ರಾಂಚಿ: ಪತ್ನಿಯು ತನ್ನ ಪತಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ ಮಾತ್ರಕ್ಕೆ ಅದನ್ನು ವೈವಾಹಿಕ ಕ್ರೌರ್ಯ (Cruelty) ಅಥವಾ ದಾಂಪತ್ಯದಿಂದ ದೂರ ಸರಿದಿರುವುದು (Desertion) ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಜಾರ್ಖಂಡ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅದರಲ್ಲೂ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವಾಗ ಮತ್ತು ಕಿರುಕುಳದ ಕಾರಣದಿಂದಲೇ ತಾನು ಗಂಡನ ಮನೆಯನ್ನು ತೊರೆಯಬೇಕಾಯಿತು ಎಂದು ಪತ್ನಿ ಹೇಳುತ್ತಿರುವ ಸಂದರ್ಭದಲ್ಲಿ ಈ ಅಂಶವನ್ನು ವಿಶೇಷವಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಮೂಲಕ, ಕೆಳಹಂತದ ಕೌಟುಂಬಿಕ ನ್ಯಾಯಾಲಯವು ಪತಿಗೆ ನೀಡಿದ್ದ ಏಕಪಕ್ಷೀಯ ವಿಚ್ಛೇದನ (Ex-parte divorce) ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್, ಪತಿ ಅಥವಾ ಪತ್ನಿ ಕೌಟುಂಬಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದಿದ್ದರೂ, ಆರೋಪಗಳನ್ನು ವಿಶ್ವಾಸಾರ್ಹ ಸಾಕ್ಷ್ಯಗಳ ಆಧಾರದಲ್ಲಿ ಪ್ರತ್ಯೇಕವಾಗಿ ಸಾಬೀತುಪಡಿಸುವುದು ಅಗತ್ಯ ಎಂದು ಒತ್ತಿಹೇಳಿದೆ.
ನ್ಯಾಯಮೂರ್ತಿಗಳಾದ ಸುಜಿತ್ ನಾರಾಯಣ ಪ್ರಸಾದ್ ಮತ್ತು ಅಖಿಲ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಕ್ರಿಮಿನಲ್ ಪ್ರಕರಣವೊಂದು ಬಾಕಿ ಇದೆ ಎಂಬ ಕಾರಣಕ್ಕೆ ಅದನ್ನು ಸ್ವಯಂಚಾಲಿತವಾಗಿ ಕ್ರೌರ್ಯದ ಸಾಕ್ಷ್ಯವೆಂದು ಪರಿಗಣಿಸಲಾಗದು ಎಂದು ಹೇಳಿದೆ. ಅಲ್ಲದೆ, ಆರೋಪಗಳು ಸುಳ್ಳು ಎಂದು ಯಾವುದೇ ಸಮರ್ಥ ನ್ಯಾಯಾಲಯ ತೀರ್ಪು ನೀಡದಿರುವಾಗ ಪ್ರಕರಣ ದಾಖಲಿಸಿರುವುದನ್ನೇ ಪತ್ನಿಯ ವಿರುದ್ಧದ ಸಾಕ್ಷ್ಯವಾಗಿ ಬಳಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಪತ್ನಿ ಕ್ರಿಮಿನಲ್ ಪ್ರಕರಣ ದಾಖಲಿಸಿದ ಮಾತ್ರಕ್ಕೆ ಅದನ್ನು ಸ್ವಯಂಚಾಲಿತವಾಗಿ ಕ್ರೌರ್ಯ ಅಥವಾ ಪತಿಯನ್ನು ತೊರೆದಿರುವುದಕ್ಕೆ ಸಾಕ್ಷ್ಯವೆಂದು ಪರಿಗಣಿಸಲಾಗದು. ಅದರಲ್ಲೂ ಸಂಬಂಧಿತ ಪ್ರಕರಣ ವಿಚಾರಣಾ ಹಂತದಲ್ಲಿದೆ ಎಂದು ಹೇಳಲಾಗುತ್ತಿರುವಾಗ ಹೀಗೆ ನಿರ್ಧರಿಸುವುದು ಸರಿಯಲ್ಲ” ಎಂದು ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ವೈವಾಹಿಕ ಸಂಬಂಧವನ್ನು ಶಾಶ್ವತವಾಗಿ ಕೊನೆಗೊಳಿಸುವ ವಿಚ್ಛೇದನ ಪ್ರಕ್ರಿಯೆಯಲ್ಲಿ, ಸಂಬಂಧಪಟ್ಟ ವ್ಯಕ್ತಿಗಳ ನಾಗರಿಕ ಸ್ಥಾನಮಾನವೇ ಬದಲಾಗುವುದರಿಂದ ಸಹಜ ನ್ಯಾಯದ ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಪತ್ನಿ ವಿಚಾರಣೆಗೆ ಹಾಜರಾಗಲಿಲ್ಲ ಎಂಬ ಒಂದೇ ಕಾರಣಕ್ಕೆ ಕೌಟುಂಬಿಕ ನ್ಯಾಯಾಲಯವು ಯಾಂತ್ರಿಕವಾಗಿ ತೀರ್ಪು ನೀಡಿದೆ. ಅಗತ್ಯ ಅಂಶಗಳನ್ನು ಸಮರ್ಪಕವಾಗಿ ಪರಿಶೀಲಿಸುವಲ್ಲಿ ವಿಫಲವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪತ್ನಿ ಆಗಾಗ್ಗೆ ತವರು ಮನೆಗೆ ಭೇಟಿ ನೀಡುವುದು ಅಥವಾ ಗಂಡನ ಮನೆಯಲ್ಲಿ ವಾಸಿಸಲು ನಿರಾಕರಿಸುವುದು ಮಾತ್ರಕ್ಕೆ ಅದನ್ನು ಕ್ರೌರ್ಯವೆಂದು ಪರಿಗಣಿಸಲಾಗದು ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಆಕೆ ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದ ಸಂದರ್ಭಗಳು ಮತ್ತು ಕಾರಣಗಳನ್ನು ವಸ್ತುನಿಷ್ಠವಾಗಿ ಪರಿಶೀಲಿಸಬೇಕು. ಯಾವುದೇ ಸಮಂಜಸ ಕಾರಣವಿಲ್ಲದೆ ಪತ್ನಿ ಗಂಡನ ಮನೆಯನ್ನು ತೊರೆದಿದ್ದಾಳೆ ಎಂಬುದನ್ನು ಪತಿಯೇ ಸಾಬೀತುಪಡಿಸಬೇಕು ಎಂದು ತಿಳಿಸಿದೆ.
ಈ ದಂಪತಿಗೆ 2006ರ ಮೇ 9ರಂದು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. 2019ರ ಆಗಸ್ಟ್‌ನಲ್ಲಿ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಉಂಟಾದ ಬಳಿಕ ಪತ್ನಿ ಮಕ್ಕಳೊಂದಿಗೆ ಗಂಡನ ಮನೆಯನ್ನು ತೊರೆದು ತವರು ಮನೆಗೆ ತೆರಳಿದ್ದರು. 2023ರಲ್ಲಿ ಪತಿ ಕ್ರೌರ್ಯ ಮತ್ತು ಪರಿತ್ಯಾಗದ ಆಧಾರದ ಮೇಲೆ ವಿಚ್ಛೇದನ ಕೋರಿ ದುಮ್ಕಾ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ವೇಳೆ ಪತ್ನಿ ಹಾಜರಾಗದ ಹಿನ್ನೆಲೆಯಲ್ಲಿ 2023ರ ಡಿಸೆಂಬರ್ 5ರಂದು ನ್ಯಾಯಾಲಯ ಏಕಪಕ್ಷೀಯ ವಿಚ್ಛೇದನ ತೀರ್ಪು ನೀಡಿತ್ತು.
ಈ ತೀರ್ಪನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ತಮಗೆ ಕ್ರೌರ್ಯ ಮತ್ತು ವರದಕ್ಷಿಣೆ ಕಿರುಕುಳ ನೀಡಲಾಗಿತ್ತು. ಕೌಟುಂಬಿಕ ನ್ಯಾಯಾಲಯವು ವಿಚಾರಣೆಯ ನೋಟಿಸ್ ಸರಿಯಾಗಿ ತಲುಪಿದೆಯೇ ಮತ್ತು ತಾವು ಗಂಡನ ಮನೆಯನ್ನು ತೊರೆಯಲು ಕಾರಣವೇನು ಎಂಬುದನ್ನು ಸಮರ್ಪಕವಾಗಿ ಪರಿಶೀಲಿಸಿಲ್ಲ ಎಂದು ಅವರು ವಾದಿಸಿದ್ದರು.
ಪ್ರಕರಣದ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸಿದ ಹೈಕೋರ್ಟ್, ಪತಿಯ ಕ್ರೌರ್ಯದ ಆರೋಪಗಳು ಬಹುತೇಕ ಸಾಮಾನ್ಯ ಸ್ವರೂಪದಲ್ಲಿವೆ ಎಂದು ಕಂಡುಕೊಂಡಿದೆ. ಪತ್ನಿಯಿಂದ ದೈಹಿಕ ಅಥವಾ ಮಾನಸಿಕ ಕ್ರೌರ್ಯ ನಡೆದಿದೆ ಎಂಬುದನ್ನು ಸಾಬೀತುಪಡಿಸುವ ನಿರ್ದಿಷ್ಟ ಘಟನೆಯನ್ನು ಪತಿ ಸಮರ್ಪಕವಾಗಿ ಮಂಡಿಸಿಲ್ಲ ಎಂದು ಹೇಳಿದೆ.
ದಾಂಪತ್ಯ ಹಕ್ಕುಗಳ ಮರುಸ್ಥಾಪನೆಗೆ ನೀಡಲಾದ ಆದೇಶವೊಂದೇ ವಿಚ್ಛೇದನ ನೀಡಲು ಸ್ವಯಂಚಾಲಿತವಾಗಿ ಅರ್ಹತೆ ಕಲ್ಪಿಸುವುದಿಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಕಾರಣಕ್ಕೆ ಮಾತ್ರ ಅದನ್ನು ಪರಿತ್ಯಾಗವೆಂದು ಪರಿಗಣಿಸಲಾಗದು. ವೈವಾಹಿಕ ಸಂಬಂಧವನ್ನು ಶಾಶ್ವತವಾಗಿ ಕೊನೆಗೊಳಿಸುವ ಉದ್ದೇಶ ಪತ್ನಿಗಿತ್ತು ಮತ್ತು ಪ್ರತ್ಯೇಕವಾಗಿ ವಾಸಿಸಲು ಆಕೆಗೆ ಯಾವುದೇ ಸಮರ್ಥನೀಯ ಕಾರಣವಿರಲಿಲ್ಲ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ ಎಂದು ತಿಳಿಸಿದೆ.
ಕ್ರೌರ್ಯ ಮತ್ತು ಪರಿತ್ಯಾಗದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪತಿ ವಿಫಲರಾಗಿದ್ದಾರೆ ಎಂದು ತೀರ್ಮಾನಿಸಿದ ಹೈಕೋರ್ಟ್, ಪತ್ನಿಯ ಮೇಲ್ಮನವಿಯನ್ನು ಪುರಸ್ಕರಿಸಿ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಏಕಪಕ್ಷೀಯ ವಿಚ್ಛೇದನ ತೀರ್ಪನ್ನು ರದ್ದುಗೊಳಿಸಿದೆ.