ಬೆಂಗಳೂರು: ಗಾಂಧಿ ಕುಟುಂಬದ ಬಗ್ಗೆ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಮಾಡಿರುವ ವಿವಾದಾತ್ಮಕ ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ನಟಿ ಹಾಗೂ ಕಾಂಗ್ರೆಸ್ ನಾಯಕಿ ರಮ್ಯಾ (ದಿವ್ಯ ಸ್ಪಂದನ) ವ್ಯಂಗ್ಯಭರಿತವಾಗಿ ತಿರುಗೇಟು ನೀಡಿದ್ದಾರೆ.
ಕಂಗನಾ ಅವರು ಸಂಸದೆಯಾಗಿರುವುದರಿಂದ ಸಂಸತ್ ಗ್ರಂಥಾಲಯದ ಸೌಲಭ್ಯ ಬಳಸಿಕೊಂಡು ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹತ್ಯೆಗಳ ಕುರಿತು ಇತಿಹಾಸ ಓದಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ರಮ್ಯಾ, "ಕಂಗನಾ, ಈಗ ನೀವೊಬ್ಬ ಸಂಸದರು. ಸಂಸತ್ ಗ್ರಂಥಾಲಯ ಉಚಿತವಾಗಿದೆ, ಹವಾನಿಯಂತ್ರಿತವಾಗಿದೆ ಮತ್ತು ಸಾಕಷ್ಟು ಪುಸ್ತಕಗಳಿಂದ ಕೂಡಿದೆ. ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರನ್ನು ನಿಜವಾಗಿ ಹತ್ಯೆ ಮಾಡಿದ್ದು ಯಾರು ಎಂಬುದನ್ನು ತಿಳಿಸುವ ಪುಸ್ತಕಗಳೂ ಅಲ್ಲಿವೆ. ಅವುಗಳನ್ನು ಓದಲು ನಾನು ಶಿಫಾರಸು ಮಾಡುತ್ತೇನೆ" ಎಂದು ಬರೆದಿದ್ದಾರೆ.
ರಮ್ಯಾ ಅವರು ಕಂಗನಾ ಅವರ ಪೋಸ್ಟ್‌ನಲ್ಲಿರುವ 'young vulnerable widow' ಎಂಬ ಪದಪ್ರಯೋಗವನ್ನೂ ವ್ಯಂಗ್ಯವಾಗಿ ಉಲ್ಲೇಖಿಸಿದ್ದಾರೆ. "ಈ ಟ್ವೀಟ್‌ನಲ್ಲಿ ಪಾರದರ್ಶಕವಾಗಿರುವ ಏಕೈಕ ಸಂಗತಿಯೆಂದರೆ 'young vulnerable window' ಎಂಬ ಪದಗಳು ಮಾತ್ರ" ಎಂದು ವ್ಯಂಗ್ಯವಾಗಿ ಬರೆದಿದ್ದಾರೆ. ಈ ಮೂಲಕ ಕಂಗನಾ ಅವರ ಪೋಸ್ಟ್‌ನ ಭಾಷೆ ಮತ್ತು ಅದರಲ್ಲಿನ ಆರೋಪಗಳನ್ನು ಪ್ರಶ್ನಿಸಿದ್ದಾರೆ.
ಇಷ್ಟಕ್ಕೂ ಕಂಗನಾ ಹೇಳಿದ್ದೇನು?
ಇಂದಿರಾ ಗಾಂಧಿ-ಮನೇಕಾ ನಡುವಿನ ಸಂಬಂಧದ ಬಗ್ಗೆ ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಹಳೆಯ ವಿಡಿಯೊವೊಂದನ್ನು ಉಲ್ಲೇಖಿಸಿರುವ ಕಂಗನಾ, ಇಂದಿರಾ ಗಾಂಧಿ ಅವರಿಂದ ಪ್ರೀತಿಯ ಒಂದು ನೋಟ ಅಥವಾ ನಗುವಿಗಾಗಿ ಮನೇಕಾ ಗಾಂಧಿ ಕಾಯುತ್ತಿದ್ದರೂ ಅವರಿಗೆ ನಿರಾಸೆಯಾಯಿತು ಎಂದು ಭಾವುಕವಾಗಿ ಬರೆದಿದ್ದಾರೆ.
ವಿಡಿಯೊದ ಕೊನೆಯ ಭಾಗದಲ್ಲಿ ಎಲ್ಲರೂ ಅಲ್ಲಿಂದ ತೆರಳಿದರೂ ಮನೇಕಾ ಮಾತ್ರ ಇಂದಿರಾ ಗಾಂಧಿ ಅವರತ್ತ ನೋಡುತ್ತಾ ನಿಂತಿರುತ್ತಾರೆ. ಗಾಯಗೊಂಡ ಮಗುವೊಂದು ಸಾಂತ್ವನಕ್ಕಾಗಿ ಕಾಯುವಂತೆ, ಇಂದಿರಾ ಅವರಿಂದ ಒಂದು ಸಣ್ಣ ನಗು ಅಥವಾ ತಮ್ಮತ್ತ ಒಂದು ನೋಟವಾದರೂ ಸಿಗಬಹುದೆಂದು ಅವರು ನಿರೀಕ್ಷಿಸುತ್ತಾರೆ. ಆದರೆ ಯಾವುದೇ ಪ್ರತಿಕ್ರಿಯೆ ಸಿಗುವುದಿಲ್ಲ. ಅಲ್ಲಿ ಇದ್ದರೂ ಇಲ್ಲದಂತೆಯೇ ಮನೇಕಾ ನಿಧಾನವಾಗಿ ಅಲ್ಲಿಂದ ಮರೆಯಾಗುತ್ತಾರೆ. ಈ ದೃಶ್ಯ ಹೃದಯವಿದ್ರಾವಕವಾಗಿದೆ ಎಂದು ಕಂಗನಾ ತಮ್ಮ ಪೋಸ್ಟ್‌ನಲ್ಲಿ ಬಣ್ಣಿಸಿದ್ದಾರೆ.