ನವದೆಹಲಿ: ರಾಜಧಾನಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದ್ದು, ಟಿಕೆಟ್, ದಾಖಲೆಗಳೇನೂ ಇಲ್ಲದೇ ಆಗಂತುಕನೋರ್ವ ವಿಮಾನ ನಿಲ್ದಾಣದೊಳಗೆ ನುಗ್ಗಲು ಯತ್ನಿಸಿದ ಘಟನೆ ನಡೆದಿದೆ.
ಯಾವುದೇ ಪ್ರಯಾಣದ ದಾಖಲೆಗಳಿಲ್ಲದೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಐಜಿಐ) ಟರ್ಮಿನಲ್‌ಗೆ ಬಲವಂತವಾಗಿ ನುಗ್ಗಲು ಯತ್ನಿಸಿದ ವ್ಯಕ್ತಿಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಹರಿಯಾಣ ಮೂಲದ ಈ ವ್ಯಕ್ತಿಯನ್ನು ವಿಚಾರಣೆಗಾಗಿ ದೆಹಲಿ ಪೊಲೀಸರಿಗೆ ಒಪ್ಪಿಸಲಾಗಿದೆ.
ಬುಧವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ವಿಮಾನ ನಿಲ್ದಾಣದ ಟರ್ಮಿನಲ್-3ರ ನಿರ್ಗಮನ ದ್ವಾರದಲ್ಲಿ ಈ ಘಟನೆ ನಡೆದಿದೆ. ಸಿಐಎಸ್‌ಎಫ್ ಸಿಬ್ಬಂದಿ ವ್ಯಕ್ತಿಯನ್ನು ತಡೆಯಲು ಪ್ರಯತ್ನಿಸಿದರೂ, ಆತ ಅವರನ್ನು ತಳ್ಳಿ ಒಳಗೆ ನುಗ್ಗಲು ಯತ್ನಿಸಿದ್ದಾನೆ. ಈ ಘಟನೆಯ 25 ಸೆಕೆಂಡ್‌ಗಳ ವಿಡಿಯೋವನ್ನು ಸಿಐಎಸ್‌ಎಫ್ ತನ್ನ ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿದೆ.
ಸಿಬ್ಬಂದಿಯನ್ನು ತಳ್ಳಿ ಒಳನುಗ್ಗಿದ ವ್ಯಕ್ತಿ
ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಭದ್ರತಾ ಸಿಬ್ಬಂದಿಯನ್ನು ತಳ್ಳಿ ಟರ್ಮಿನಲ್ ಒಳಗೆ ನುಗ್ಗುತ್ತಿರುವುದು ಕಾಣಿಸುತ್ತದೆ. ಈ ವೇಳೆ ಅಲ್ಲಿದ್ದ ಸಿಬ್ಬಂದಿ ಆತನನ್ನು ತಡೆಯಲು ಪ್ರಯತ್ನಿಸಿದ್ದಾರೆ. ಕೆಲ ಮೀಟರ್ ಒಳಗೆ ಓಡಿದ ವ್ಯಕ್ತಿಯನ್ನು ಮತ್ತೊಬ್ಬ ಶಸ್ತ್ರಸಜ್ಜಿತ ಸಿಐಎಸ್‌ಎಫ್ ಸಿಬ್ಬಂದಿ ಸಹಾಯದಿಂದ ಹಿಡಿಯಲಾಗಿದೆ.
ತ್ವರಿತವಾಗಿ ಸ್ಥಳಕ್ಕೆ ಧಾವಿಸಿದ ತ್ವರಿತ ಕಾರ್ಯಾಚರಣೆ ತಂಡದ (QRT) ಸಿಬ್ಬಂದಿ ಕೆಲವೇ ಸೆಕೆಂಡುಗಳಲ್ಲಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಇದರಿಂದ ವಿಮಾನ ನಿಲ್ದಾಣದ ಭದ್ರತೆಗೆ ಎದುರಾಗಬಹುದಾಗಿದ್ದ ಅಪಾಯವನ್ನು ತಪ್ಪಿಸಲಾಗಿದೆ ಎಂದು ಸಿಐಎಸ್‌ಎಫ್ ತಿಳಿಸಿದೆ.
ಬ್ಯಾಗ್‌ನಲ್ಲಿ ಗುರುತಿನ ಚೀಟಿ, ಶೈಕ್ಷಣಿಕ ದಾಖಲೆ ಪತ್ತೆ
ವ್ಯಕ್ತಿಯ ಬ್ಯಾಗ್ ಪರಿಶೀಲಿಸಿದಾಗ ಕೆಲವು ಗುರುತಿನ ಚೀಟಿಗಳು ಮತ್ತು ಶೈಕ್ಷಣಿಕ ಪ್ರಮಾಣಪತ್ರಗಳು ಪತ್ತೆಯಾಗಿವೆ. ಆತನನ್ನು ಹೆಚ್ಚಿನ ವಿಚಾರಣೆಗಾಗಿ ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ವಿಮಾನ ನಿಲ್ದಾಣದ ಟರ್ಮಿನಲ್ ಪ್ರವೇಶಿಸಲು ಪ್ರಯಾಣಿಕರು ಮಾನ್ಯವಾದ ಪ್ರಯಾಣದ ದಾಖಲೆ ಹಾಗೂ ಗುರುತಿನ ಚೀಟಿಯನ್ನು ಭದ್ರತಾ ಸಿಬ್ಬಂದಿಗೆ ತೋರಿಸಬೇಕು. ವಿಮಾನ ನಿಲ್ದಾಣದ ಸಿಬ್ಬಂದಿಗೂ ಗುರುತಿನ ಚೀಟಿ ಕಡ್ಡಾಯವಾಗಿದೆ.
ದೇಶದ ಅತ್ಯಂತ ಸೂಕ್ಷ್ಮ ಭದ್ರತಾ ಪ್ರದೇಶಗಳಲ್ಲಿ ಒಂದಾಗಿರುವ ದೆಹಲಿ ವಿಮಾನ ನಿಲ್ದಾಣಕ್ಕೆ ಪ್ರತಿದಿನ ಸಾವಿರಾರು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರು ಆಗಮಿಸುತ್ತಾರೆ. ಇಲ್ಲಿ ಭಯೋತ್ಪಾದನಾ ನಿಗ್ರಹ ಸೇರಿದಂತೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯನ್ನು ಸಿಐಎಸ್‌ಎಫ್ ನಿರ್ವಹಿಸುತ್ತಿದೆ.