ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 12 ವರ್ಷಗಳಲ್ಲಿ ಭಾರತದ ಅಭಿವೃದ್ಧಿಯನ್ನು ಬಿಂಬಿಸಲು ಜನಪ್ರಿಯ ವಿಡಿಯೋ ಗೇಮ್ 'ಗ್ರ್ಯಾಂಡ್ ಥೆಫ್ಟ್ ಆಟೋ' (GTA) ಯನ್ನು ಪ್ರಸ್ತಾಪಿಸಿದ್ದು, ಇದಕ್ಕೆ ಕಾಂಗ್ರೆಸ್ ವ್ಯಂಗ್ಯಭರಿತ ಪ್ರತಿಕ್ರಿಯೆ ನೀಡಿದೆ. ಈ ವಿಡಿಯೋ ಗೇಮ್‌ನಲ್ಲಿರುವ 'ಅಪರಾಧಿ ಜೋಡಿ'ಯನ್ನು ಉಲ್ಲೇಖಿಸುವ ಮೂಲಕ ಕಾಂಗ್ರೆಸ್ ಪ್ರಧಾನಿಯನ್ನು ಟೀಕಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮೋದಿ, “ಭಾರತ ಈಗ ಸಂಪೂರ್ಣ ಹೊಸ ಆಟ ಶುರುಮಾಡಿದೆ” ಎಂದು ಬರೆದುಕೊಂಡಿದ್ದು, 'ಜಿಟಿಎ 5 ಮತ್ತು 6ರ ನಡುವಿನ ಅವಧಿಯಲ್ಲಿ ಭಾರತದ ಬದಲಾವಣೆ ಹೇಗಿದೆ' ಎಂಬ ಶೀರ್ಷಿಕೆಯಡಿ 10 ಸ್ಲೈಡ್‌ಗಳನ್ನು ಹಂಚಿಕೊಂಡಿದ್ದಾರೆ.
ಯುವಜನರನ್ನು ಆಕರ್ಷಿಸುವ ಪ್ರಯತ್ನವಾಗಿ, ವಿಡಿಯೋ ಗೇಮ್‌ನ ಎರಡು ಆವೃತ್ತಿಗಳ ನಡುವಿನ ಅವಧಿಯಲ್ಲಿ ಭಾರತ ಕಂಡ ಅಭಿವೃದ್ಧಿಯನ್ನು ಹೋಲಿಕೆ ಮಾಡುವ ಮೂಲಕ ಮೋದಿ ತಮ್ಮ ಸಂದೇಶವನ್ನು ನೀಡಿದ್ದಾರೆ.
ರಾಕ್‌ಸ್ಟಾರ್ ಗೇಮ್ಸ್ ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿರುವ ಸಾಹಸಮಯ ವಿಡಿಯೋ ಗೇಮ್ 'ಗ್ರ್ಯಾಂಡ್ ಥೆಫ್ಟ್ ಆಟೋ 6' ಜಾಗತಿಕವಾಗಿ ಬಿಡುಗಡೆಯಾಗಿದ್ದು, 2013ರಲ್ಲಿ ಬಿಡುಗಡೆಯಾಗಿದ್ದ 'ಗ್ರ್ಯಾಂಡ್ ಥೆಫ್ಟ್ ಆಟೋ 5' ಬಳಿಕ ಜಿಟಿಎ ಸರಣಿಗೆ ಸೇರ್ಪಡೆಯಾಗಿದೆ.
2013-14ರಲ್ಲಿ ಹಿಂದಿನ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಬಿಡುಗಡೆಯಾದ ಜಿಟಿಎ 5 ಹಾಗೂ ಇಂದು ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಆಡಳಿತಾವಧಿಯಲ್ಲಿ ಬಿಡುಗಡೆಯಾದ ಜಿಟಿಎ 6 ನ್ನು ಹೋಲಿಕೆ ಮಾಡುವ ಮೂಲಕ ವಿವಿಧ ಅಭಿವೃದ್ಧಿ ಕ್ಷೇತ್ರಗಳಲ್ಲಿನ ಬದಲಾವಣೆಗಳನ್ನು ಪ್ರಧಾನಿ ವಿವರಿಸಿದ್ದಾರೆ.
“ಜಿಟಿಎ 5 ಮತ್ತು 6ರ ನಡುವಿನ ಅವಧಿಯಲ್ಲಿ ಭಾರತ ಹೇಗೆ ಅಭಿವೃದ್ಧಿಯ ಹೊಸ ಹಂತಕ್ಕೆ ಏರಿಕೆಯಾಗಿದೆ ಎಂಬುದು ಇಲ್ಲಿದೆ” ಎಂದು ವಿಮಾನ, ರೈಲು, ರಾಕೆಟ್, ಸೌರ ವಿದ್ಯುತ್ ಘಟಕ, ಮೊಬೈಲ್ ಫೋನ್, ರಸ್ತೆ ಜಾಲ ಹಾಗೂ ಹಡಗು ಸೇರಿದಂತೆ ವಿವಿಧ ಚಿತ್ರಗಳನ್ನು ಒಳಗೊಂಡ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಒಂದು ಕಾಲದಲ್ಲಿ 'ಫ್ರಜೈಲ್ ಫೈವ್' (ದುರ್ಬಲ ಐದು ಆರ್ಥಿಕತೆಗಳು) ದೇಶಗಳ ಪಟ್ಟಿಯಲ್ಲಿದ್ದ ಭಾರತ ಇಂದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಬಡತನ ಪ್ರಮಾಣ ಶೇ.27ರಿಂದ ಇಳಿಕೆಯಾಗಿದ್ದು, ತೀವ್ರ ಬಡತನದ ಪ್ರಮಾಣ ಈಗ ಶೇ.2.6ಕ್ಕೆ ತಗ್ಗಿದೆ ಎಂದೂ ತಿಳಿಸಿದ್ದಾರೆ.
ಸ್ವಚ್ಛ ಭಾರತ ಅಭಿಯಾನ ಹಾಗೂ ವಿಶೇಷವಾಗಿ ಮಹಿಳೆಯರಿಗಾಗಿ ಶೌಚಾಲಯ ನಿರ್ಮಾಣದ ಕುರಿತು ಪ್ರಸ್ತಾಪಿಸಿದ ಮೋದಿ, ನೈರ್ಮಲ್ಯ ಸೌಲಭ್ಯಗಳ ವ್ಯಾಪ್ತಿ ಶೇ.39ರಿಂದ ಶೇ.100ಕ್ಕೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.
ಇಂಧನ ಕ್ಷೇತ್ರದಲ್ಲಿ ಭಾರತದ ಸೌರ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 2.82 ಗಿಗಾವ್ಯಾಟ್‌ನಿಂದ 175 ಗಿಗಾವ್ಯಾಟ್‌ಗೆ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.
ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆಯನ್ನು ಉಲ್ಲೇಖಿಸಿದ ಪ್ರಧಾನಿ, ಈ ಹಿಂದೆ ಒಂದೂ ಇರದಿದ್ದ ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ಈಗ 440ಕ್ಕೆ ಏರಿಕೆಯಾಗಿದೆ ಎಂದಿದ್ದಾರೆ. ರೈಲ್ವೆ ವಿದ್ಯುದೀಕರಣ ಪ್ರಮಾಣ ಶೇ.20ರಿಂದ ಶೇ.99.6ಕ್ಕೆ ಹೆಚ್ಚಳವಾಗಿದ್ದು, 1 ಜಿಬಿ 3ಜಿ ಇಂಟರ್ನೆಟ್ ದರ 308 ರೂ.ಗಳಿಂದ 7.51 ರೂ.ಗಳಿಗೆ ಇಳಿಕೆಯಾಗಿದೆ ಎಂದು ಹೇಳಿದ್ದಾರೆ.
ಒಂದು ಕಾಲದಲ್ಲಿ ರಕ್ಷಣಾ ಉಪಕರಣಗಳ ಪ್ರಮುಖ ಆಮದುದಾರನಾಗಿದ್ದ ಭಾರತ ಈಗ 80ಕ್ಕೂ ಹೆಚ್ಚು ದೇಶಗಳಿಗೆ ಶಸ್ತ್ರಾಸ್ತ್ರ ಮತ್ತು ರಕ್ಷಣಾ ಉಪಕರಣಗಳನ್ನು ರಫ್ತು ಮಾಡುತ್ತಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಭದ್ರತಾ ಕ್ಷೇತ್ರದಲ್ಲಿ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆಯೂ ಕಡಿಮೆಯಾಗಿದೆ ಎಂದಿದ್ದಾರೆ.
ಆಗ 182 ಜಿಲ್ಲೆಗಳು ನಕ್ಸಲ್ ಪೀಡಿತವಾಗಿದ್ದವು. ಈಗ ಒಂದೂ ಜಿಲ್ಲೆ ನಕ್ಸಲ್ ಪೀಡಿತವಾಗಿಲ್ಲ ಎಂದು ಮೋದಿ ಹೇಳಿದ್ದಾರೆ.
ಜಿಟಿಎ ಆಟದ ಚಿತ್ರಗಳನ್ನು ಬಳಸಿರುವ ಪ್ರಧಾನಿಯವರ ಕ್ರಮಕ್ಕೆ ಕಾಂಗ್ರೆಸ್ ವ್ಯಂಗ್ಯವಾಡಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, ವಿಡಿಯೋ ಗೇಮ್‌ನ ಕಥಾವಸ್ತುವನ್ನು ಗಮನಿಸಿದರೆ ಮೋದಿ ಅದರ ಚಿತ್ರಗಳನ್ನು ಬಳಸಿರುವುದು ಸೂಕ್ತವಾಗಿದೆ ಎಂದು ಟೀಕಿಸಿದ್ದಾರೆ.
ಯುವಜನರನ್ನು ತಲುಪುವ ಹತಾಶ ಪ್ರಯತ್ನದಲ್ಲಿ ಪ್ರಧಾನಿ ಸಾಮಾಜಿಕ ಜಾಲತಾಣಗಳಲ್ಲಿ ಜಿಟಿಎ 5 ಮತ್ತು ಜಿಟಿಎ 6ರ ಚಿತ್ರಗಳನ್ನು ಬಳಸುವ ಹಂತಕ್ಕೆ ಇಳಿದಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಈ ವಿಡಿಯೋ ಗೇಮ್ ಅಪರಾಧಿಗಳ ಜೋಡಿಯ ಕಥೆಯನ್ನು ಒಳಗೊಂಡಿದೆ ಎಂಬುದನ್ನು ನೆನಪಿಸಿಕೊಳ್ಳಿ. ಎಷ್ಟು ಸೂಕ್ತವಾದ ಆಯ್ಕೆ ಎಂದು ಎಕ್ಸ್ ಖಾತೆಯಲ್ಲಿ ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.