ನವದೆಹಲಿ: ಸಾಮಾನ್ಯ ಜನರಿಗೂ ಕೈಗೆಟುಕುವ ದರದಲ್ಲಿ ವಿಮಾನ ಪ್ರಯಾಣ ಒದಗಿಸುವ ಮಹತ್ವಾಕಾಂಕ್ಷೆಯ 'ಉಡಾನ್' (UDAN) ಯೋಜನೆಗೆ ಭಾರಿ ಹಿನ್ನಡೆಯಾಗಿದೆ.
ಕೇಂದ್ರ ಸರ್ಕಾರದ ಮೂರು ವರ್ಷಗಳ ಸಬ್ಸಿಡಿ ಅವಧಿ ಮುಕ್ತಾಯಗೊಂಡ ಬೆನ್ನಲ್ಲೇ, ದೇಶಾದ್ಯಂತ ಉಡಾನ್ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಕನಿಷ್ಠ 14 ರಿಂದ 20 ಪ್ರಾದೇಶಿಕ ವಿಮಾನ ನಿಲ್ದಾಣಗಳಲ್ಲಿ ವಾಣಿಜ್ಯ ವಿಮಾನ ಹಾರಾಟ ಸಂಪೂರ್ಣ ಸ್ಥಗಿತಗೊಂಡಿದೆ.
ದೇಶದ ಹಲವು ವಿಮಾನ ನಿಲ್ದಾಣಗಳಲ್ಲಿ ಉಡಾನ್ ಯೋಜನೆಯಡಿ ವಿಮಾನ ಹಾರಾಟವೇ ನಡೆಯುತ್ತಿಲ್ಲ ಎಂಬುದನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಒದಗಿಸಿರುವ ಅಂಕಿಅಂಶಗಳು ಬಹಿರಂಗಪಡಿಸಿವೆ.
ನವೆಂಬರ್ 13ರ ವೇಳೆಗೆ ಪಾಸಿಘಾಟ್, ತೇಜ್ಪುರ್, ಕಾಂಡ್ಲಾ, ಏಕತಾ ಪ್ರತಿಮೆ, ಸಬರಮತಿ ನದಿ, ಡಾಟಿಯಾ, ಗೊಂಡಿಯಾ, ಲುಧಿಯಾನ, ಪಠಾಣ್ಕೋಟ್, ಪೋಕ್ಯೋಂಗ್, ಅಲಿಗಢ, ಅಜಮ್ಗಢ, ಚಿತ್ರಕೂಟ, ಮೊರಾದಾಬಾದ್, ಶರ್ವಸ್ತಿ, ಕುಶಿನಗರ, ಸಹಸ್ತ್ರಧರ್, ಚಿನ್ಯಾಲಿಸೌರ್, ನೈನಿತಾಲ್ ಮತ್ತು ಕೂಚ್ ಬೆಹಾರ್ ಸೇರಿದಂತೆ ಹಲವು ವಿಮಾನ ನಿಲ್ದಾಣಗಳಲ್ಲಿ ನಿಗದಿತ ವಿಮಾನ ಸೇವೆಗಳು ಸ್ಥಗಿತಗೊಂಡಿದ್ದವು. ಇವುಗಳಲ್ಲಿ ಹೆಚ್ಚಿನವು ಉತ್ತರ ಪ್ರದೇಶದಲ್ಲಿವೆ.
ವಿಮಾನಯಾನ ಸಂಸ್ಥೆಗಳು ಸರ್ಕಾರದಿಂದ ಸಬ್ಸಿಡಿ ಪಡೆದು, ಮೂರು ವರ್ಷಗಳ ಸಬ್ಸಿಡಿ ಅವಧಿ ಮುಗಿದ ಬಳಿಕ ಯೋಜನೆಯಿಂದ ಹಿಂದೆ ಸರಿದಿರುವುದೇ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸ್ಥಗಿತಗೊಳ್ಳಲು ಪ್ರಮುಖ ಕಾರಣ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿಯೊಬ್ಬರು, ಯೋಜನೆ ಆರಂಭವಾದಾಗ ಹಲವು ವಿಮಾನಯಾನ ಸಂಸ್ಥೆಗಳು ಉತ್ಸಾಹದಿಂದ ಭಾಗವಹಿಸಿದ್ದವು. ಆದರೆ, ಅವುಗಳಿಗೆ ಸರ್ಕಾರದಿಂದ ಹೆಚ್ಚಿನ ಪ್ರಮಾಣದ ಸಬ್ಸಿಡಿ ನೀಡಲಾಗುತ್ತಿತ್ತು. ಪ್ರಯಾಣಿಕರಿಲ್ಲದೆ ಖಾಲಿ ಉಳಿಯುವ ಪ್ರತಿ ಆಸನದ ವೆಚ್ಚವನ್ನೂ ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಸಬ್ಸಿಡಿ ಅವಧಿ ಮುಗಿದ ಬಳಿಕ ಸ್ವಂತ ವೆಚ್ಚದಲ್ಲಿ ಸೇವೆ ಮುಂದುವರಿಸಲು ವಿಮಾನಯಾನ ಸಂಸ್ಥೆಗಳು ಆಸಕ್ತಿ ತೋರಲಿಲ್ಲ. ಹಾಗೆ ಮಾಡಿದರೆ ಅದು ಅವುಗಳಿಗೆ ಆರ್ಥಿಕ ಹೊರೆಯಾಗುತ್ತಿತ್ತು ಎಂದು ಹೇಳಿದ್ದಾರೆ.
ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳೂ ಈ ಯೋಜನೆ ಯಾವುದೇ ಸಂಸ್ಥೆಗೆ ಲಾಭದಾಯಕವಾಗಿರಲಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಹಿರಿಯ ಪೈಲಟ್ ಒಬ್ಬರು ಮಾತನಾಡಿ, ವಿಮಾನ ನಿಲ್ದಾಣಗಳಲ್ಲಿ ಮೂಲಸೌಕರ್ಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿದ್ದವು. ರನ್ವೇಗಳಲ್ಲಿ ವಿಮಾನ ಇಳಿಯಲು ಅಗತ್ಯವಾದ ಮಾರ್ಗದರ್ಶಕ ಸಾಧನಗಳಿರಲಿಲ್ಲ. ಇದರಿಂದ ಗೋಚರತೆ ಕಡಿಮೆಯಾಗಿ ವಿಮಾನ ಕಾರ್ಯಾಚರಣೆ ಅಪಾಯಕಾರಿಯಾಗುತ್ತಿತ್ತು. ಕೆಲವು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಟರ್ಮಿನಲ್ಗಳು ಹಾಗೂ ಸಮರ್ಪಕ ವಾಯು ಸಂಚಾರ ನಿಯಂತ್ರಣ ಕೇಂದ್ರಗಳೂ ಇರಲಿಲ್ಲ ಎಂದು ತಿಳಿಸಿದ್ದಾರೆ.
ಉಡಾನ್ ಯೋಜನೆಯ ಹೊಸ ಆವೃತ್ತಿಯಲ್ಲಿ ಈ ಎಲ್ಲ ಲೋಪದೋಷಗಳನ್ನು ಸರಿಪಡಿಸಲಾಗುವುದು ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧಿಕಾರಿಯೊಬ್ಬರು ಭರವಸೆ ನೀಡಿದ್ದಾರೆ.
ಈ ನಡುವೆ ಉಡಾನ್ ಯೋಜನೆಯಡಿ ವಿಮಾನ ನಿಲ್ದಾಣಗಳನ್ನು ಆಗಾಗ್ಗೆ ಬಳಸುತ್ತಿದ್ದ ಪ್ರಯಾಣಿಕರೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಈ ಯೋಜನೆಯಡಿ ಇಂಡಿಗೋ ಸಂಸ್ಥೆ ಚೆನ್ನೈ ಮತ್ತು ಮೈಸೂರು ನಡುವಿನ ಪ್ರಯಾಣಕ್ಕೆ ರೂ.2,700 ಶುಲ್ಕ ವಿಧಿಸುತ್ತಿತ್ತು. ಆದರೆ, ಈಗ ಇದೇ ಮಾರ್ಗದಲ್ಲಿ ಪ್ರಯಾಣಿಸಲು ರೂ.13,000 ಪಾವತಿಸಬೇಕಾಗಿದೆ. ಸ್ಪೈಸ್ಜೆಟ್ ಕೆಲವು ಮಾರ್ಗಗಳಲ್ಲಿ ಸೇವೆ ಆರಂಭಿಸಲು ಅರ್ಜಿ ಸಲ್ಲಿಸಿ ಪರವಾನಗಿಯನ್ನೂ ಪಡೆದಿತ್ತು. ಆದರೆ, ಅನುಮತಿ ಪಡೆದ ಮಾರ್ಗಗಳಲ್ಲಿ ಶೇ 25ರಷ್ಟು ಸೇವೆಯನ್ನೂ ನಿರ್ವಹಿಸಲಿಲ್ಲ ಎಂದು ಅವರು ಹೇಳಿದ್ದಾರೆ.