

ಚೆನ್ನೈ: ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದು ಹೋದ ಬಳಿಕ ಕರ್ನಾಟಕ ಸರ್ಕಾರದ ಉದ್ದೇಶಿತ ಮೇಕೆದಾಟು ಅಣೆಕಟ್ಟು ನಿರ್ಮಾಣ ವಿಚಾರ ವ್ಯಾಪಕ ಚರ್ಚೆಗೀಡಾಗುತ್ತಿದ್ದು, ಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ತಮಿಳುನಾಡು ಕಾಂಗ್ರೆಸ್ ಸಂಸದರೇ ವ್ಯಾಪಕ ಕಿಡಿಕಾರುತ್ತಿದ್ದಾರೆ.
ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂಬ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಮಿಳುನಾಡಿನ ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ತೀವ್ರ ಕಿಡಿಕಾರಿದ್ದು, “ಕಾವೇರಿ ನೀರು ನಮ್ಮ ಹಕ್ಕು. ಕರ್ನಾಟಕ ಸರ್ಕಾರದ ಮುಂದೆ ನಾವು ಏನನ್ನೂ ಕೇಳುತ್ತಿಲ್ಲ, ಭಿಕ್ಷೆಯನ್ನೂ ಬೇಡುತ್ತಿಲ್ಲ. ಕಾವೇರಿ ನದಿಯ ಮೇಲೆ ತಮಿಳುನಾಡಿಗೂ ಸಮಾನ ಹಕ್ಕಿದೆ” ಎಂದು ಅವರು ಹೇಳಿದ್ದಾರೆ.
ಹೈದರಾಬಾದ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜ್ಯೋತಿಮಣಿ, 'ಕಾವೇರಿ ವಿವಾದ ಹಲವು ದಶಕಗಳಿಂದ ನಡೆಯುತ್ತಿದೆ. ಈ ಸಮಸ್ಯೆಗೆ ನ್ಯಾಯಾಲಯದ ತೀರ್ಪುಗಳು ಮತ್ತು ಕಾವೇರಿ ನೀರು ನಿರ್ವಹಣಾ ಮಂಡಳಿಯ ಮೂಲಕ ಪರಿಹಾರಗಳಿವೆ.
ಆದರೆ ಕರ್ನಾಟಕದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ನ್ಯಾಯಾಲಯದ ತೀರ್ಪು ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿಯ ಆದೇಶಗಳನ್ನು ಗೌರವಿಸುತ್ತಿಲ್ಲ' ಎಂದು ಆರೋಪಿಸಿದ್ದಾರೆ.
ಕಾವೇರಿ ವಿವಾದದ ಕುರಿತು ತಮಿಳುನಾಡು ಕಾಂಗ್ರೆಸ್ ಸಂಸದೆ ಎಸ್. ಜ್ಯೋತಿಮಣಿ ಅವರ ಹೇಳಿಕೆ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಮೇಕೆದಾಟು ಅಣೆಕಟ್ಟು ಯೋಜನೆಯ ಚರ್ಚೆಗೆ ಮತ್ತಷ್ಟು ಕಾವು ನೀಡಿದೆ. ಕಾವೇರಿ ನದಿ ಎರಡೂ ರಾಜ್ಯಗಳ ಹಕ್ಕು ಎಂದು ಪ್ರತಿಪಾದಿಸಿರುವ ಅವರು, ತಮಿಳುನಾಡಿನ ರೈತರ ಹಿತಾಸಕ್ತಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದಾರೆ.
'ಕರ್ನಾಟಕದ ಮುಂದೆ ಭಿಕ್ಷೆ ಬೇಡುತ್ತಿಲ್ಲ'
“ಕಾವೇರಿ ನೀರು ನಮ್ಮ ಹಕ್ಕು. ಕರ್ನಾಟಕ ಸರ್ಕಾರದ ಬಳಿ ನಾವು ಏನನ್ನೂ ಕೇಳುತ್ತಿಲ್ಲ ಅಥವಾ ಭಿಕ್ಷೆ ಬೇಡುತ್ತಿಲ್ಲ. ನೆರೆಯ ರಾಜ್ಯಗಳೊಂದಿಗೆ ಉತ್ತಮ ಸಂಬಂಧ ಹೊಂದಿರಬೇಕು ಎಂಬುದು ನಮ್ಮ ಆಶಯ. ಆದರೆ ಅದಕ್ಕಾಗಿ ನಮ್ಮ ಹಕ್ಕುಗಳನ್ನು ಕಡೆಗಣಿಸಲು ಸಾಧ್ಯವಿಲ್ಲ” ಎಂದು ಜ್ಯೋತಿಮಣಿ ಹೇಳಿದ್ದಾರೆ.
ತಮಿಳುನಾಡಿನ ಲಕ್ಷಾಂತರ ರೈತರು ಕಾವೇರಿ ನದಿಯ ನೀರನ್ನು ಅವಲಂಬಿಸಿದ್ದಾರೆ. ಈ ವಿವಾದ ಇಂದಿನದ್ದಲ್ಲ, ಹಲವು ದಶಕಗಳಿಂದ ನಡೆಯುತ್ತಿದೆ. ಸಮಸ್ಯೆ ಬಗೆಹರಿಸಲು ನ್ಯಾಯಾಲಯದ ತೀರ್ಪುಗಳು ಮತ್ತು ಕಾವೇರಿ ನೀರು ನಿರ್ವಹಣಾ ಮಂಡಳಿ ಇದೆ.
ಆದರೆ ಕರ್ನಾಟಕದಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಮಂಡಳಿಯ ಆದೇಶಗಳು ಹಾಗೂ ನ್ಯಾಯಾಲಯದ ತೀರ್ಪುಗಳನ್ನು ಗೌರವಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನೀರು ನಿರ್ವಹಣಾ ಮಂಡಳಿಯಲ್ಲಿ ಕಾನೂನು ಹೋರಾಟ ಮುಂದುವರಿಸಿದೆ. ದೇಶದಲ್ಲಿ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ತಮಗೆ ನಂಬಿಕೆ ಇದೆ. ತಮಿಳುನಾಡು ತನ್ನ ಹಕ್ಕುಗಳಿಗಾಗಿ ಹೋರಾಟ ನಿಲ್ಲಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
'ನದಿಯ ಮೇಲೆ ಕರ್ನಾಟಕಕ್ಕೆ ಮಾತ್ರ ಅಧಿಕಾರವಿಲ್ಲ'
ಕಾವೇರಿ ನದಿ ಕರ್ನಾಟಕದಲ್ಲಿ ಹುಟ್ಟುತ್ತದೆ ಎಂಬ ಕಾರಣಕ್ಕೆ ಅದರ ಮೇಲೆ ಕರ್ನಾಟಕಕ್ಕೆ ಮಾತ್ರ ಸಂಪೂರ್ಣ ಅಧಿಕಾರವಿದೆ ಎಂದು ಭಾವಿಸಬಾರದು ಎಂದು ಜ್ಯೋತಿಮಣಿ ಹೇಳಿದ್ದಾರೆ.
“ನದಿ ಕರ್ನಾಟಕದಿಂದ ಹರಿಯುತ್ತದೆ ಎಂಬ ಕಾರಣಕ್ಕೆ ಅದರ ಮೇಲೆ ಕರ್ನಾಟಕಕ್ಕೆ ಮಾತ್ರ ನಿಯಂತ್ರಣವಿದೆ ಎಂದರ್ಥವಲ್ಲ. ನಾವು ನದಿಯ ಕೆಳಭಾಗದಲ್ಲಿರುವ ರಾಜ್ಯ. ಕಾವೇರಿ ಮೇಲೆ ನಮಗೂ ಸಮಾನ ಹಕ್ಕಿದೆ. ಇದೇ ರೀತಿ ಕೇರಳದ ನದಿಗಳ ಮೇಲೆ ಕರ್ನಾಟಕಕ್ಕೂ ಹಕ್ಕಿದೆ. ನಮ್ಮಿಂದ ಕೆಳಭಾಗದಲ್ಲಿರುವ ಪುದುಚೇರಿಗೂ ನದಿಯ ನೀರಿನ ಮೇಲೆ ಹಕ್ಕಿದೆ. ಹೀಗಾಗಿ ಎಲ್ಲ ರಾಜ್ಯಗಳು ಪರಸ್ಪರರ ಹಕ್ಕುಗಳನ್ನು ಗೌರವಿಸಿ ಸಹಬಾಳ್ವೆ ನಡೆಸಬೇಕು” ಎಂದು ಹೇಳಿದ್ದಾರೆ.
ರಾಜ್ಯಗಳ ಗಡಿಯನ್ನು ಮೀರಿ ಮತ್ತೊಂದು ರಾಜ್ಯದ ಹಕ್ಕುಗಳಿಗೆ ಧಕ್ಕೆ ಉಂಟುಮಾಡಿದರೆ ಸಂಘರ್ಷ ಅನಿವಾರ್ಯವಾಗುತ್ತದೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಬಾರದು. ಕಾವೇರಿ ನೀರಿನ ಮೇಲಿನ ತಮಿಳುನಾಡಿನ ಹಕ್ಕನ್ನು ರಾಜ್ಯದ ಜನರು ಮತ್ತು ಸರ್ಕಾರ ಬಿಟ್ಟುಕೊಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧವೂ ಆರೋಪ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಮಿಳುನಾಡಿನ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಕಾವೇರಿ ವಿವಾದವನ್ನು ಕರ್ನಾಟಕ ಸರ್ಕಾರದ ಪರವಾಗಿ ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಜ್ಯೋತಿಮಣಿ ಆರೋಪಿಸಿದ್ದಾರೆ.