ನವದೆಹಲಿ: ಚುನಾವಣಾ ಆಯೋಗದ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇತರ ಇಂಡಿಯಾ ಬ್ಲಾಕ್ ನಾಯಕರು ಸೋಮವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಮತದಾರರ ಪಟ್ಟಿಯ ರಾಷ್ಟ್ರವ್ಯಾಪಿ ವಿಶೇಷ ಸಮಗ್ರ ಪರಿಷ್ಕರಣೆ(SIR)ಗೆ ಆದೇಶ ನೀಡಿದ್ದು ಯಾರು? ಈ ನಿರ್ಧಾರದ ಹಿಂದಿನ ಪ್ರಕ್ರಿಯೆಯ ಕುರಿತು ಉತ್ತರಗಳನ್ನು ಕೋರಿ, ಭಾರತೀಯ ಚುನಾವಣಾ ಆಯೋಗ(ECI)ಕ್ಕೆ 48 ಪ್ರಶ್ನೆಗಳನ್ನು ಕೇಳಲು ಅನುಮತಿ ನೀಡಬೇಕು ಎಂದು ಇಂಡಿಯಾ ಬಣ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.
ಎಸ್ಐಆರ್ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ವೇಳೆ, ಚುನಾವಣಾ ಆಯೋಗವು ತನ್ನ ಪ್ರತಿಕ್ರಿಯೆಯಲ್ಲಿ ಸೂಕ್ತ ದಾಖಲೆಗಳು ಮತ್ತು ವಾಸ್ತವಾಂಶಗಳನ್ನು ನ್ಯಾಯಾಲಯದ ಮುಂದಿಡುವ ಬದಲು ಕೇವಲ ಸಮರ್ಥನೆಗಳನ್ನು ಮಾತ್ರ ನೀಡಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ರಾಷ್ಟ್ರವ್ಯಾಪಿ SIR ಗೆ ಸಂಬಂಧಿಸಿದ ನಿರ್ಧಾರವನ್ನು ಚುನಾವಣಾ ಆಯೋಗವು ಸಾಮೂಹಿಕವಾಗಿ ತೆಗೆದುಕೊಂಡಿದೆಯೇ ಅಥವಾ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಇತರ ಇಬ್ಬರು ಚುನಾವಣಾ ಆಯುಕ್ತರ ಅನುಮೋದನೆ ಅಥವಾ ಒಪ್ಪಿಗೆಯಿಲ್ಲದೆ ತಮ್ಮ ಅಧಿಕಾರವನ್ನು ಚಲಾಯಿಸಿದ್ದಾರೆಯೇ ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
ರಾಷ್ಟ್ರವ್ಯಾಪಿ SIRಗೆ ಆದೇಶ ನೀಡಿದ್ದು ಯಾರು? ಇತರ ಚುನಾವಣಾ ಆಯುಕ್ತರ ಒಪ್ಪಿಗೆಯಿಲ್ಲದೆ ಎಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಮತದಾರರ ನೋಂದಣಿಗೆ ಬಳಸಲಾಗುವ ಫಾರ್ಮ್ 6 ಗೆ ಬದಲಾವಣೆಗೆ ಯಾರು ಅನುಮೋದಿಸಿದರು ಎಂಬುದು ಸೇರಿದಂತೆ ಪ್ರತಿಪಕ್ಷ ನಾಯಕರು 48 ಪ್ರಶ್ನೆಗಳನ್ನು ಎತ್ತಿದ್ದಾರೆ.
ವಿಶೇಷ ಪರಿಷ್ಕರಣೆ ಪ್ರಕ್ರಿಯೆಯ ವಿವಿಧ ಅಂಶಗಳ ಕುರಿತು ಅಧಿಕೃತ ದಾಖಲೆಗಳ ಬೆಂಬಲದೊಂದಿಗೆ ವಿವರವಾದ ಉತ್ತರಗಳನ್ನು ಪಡೆಯಲು ಈ ವಿಚಾರಣೆ ಅಗತ್ಯವಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ. ತಾವು ಕೇಳುತ್ತಿರುವ ಮಾಹಿತಿ ಮತ್ತು ದಾಖಲೆಗಳು ಚುನಾವಣಾ ಆಯೋಗದ ಬಳಿ ಮಾತ್ರ ಲಭ್ಯವಿದ್ದು, ಆಯೋಗದ ಸ್ವಂತ ಹೇಳಿಕೆಗಳನ್ನು ಪರಿಶೀಲಿಸುವ ಉದ್ದೇಶದಿಂದ ಈ ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್(Gyanesh Kumar), ಚುನಾವಣಾ ಆಯುಕ್ತರಾದ ಡಾ. ಸುಖ್‌ಬೀರ್ ಸಿಂಗ್ ಸಂಧು, ಡಾ. ವಿವೇಕ್ ಜೋಶಿ ಹಾಗೂ ಉಪ ಚುನಾವಣಾ ಆಯುಕ್ತ ಭಾನು ಪ್ರಕಾಶ್ ಯೇತೂರು ಸೇರಿದಂತೆ ಇತರ ಅಧಿಕಾರಿಗಳಿಂದ ಉತ್ತರ ಕೋರಿ 48 ಪ್ರಶ್ನೆಗಳ ಪಟ್ಟಿಯನ್ನು ಸುಪ್ರೀಂ ಕೋರ್ಟ್‌ಗೆ (Supreme Court) ಸಲ್ಲಿಸಿದ್ದಾರೆ.
ERONET ಮತ್ತು ECINET ಕೇಂದ್ರೀಕರಣದ ಬಗ್ಗೆಯೂ ಪ್ರಶ್ನಿಸಲಾಗಿದ್ದು, ಇಸಿನೆಟ್ ಅನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ ಮತ್ತು ನಿರ್ವಹಿಸಲಾಗುತ್ತಿದೆ? ಎಂದು ಅರ್ಜಿದಾರರು ಕೇಳಿದ್ದಾರೆ.
ಈ ಪ್ರಕ್ರಿಯೆಯಲ್ಲಿ ಅಳಿಸಲಾದ ಮತದಾರರ ಸಂಖ್ಯೆ, ಅಳಿಸುವಿಕೆಗೆ ಕಾರಣಗಳು, ಅನುಸರಿಸಿದ ಪರಿಶೀಲನಾ ಪ್ರಕ್ರಿಯೆ, ಬೂತ್ ಮಟ್ಟದ ಅಧಿಕಾರಿಗಳ(ಬಿಎಲ್‌ಒ) ಪಾತ್ರ, ಮತದಾರರಿಗೆ ನೀಡಲಾದ ನೋಟಿಸ್‌ಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವರಿಗೆ ಒದಗಿಸಲಾದ ಸಮಯದ ವಿವರಗಳನ್ನು ಸಹ ನಾಯಕರು ಕೋರಿದ್ದಾರೆ.