ಈ ಹತ್ಯೆಗಳನ್ನು ನಡೆಸಲು ಮತ್ತು ಮೃತದೇಹಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ವಿಲೇವಾರಿ ಮಾಡಲು ಆರೋಪಿ ಸಂಚು ರೂಪಿಸಿದ್ದನೆ ಎಂಬುದು ತನಿಖೆ ವೇಳೆ ಬಹಿರಂಗಗೊಂಡಿದೆ.

ಪೊಲೀಸರ ವಿಚಾರಣೆ ವೇಳೆ, ತನ್ನ ಪತ್ನಿಯ ಕುಟುಂಬದವರು ಯಾವಾಗಲೂ ಅವಳ ಪರವಾಗಿಯೇ ನಿಲ್ಲುತ್ತಿದ್ದರು ಮತ್ತು ತನ್ನನ್ನು ಅಗೌರವದಿಂದ ನಡೆಸಿಕೊಳ್ಳುತ್ತಿದ್ದರು ಎಂದು ಇಂದುಶೇಖರ್ ಹೇಳಿದ್ದಾನೆ. ಅಲ್ಲದೆ, ತನ್ನ ಪತ್ನಿ ಆಗಾಗ್ಗೆ ತನ್ನನ್ನು ಬೈಯುತ್ತಿದ್ದಳು ಮತ್ತು ಕುಟುಂಬದೊಳಗೆ ತಾನು ನಿರಂತರ ಅವಮಾನಕ್ಕೆ ಒಳಗಾಗಿದ್ದೆ ಎಂದು ಆತ ತಿಳಿಸಿದ್ದಾನೆ.

"ನಾನು ಈಗ ನೆಮ್ಮದಿಯಾಗಿದ್ದೇನೆ ಮತ್ತು ತೃಪ್ತನಾಗಿದ್ದೇನೆ" ಎಂದು ಅಪರಾಧದ ಹಿಂದಿನ ಉದ್ದೇಶವನ್ನು ವಿವರಿಸುವಾಗ ಆತ ಪೊಲೀಸರಿಗೆ ಹೇಳಿದ್ದಾನೆ.

ಈ ಪ್ರಕರಣದಲ್ಲಿ ಆರೋಪಿಯ ಮಗಳ ಪಾತ್ರವೂ ಇರುವುದು ತನಿಖೆಯಿಂದ ತಿಳಿದುಬಂದಿದೆ. ಕುಟುಂಬದ ಸದಸ್ಯರನ್ನು ಕೊಲ್ಲುವ ತಂದೆಯ ಯೋಜನೆ ಬಗ್ಗೆ ತಿಳಿದಿದ್ದರೂ, ಆಕೆ ಆತನಿಗೆ ಸಹಾಯ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ತನ್ನ ತಾಯಿಗೆ ಸೇರಿದ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಡುವುದಾಗಿ ತಂದೆ ಭರವಸೆ ನೀಡಿದ ನಂತರ, ಆಕೆ ಸಹಾಯ ಮಾಡಲು ಒಪ್ಪಿಕೊಂಡಿದ್ದಳು ಎಂದು ಹೇಳಲಾಗಿದೆ.

ಪೊಲೀಸ್ ತನಿಖೆಯ ಪ್ರಕಾರ, ಮೃತದೇಹಗಳನ್ನು ವಿಲೇವಾರಿ ಮಾಡಲು ಮಗಳು ತನ್ನ ತಂದೆಗೆ ಸಹಾಯ ಮಾಡಿದ್ದಳು. ಅಷ್ಟೇ ಅಲ್ಲದೆ, ಕೊಲೆ ನಡೆದ ನಂತರ ಮನೆಯಲ್ಲಿದ್ದ ರಕ್ತದ ಕಲೆಗಳನ್ನು ತೆಗೆದುಹಾಕಲು ಅಗತ್ಯವಿರುವ ರಾಸಾಯನಿಕಗಳು ಮತ್ತು ಇತರ ವಸ್ತುಗಳನ್ನು ಆಕೆಯೇ ತಂದಿದ್ದಳು. ಅಪರಾಧದ ಸಾಕ್ಷ್ಯಗಳನ್ನು ಅಳಿಸಿಹಾಕಲು ಆಗಾಗ್ಗೆ ಮನೆಯನ್ನು ಸ್ವಚ್ಛಗೊಳಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.

ತನ್ನ ತಾಯಿಯ ಪಾಲಿನ ಆಸ್ತಿಯು ಅಂತಿಮವಾಗಿ ತನಗೆ ಸಿಗುತ್ತದೆ ಎಂದು ತಂದೆ ತನ್ನ ಮಗಳಿಗೆ ಭರವಸೆ ನೀಡಿದ್ದ. ಆಸ್ತಿ ವಿವಾದವೇ ಈ ಹತ್ಯೆಗಳ ಹಿಂದಿನ ಪ್ರಮುಖ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಪ್ರಕರಣ ಬೆಂಗಳೂರಿನ ಶ್ರೀರಾಮಪುರ ಪ್ರದೇಶದಲ್ಲಿರುವ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಿವಾದಕ್ಕೆ ಸಂಬಂಧಿಸಿದೆ. ಇಂದುಶೇಖರ್ ತನ್ನ ಅತ್ತೆಯ ಬಳಿ ಆಸ್ತಿಯಲ್ಲಿ ಹೆಚ್ಚಿನ ಪಾಲು ನೀಡುವಂತೆ ಒತ್ತಾಯಿಸಿದ್ದ. ಆದರೆ, ಆತನಿಗೆ ಸಿಗಬೇಕಾದ ನ್ಯಾಯಯುತ ಪಾಲು ಮಾತ್ರ ಸಿಗುತ್ತದೆ ಎಂದು ಅತ್ತೆ ಸ್ಪಷ್ಟಪಡಿಸಿದ್ದರು; ಏಕೆಂದರೆ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಅವರ ಹಿತಾಸಕ್ತಿಗಳನ್ನು ಕೂಡ ಗಮನದಲ್ಲಿಟ್ಟುಕೊಳ್ಳಬೇಕಾಗಿತ್ತು.

ಕೊಲೆ ಮಾಡಿದ ನಂತರ, ಆರೋಪಿಯು ಮೃತಪಟ್ಟವರ ಹೆಬ್ಬೆರಳಿನ ಗುರುತುಗಳನ್ನು (thumb impressions) ಸ್ಟಾಂಪ್ ಪೇಪರ್‌ಗಳ ಮೇಲೆ ಪಡೆದುಕೊಂಡಿದ್ದ. ಆಸ್ತಿ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳ ಮೇಲೆ ತನ್ನ ನಿಯಂತ್ರಣವನ್ನು ಸಾಧಿಸುವ ಉದ್ದೇಶದಿಂದ ಆತ ಹೀಗೆ ಮಾಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ಈ ಕೊಲೆಗಳು ಎಂದಿಗೂ ಬೆಳಕಿಗೆ ಬರುವುದಿಲ್ಲ ಎಂದು ಇಂದುಶೇಖರ್ ನಂಬಿದ್ದ ಮತ್ತು ತಾವು ಪೊಲೀಸರಿಗೆ ಸಿಕ್ಕಿಬೀಳುವುದಿಲ್ಲ ಎಂದು ತನ್ನ ಮಗಳಿಗೆ ಭರವಸೆ ನೀಡಿದ್ದ ಎಂದು ಹೇಳಲಾಗಿದೆ. ಸಂದೇಹ ಬಾರದಂತೆ ತಡೆಯಲು, ಮೃತದೇಹಗಳನ್ನು ಪ್ಯಾಕ್ ಮಾಡಿ ಬೇರೆ ಬೇರೆ ಸ್ಥಳಗಳಿಗೆ ಸಾಗಿಸಿ ವಿಲೇವಾರಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಏಳು ಜನರನ್ನು ಕೊಂದಿರುವುದಾಗಿ ಇಂದುಶೇಖರ್ ತಪ್ಪೊಪ್ಪಿಕೊಂಡಾಗ, ಆರಂಭದಲ್ಲಿ ಪೊಲೀಸರು ಅದನ್ನು ನಂಬಲು ಹಿಂಜರಿದಿದ್ದರು. ಆದರೆ, ತನಿಖೆಯ ವೇಳೆ ಆತ ಸೂಚಿಸಿದ ಸ್ಥಳಗಳಿಂದ ಮೃತದೇಹಗಳನ್ನು ವಶಪಡಿಸಿಕೊಂಡ ನಂತರ, ಅಪರಾಧದ ವ್ಯಾಪ್ತಿಯನ್ನು ಕಂಡು ಅಧಿಕಾರಿಗಳು ಬೆಚ್ಚಿಬಿದ್ದರು. ಆರೋಪಿಯು ತನ್ನ ಮಗಳ ಸಹಾಯದೊಂದಿಗೆ ಈ ಕೊಲೆಗಳನ್ನು ಎಸಗಿದ್ದು ಮತ್ತು ಮೃತದೇಹಗಳನ್ನು ವಿಲೇವಾರಿ ಮಾಡಿದ ರೀತಿ ಅವರನ್ನು ಆಘಾತಕ್ಕೀಡುಮಾಡಿತು.

52 ವರ್ಷದ ಕ್ಯಾಬ್ ಚಾಲಕ ಇಂದುಶೇಖರ್ ನನ್ನು (ಈತನನ್ನು ಶೇಖರ್ ಎಂದೂ ಕರೆಯಲಾಗುತ್ತದೆ), ಅಕ್ಟೋಬರ್ 16 ಮತ್ತು 31, 2026ರ ನಡುವೆ ತನ್ನ ಪತ್ನಿಯ ಕುಟುಂಬದ ಏಳು ಸದಸ್ಯರನ್ನು ಕೊಲೆ ಮಾಡಿದ ಆರೋಪದ ಮೇಲೆ ಬೆಂಗಳೂರು ಪೊಲೀಸರು ಬಂಧಿಸಿದ್ದರು.

ಕೊಲೆಯಾದವರಲ್ಲಿ ಆತನ ಪತ್ನಿ ಸುನಿತಾ, ಅತ್ತೆ ರೂಪಾವತಿ, ಭಾವಂದಿರಾದ ಶಿವಕುಮಾರ್ ಮತ್ತು ಶಂಕರ್, ಅವರ ಪತ್ನಿಯರಾದ ನಳಿನಿ ಮತ್ತು ದಿವ್ಯಾ, ಹಾಗೂ ಏಳು ವರ್ಷದ ಮೊಮ್ಮಗ ಪುನೀತ್ ಸೇರಿದ್ದಾರೆ.

ಪೊಲೀಸರ ಪ್ರಕಾರ, ಅಕ್ಟೋಬರ್ 16ರಂದು ಇಂದುಶೇಖರ್ ತನ್ನ ಪತ್ನಿ ಸುನಿತಾಳ ಮೇಲೆ ಕಲ್ಲಿನಿಂದ (ಅರೆಯುವ ಕಲ್ಲು) ಹಲ್ಲೆ ನಡೆಸಿ ಕೊಲೆ ಮಾಡುವ ಮೂಲಕ ಈ ಸರಣಿ ಹತ್ಯೆಗಳನ್ನು ಆರಂಭಿಸಿದನು. ನಂತರ ಆತ ಆಕೆಯ ಮೃತದೇಹವನ್ನು ನಂದಿ ಬೆಟ್ಟದ ಬಳಿ ವಿಲೇವಾರಿ ಮಾಡಿದನು.

ಮುಂದಿನ ಎರಡು ವಾರಗಳಲ್ಲಿ, ಆತ ಕುಟುಂಬದ ಇತರ ಸದಸ್ಯರನ್ನು ವಿವಿಧ ನೆಪಗಳನ್ನು ಒಡ್ಡಿ (ಉದಾಹರಣೆಗೆ: ಮದ್ಯಪಾನ ಕೂಟಕ್ಕೆ ಆಹ್ವಾನಿಸುವುದು ಅಥವಾ ಕುಟುಂಬದ ಇತರ ಸದಸ್ಯರು ಪ್ರವಾಸಕ್ಕೆ ಹೋಗಿದ್ದಾರೆ ಎಂದು ಸುಳ್ಳು ಹೇಳುವುದು) ತನ್ನ ಮನೆಗೆ ಕರೆಸಿಕೊಂಡನು. ಬಳಿಕ, ಅವರನ್ನು ಒಬ್ಬರ ನಂತರ ಒಬ್ಬರಂತೆ ಕೊಲೆ ಮಾಡಿದನು ಎಂದು ಆರೋಪಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

U19 ಏಷ್ಯಾಕಪ್ ಫೈನಲ್: ಕೊನೇ ಎಸೆತದಲ್ಲಿ ಬೌಂಡರಿ; ಪಾಕ್ ವಿರುದ್ಧ ಭಾರತಕ್ಕೆ 1 ವಿಕೆಟ್‌ ರೋಚಕ ಜಯ!

U19 ಏಷ್ಯಾ ಕಪ್ ಫೈನಲ್‌ನಲ್ಲಿ ರೋಚಕ ಗೆಲುವು; ಸಂಭ್ರಮಾಚರಣೆ ನಡುವೆ ಪಾಕಿಗಳನ್ನು ಉರಿಸಿದ ಭಾರತದ ಆಟಗಾರರು! Video

ನನ್ನ ಬಳಿ ಹಣವಿಲ್ಲ ಅಂದೆ, ಮೋದಿ ಅವರೇ ಟಿಕೆಟ್ ತಗೊಂಡ್ರು: ಪಿಂಕ್ ಲೈನ್ ಉದ್ಘಾಟನೆ ವೇಳೆ PM ಸೌಹಾರ್ದ ನಡೆ ನೆನೆದ DKS

Operation Sindoor ಬಳಿಕ ಭಾರತಕ್ಕೆ ಮೊದಲ ಬಾರಿ ಪಾಕ್ ಸಚಿವ ಭೇಟಿ!

ಮೇಕೆದಾಟು: 'ನಾವೇನು ಕರ್ನಾಟಕದ ಬಳಿ ಭಿಕ್ಷೆ ಬೇಡ್ತಿಲ್ಲ.. ಕಾವೇರಿ ನಮ್ಮ ಹಕ್ಕು': ಡಿ.ಕೆ ಶಿವಕುಮಾರ್ ಹೇಳಿಕೆಗೆ ತಮಿಳುನಾಡು ಕಾಂಗ್ರೆಸ್ ಸಂಸದೆ ಕೆಂಡಾಮಂಡಲ!