ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಯ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕರ್ತವ್ಯದ ವೇಳೆ ಎಲ್ಲ ಸಿಬ್ಬಂದಿಯೂ ಕಡ್ಡಾಯವಾಗಿ ಬುಲೆಟ್‌ಪ್ರೂಫ್ ಜಾಕೆಟ್ ಧರಿಸಬೇಕು ಎಂದು ಸಿಆರ್‌ಪಿಎಫ್ ತನ್ನ ಘಟಕಗಳಿಗೆ ನಿರ್ದೇಶನ ನೀಡಿದೆ.
ಇದರ ಜತೆಗೆ, ತಪಾಸಣಾ ಕೇಂದ್ರಗಳಲ್ಲಿ ಹೆಚ್ಚಿನ ಸುರಕ್ಷಿತ ಬಂಕರ್‌ಗಳನ್ನು ನಿರ್ಮಿಸುವುದು, ಈಗಾಗಲೇ ಇರುವ ಬಂಕರ್‌ಗಳನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಕಾರ್ಯಾಚರಣೆಯ ಸ್ಥಳಗಳಲ್ಲಿ ಹೆಚ್ಚಿನ ಜಾಗರೂಕತೆ ವಹಿಸುವಂತೆಯೂ ಸೂಚಿಸಲಾಗಿದೆ.
ನವೆಂಬರ್ 11ರಂದು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಸಿಆರ್‌ಪಿಎಫ್ ತಪಾಸಣಾ ಕೇಂದ್ರದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಮೂವರು ಸಿಬ್ಬಂದಿ ಗಾಯಗೊಂಡಿದ್ದರು. ಸ್ಥಿರ ತಪಾಸಣಾ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಭದ್ರತಾ ಸಿಬ್ಬಂದಿಗೆ ಎದುರಾಗುತ್ತಿರುವ ಅಪಾಯಗಳನ್ನು ಈ ದಾಳಿ ಮತ್ತೊಮ್ಮೆ ಎತ್ತಿತೋರಿಸಿತ್ತು. ಇದರ ಬೆನ್ನಲ್ಲೇ ಹೊಸ ಭದ್ರತಾ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ.
ಜಮ್ಮು-ಕಾಶ್ಮೀರದಲ್ಲಿ ಸಿಆರ್‌ಪಿಎಫ್‌ನ ಸುಮಾರು 80 ಬೆಟಾಲಿಯನ್‌ಗಳು ನಿಯೋಜನೆಗೊಂಡಿವೆ. ಕೇಂದ್ರಾಡಳಿತ ಪ್ರದೇಶದಾದ್ಯಂತ ಹಗಲು-ರಾತ್ರಿ ಕಾರ್ಯನಿರ್ವಹಿಸುವ ಅನೇಕ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪರಿಸ್ಥಿತಿಗೆ ಅನುಗುಣವಾಗಿ ಇವುಗಳ ಸಂಖ್ಯೆ ಬದಲಾಗುತ್ತಿರುತ್ತದೆ.
ಹೊಸ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಬಂಕರ್‌ಗಳಿಲ್ಲದ ಸ್ಥಳಗಳಲ್ಲಿ ಬುಲೆಟ್‌ಪ್ರೂಫ್ ಬಂಕರ್‌ಗಳನ್ನು ನಿರ್ಮಿಸಲು ಹಾಗೂ ಈಗಾಗಲೇ ಇರುವ ಬಂಕರ್‌ಗಳನ್ನು ಮತ್ತಷ್ಟು ಬಲಪಡಿಸಲು ಸೂಚಿಸಲಾಗಿದೆ.
ತಪಾಸಣಾ ಕೇಂದ್ರಗಳು ಮತ್ತು ಸ್ಥಿರ ನಿಯೋಜನಾ ಸ್ಥಳಗಳಲ್ಲಿನ ಭದ್ರತಾ ಲೋಪಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಿಯೋಜನಾ ಸ್ಥಳಗಳಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆ ಕಲ್ಪಿಸುವುದು, ಕಣ್ಗಾವಲು ಹೆಚ್ಚಿಸುವುದು ಮತ್ತು ಪರಿಣಾಮಕಾರಿ ಸಂವಹನ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವಂತೆಯೂ ಘಟಕಗಳಿಗೆ ನಿರ್ದೇಶನ ನೀಡಲಾಗಿದೆ.
ಕರ್ತವ್ಯದ ವೇಳೆ ಮೊಬೈಲ್ ಫೋನ್ ಬಳಕೆಯನ್ನು ಮಿತಿಗೊಳಿಸುವಂತೆ ಸಿಬ್ಬಂದಿಗೆ ಸಲಹೆ ನೀಡಲಾಗಿದೆ. ಇದರಿಂದ ನಿರಂತರ ಜಾಗರೂಕತೆ ಕಾಪಾಡಿಕೊಳ್ಳುವುದರ ಜತೆಗೆ ಕಾರ್ಯಾಚರಣೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಯ ಸುರಕ್ಷತೆಯನ್ನೂ ಖಚಿತಪಡಿಸಿಕೊಳ್ಳಬಹುದು" ಎಂದು ಮೂಲವೊಂದು ತಿಳಿಸಿದೆ.
ಎಲ್ಲ ಸುರಕ್ಷತಾ ವ್ಯವಸ್ಥೆಗಳನ್ನು ಸಾಧ್ಯವಾದಷ್ಟು ಶೀಘ್ರದಲ್ಲಿ ಜಾರಿಗೊಳಿಸುವ ಜವಾಬ್ದಾರಿಯನ್ನು ಘಟಕಗಳ ಕಮಾಂಡೆಂಟ್‌ಗಳು ಮತ್ತು ಕಂಪನಿ ಕಮಾಂಡರ್‌ಗಳಿಗೆ ವಹಿಸಲಾಗಿದೆ. ಮಾರ್ಗಸೂಚಿಗಳ ಪಾಲನೆಯ ಮೇಲ್ವಿಚಾರಣೆಯನ್ನು ಸ್ವತಃ ನಡೆಸಬೇಕು, ಪೊಲೀಸರೊಂದಿಗೆ ನಿಕಟ ಸಮನ್ವಯ ಸಾಧಿಸಬೇಕು ಹಾಗೂ ಪರಿಷ್ಕೃತ ಸೂಚನೆಗಳು ಮತ್ತು ಬದಲಾದ ನಿಯೋಜನಾ ಸ್ಥಳಗಳ ಕುರಿತು ಸಿಬ್ಬಂದಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.
ಉಗ್ರರ ದಾಳಿ ಅಥವಾ ಇತರ ಭದ್ರತಾ ತುರ್ತು ಪರಿಸ್ಥಿತಿಗಳು ಎದುರಾದಾಗ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ಮತ್ತು ನಿಗದಿತ ಪ್ರತಿಕ್ರಿಯಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ಮಾರ್ಗಸೂಚಿಯಲ್ಲಿ ಒತ್ತಿಹೇಳಲಾಗಿದೆ. ಈ ನಿರ್ದೇಶನಗಳನ್ನು ಅನುಷ್ಠಾನಗೊಳಿಸುವಲ್ಲಿ ಯಾವುದೇ ಲೋಪ ಕಂಡುಬಂದರೂ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಮೂಲಗಳು ಎಚ್ಚರಿಸಿವೆ.