ವಂದೇ ಭಾರತ್ ರೈಲು  
ದೇಶ

ದೋಷಪೂರಿತ ಬ್ರೇಕ್‌ ಮಧ್ಯೆ 463 ಕಿ.ಮೀ. ಸಂಚರಿಸಿದ ಖಾಲಿ Vande Bharat ರೈಲು; ತನಿಖೆಗೆ ಆದೇಶ

ನವೆಂಬರ್ 11ರಂದು ಅಸ್ಸಾಂನಲ್ಲಿ ಕೋಲ್ಕತಾ-ಸೈರಾಂಗ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪುವುದಕ್ಕೆ ಕೆಲವೇ ದಿನಗಳ ಮೊದಲು, ಅಂದರೆ ಅಕ್ಟೋಬರ್ 24ರಂದು ಈ ಘಟನೆ ನಡೆದಿತ್ತು. ಈ ಎರಡೂ ಘಟನೆಗಳಲ್ಲಿ ಬಹುತೇಕ ಒಂದೇ ರೀತಿಯ ನಿರ್ಲಕ್ಷ್ಯ ಕಂಡುಬಂದಿದೆ.

ನವದೆಹಲಿ: ಬ್ರೇಕಿಂಗ್ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪದ ನಡುವೆಯೂ ಖಾಲಿ ವಂದೇ ಭಾರತ್ ರೈಲು ಕಳೆದ ತಿಂಗಳು ಅಕ್ಟೋಬರ್‌ನಲ್ಲಿ ಜಾರ್ಖಂಡ್‌ನಿಂದ ಉತ್ತರ ಪ್ರದೇಶದವರೆಗೆ 463 ಕಿ.ಮೀ. ದೂರ ಸಂಚರಿಸಲು ಅನುಮತಿ ನೀಡಲಾಗಿತ್ತು. ಈ ಘಟನೆ ಇತರ ಪ್ರಯಾಣಿಕ ರೈಲುಗಳಿಗೂ ಅಪಾಯ ಉಂಟುಮಾಡುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಆಗ್ನೇಯ ರೈಲ್ವೆ ವಲಯ ತನಿಖೆಗೆ ಆದೇಶಿಸಿದೆ.

ನವೆಂಬರ್ 11ರಂದು ಅಸ್ಸಾಂನಲ್ಲಿ ಕೋಲ್ಕತಾ-ಸೈರಾಂಗ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪುವುದಕ್ಕೆ ಕೆಲವೇ ದಿನಗಳ ಮೊದಲು, ಅಂದರೆ ಅಕ್ಟೋಬರ್ 24ರಂದು ಈ ಘಟನೆ ನಡೆದಿತ್ತು. ಈ ಎರಡೂ ಘಟನೆಗಳಲ್ಲಿ ಬಹುತೇಕ ಒಂದೇ ರೀತಿಯ ನಿರ್ಲಕ್ಷ್ಯ ಕಂಡುಬಂದಿದೆ.

ಸಾಕಷ್ಟು ಬ್ರೇಕ್ ಸಾಮರ್ಥ್ಯವಿಲ್ಲದೆ ರೈಲನ್ನು ಚಾಲನೆ ಮಾಡುವುದು ಗಂಭೀರ ಸುರಕ್ಷತಾ ಕಳವಳಕ್ಕೆ ಕಾರಣವಾಗುತ್ತದೆ. ಇದರಿಂದ ಭಾರಿ ಅಪಘಾತ ಸಂಭವಿಸುವ ಸಾಧ್ಯತೆಯಿದ್ದು, ಸಿಬ್ಬಂದಿ ಮತ್ತು ಪ್ರಯಾಣಿಕರ ಜೀವಕ್ಕೆ ಅಪಾಯ ಉಂಟಾಗುವುದರ ಜತೆಗೆ ರೈಲ್ವೆ ಕಾರ್ಯಾಚರಣೆಯ ಸುರಕ್ಷತೆಯ ಮೇಲೂ ಪರಿಣಾಮ ಬೀರಬಹುದು ಎಂದು ರೈಲ್ವೆ ವಲಯ ತಿಳಿಸಿದೆ.

ಖಾಲಿ ಚೇರ್ ಕಾರ್ ಬೋಗಿಗಳ ರೈಲು ಸಂಚಯವನ್ನು ಸರಕು ಸಾಗಣೆ ರೈಲಿನ ಇಂಜಿನ್ ಮೂಲಕ ಜಾರ್ಖಂಡ್‌ನ ಹಟಿಯಾದಿಂದ ಉತ್ತರ ಪ್ರದೇಶದ ಝಾನ್ಸಿಗೆ ಸಾಗಿಸಬೇಕಿತ್ತು.

ಪ್ರಯಾಣದ ಉದ್ದಕ್ಕೂ ಬೋಗಿಗಳ ರೈಲು ಸಂಚಯವನ್ನು ಎಳೆಯಬೇಕಿದ್ದ ಸರಕು ಸಾಗಣೆ ರೈಲಿನ ಇಂಜಿನ್‌ನ ಬ್ರೇಕಿಂಗ್ ವ್ಯವಸ್ಥೆಯೊಂದಿಗೆ ವಂದೇ ಭಾರತ್ ರೈಲಿನ ಬ್ರೇಕಿಂಗ್ ವ್ಯವಸ್ಥೆಯನ್ನು ಸಂಯೋಜಿಸಬೇಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ರೈಲ್ವೆ ಸಿಬ್ಬಂದಿ ಎರಡೂ ಬ್ರೇಕಿಂಗ್ ವ್ಯವಸ್ಥೆಗಳ ಸಮರ್ಪಕ ಸಂಯೋಜನೆಗೆ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದರು. ಅಲ್ಲದೆ, ಸಮಸ್ಯೆಯ ಬಗ್ಗೆ ರೈಲು ಸಿಬ್ಬಂದಿ ಎಚ್ಚರಿಕೆ ನೀಡಿದರೂ ಅದನ್ನು ನಿರ್ಲಕ್ಷಿಸಿದ್ದರು.

ಈ ಕುರಿತು ತನಿಖೆ ಆರಂಭಿಸುವಂತೆ ರಾಂಚಿ ವಿಭಾಗದ ರೈಲ್ವೆ ವ್ಯವಸ್ಥಾಪಕರಿಗೆ (DRM) ಸೂಚಿಸಿ ಹೊರಡಿಸಿದ ಅಧಿಕೃತ ಆದೇಶದಲ್ಲಿ, ಅಕ್ಟೋಬರ್ 24ರಂದು ಹಟಿಯಾದಿಂದ ಝಾನ್ಸಿಗೆ ಖಾಲಿ ವಂದೇ ಭಾರತ್ ರೈಲು ಸಂಚಯವನ್ನು ಸಾಗಿಸಲು ಸೂಚನೆ ನೀಡಲಾಗಿತ್ತು ಎಂದು ಆಗ್ನೇಯ ರೈಲ್ವೆ ವಲಯ ತಿಳಿಸಿದೆ.

ಲೋಕೋ ಪೈಲಟ್ ನೀಡಿದ ಹೇಳಿಕೆಯ ಪ್ರಕಾರ, ಜಾರಿಯಲ್ಲಿರುವ ನಿಯಮಾವಳಿಗಳ ಅನ್ವಯ ಹಟಿಯಾ (ಎಚ್‌ಟಿಇ) ನಿಲ್ದಾಣದಿಂದ ಹೊರಟ ಬಳಿಕ ಹಟಿಯಾ-ರಾಂಚಿ ವಿಭಾಗದಲ್ಲಿ ಬ್ರೇಕ್ ಫೀಲ್ ಮತ್ತು ಬ್ರೇಕ್ ಪವರ್ ಪರೀಕ್ಷೆ ನಡೆಸಲಾಗಿತ್ತು ಎಂದು ನವೆಂಬರ್ 7ರಂದು ಹೊರಡಿಸಲಾದ ಆದೇಶದಲ್ಲಿ ತಿಳಿಸಲಾಗಿದೆ.

ಆದರೆ, ಪರೀಕ್ಷೆಯ ಸಂದರ್ಭದಲ್ಲಿ ರೈಲಿನ ಬ್ರೇಕ್ ಸಾಮರ್ಥ್ಯ ತೀರಾ ಕಳಪೆಯಾಗಿದ್ದು, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಲೋಕೋ ಪೈಲಟ್ ಗಮನಿಸಿದ್ದರು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಬ್ರೇಕ್ ಸಾಮರ್ಥ್ಯ ಕಳಪೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದರೂ ಅದೇ ಸ್ಥಿತಿಯಲ್ಲಿ ರೈಲು ಸಂಚಾರಕ್ಕೆ ಅನುಮತಿ ನೀಡಲಾಗಿತ್ತು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮುಂದೆ ಮುರಿ ನಿಲ್ದಾಣದಿಂದ ರೈಲನ್ನು ಚಲಾಯಿಸಿದ ಮತ್ತೊಬ್ಬ ಲೋಕೋ ಪೈಲಟ್ ಕೂಡ ಬ್ರೇಕಿಂಗ್ ವ್ಯವಸ್ಥೆಯ ಕಳಪೆ ಕಾರ್ಯನಿರ್ವಹಣೆಯ ಬಗ್ಗೆ ಸಂಬಂಧಪಟ್ಟ ನಿಯಂತ್ರಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬಿಪಿ (ಬ್ರೇಕ್ ಪೈಪ್) ಒತ್ತಡವನ್ನು ಕಡಿಮೆ ಮಾಡುವ ಮೂಲಕವೂ ಬ್ರೇಕ್‌ಗಳನ್ನು ಅನ್ವಯಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಸ್ಪಷ್ಟವಾಗಿ ತಿಳಿಸಿದ್ದರು.

ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ದೀನ್ ದಯಾಳ್ ಉಪಾಧ್ಯಾಯ (ಡಿಡಿಯು) ನಿಲ್ದಾಣ ತಲುಪಿದ ಬಳಿಕವಷ್ಟೇ ರೈಲ್ವೆ ಸಿಬ್ಬಂದಿ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದರು.

ಬಳಿಕ ಡಿಡಿಯು ನಿಲ್ದಾಣದ ಅಧಿಕಾರಿಗಳು ರೈಲನ್ನು ಪರಿಶೀಲಿಸಿದಾಗ, ಎಲ್ಲ ಬೋಗಿಗಳ ಬ್ರೇಕಿಂಗ್ ವ್ಯವಸ್ಥೆಯನ್ನು ಪ್ರತ್ಯೇಕಗೊಳಿಸಲಾಗಿತ್ತು. ಹೀಗಾಗಿ ಬ್ರೇಕ್‌ಗಳು ಕಾರ್ಯನಿರ್ವಹಿಸುತ್ತಿರಲಿಲ್ಲ ಎಂಬುದು ಪತ್ತೆಯಾಯಿತು.

ಪ್ರಾಥಮಿಕ ತನಿಖೆಯಲ್ಲಿ, ಸಂಬಂಧಪಟ್ಟ ನಿಲ್ದಾಣಗಳ ಕೋಚ್ ಮತ್ತು ವ್ಯಾಗನ್ (C and W) ಸಿಬ್ಬಂದಿ, ವಿಭಾಗೀಯ ಹಾಗೂ ಟ್ರಾಕ್ಷನ್ ನಿಯಂತ್ರಣಾಧಿಕಾರಿಗಳು ಮತ್ತು ಹಟಿಯಾದಿಂದ ಡಿಡಿಯುವರೆಗೆ ರೈಲನ್ನು ನಿರ್ವಹಿಸಿದ ಸಿಬ್ಬಂದಿ ನಿರ್ಲಕ್ಷ್ಯ ಎಸಗಿರುವುದು ಕಂಡುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹವಾಮಾನ: ನವೆಂಬರ್ 17ರ ವೇಳೆಗೆ ಬಂಗಾಳ ಕೊಲ್ಲಿಯಲ್ಲಿ ತೀವ್ರ ಚಂಡಮಾರುತ ಸಾಧ್ಯತೆ; ಭಾರಿ ಮಳೆಯ ಎಚ್ಚರಿಕೆ

ಮಿಯಾಮಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರಿ ದುರಂತ; ಟ್ಯಾಕ್ಸಿವೇಯಲ್ಲಿ ಬೋಯಿಂಗ್ ವಿಮಾನಗಳ ಡಿಕ್ಕಿ, ಇಬ್ಬರಿಗೆ ಗಾಯ!

ಜೌಲ್ಜಿಬಿ ಮೇಳದಲ್ಲಿ ಹೈಡ್ರಾಮಾ: ವೇದಿಕೆಯಲ್ಲೇ ಮೈಕ್ ಎಸೆದ ಕಾಂಗ್ರೆಸ್ ಶಾಸಕ, ಉತ್ತರಾಖಂಡ ಸಿಎಂಗೆ ಬಹಿರಂಗ ಸವಾಲು!

ಗಾಜಾ: ಅಕ್ಟೋಬರ್ 7ರ ದಾಳಿಯ ರೂವಾರಿ, ಹಮಾಸ್ ಕಮಾಂಡರ್ ಸಮೀರ್ ಅಬು ಯೂನಿಸ್ ಇಸ್ರೇಲ್ ದಾಳಿಯಲ್ಲಿ ಫಿನಿಶ್!

'ಕೆಲಸ ಕಳೆದುಕೊಳ್ಳುವ ಭಯವಿತ್ತು': 2011ರಲ್ಲಿ ಶೂಟಿಂಗ್ ವೇಳೆ ನಿರ್ದೇಶಕರಿಂದ ಲೈಂಗಿಕ ಕಿರುಕುಳ ಘಟನೆ ನೆನಪಿಸಿಕೊಂಡ ಸ್ವರಾ ಭಾಸ್ಕರ್!