ನವದೆಹಲಿ: ಕೇಂದ್ರ ಸಚಿವ ಸಂಪುಟ ಪುನಾರಚನೆಯ ಕುರಿತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವ ಸಂಪುಟದ ಸಭೆ ನಡೆಸಿ ಸಚಿವರ ಕಾರ್ಯಕ್ಷಮತೆಯನ್ನು ಪರಿಶೀಲಿಸಿದ್ದಾರೆ.
ಮನಿಲಾದಲ್ಲಿ ನಡೆದ ಆಸಿಯಾನ್ (ASEAN) ಶೃಂಗಸಭೆಯಿಂದ ಮರಳಿದ ಕೆಲವೇ ಗಂಟೆಗಳಲ್ಲಿ, ನವೆಂಬರ್ 18 ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ಸುಮಾರು ಮೂರೂವರೆ ಗಂಟೆಗಳ ಕಾಲ ಈ ಮಹತ್ವದ ಸಭೆ ನಡೆಯಿತು.
ಸಭೆಯಲ್ಲಿ ಆಂತರಿಕ ಭದ್ರತೆ, ಬಡತನ ನಿರ್ಮೂಲನೆ, ಆರ್ಥಿಕ ಸೇರ್ಪಡೆ, ಹೆಚ್ಚುತ್ತಿರುವ ಮಾದಕ ವಸ್ತುಗಳ ಹಾವಳಿ, ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನ ಮತ್ತು ಆಡಳಿತಾತ್ಮಕ ಪ್ರಗತಿಯ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಮಾದಕ ವಸ್ತುಗಳ ದುರ್ಬಳಕೆ ವಿರುದ್ಧ ದೇಶಾದ್ಯಂತ ಅಭಿಯಾನ ಆರಂಭಿಸುವ ಅಗತ್ಯವನ್ನು ಮೋದಿ ಪ್ರತಿಪಾದಿಸಿದರು.
ಈ ಪಿಡುಗು ಸಮಾಜವನ್ನು ಒಳಗಿನಿಂದಲೇ ದುರ್ಬಲಗೊಳಿಸುತ್ತಿದೆ ಎಂದು ಎಚ್ಚರಿಸಿದ ಅವರು, ಯುವಜನರು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗದಂತೆ ತಡೆಯಲು ಸರ್ಕಾರದ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಎಡಪಂಥೀಯ ಉಗ್ರವಾದದ ವಿರುದ್ಧ ನಡೆದ ಹೋರಾಟವನ್ನು ಉಲ್ಲೇಖಿಸಿದ ಪ್ರಧಾನಿ, ಭಾರತ ನಕ್ಸಲಿಸಂ ಅನ್ನು ಮಣಿಸಲು ಸಾಧ್ಯವಾದರೆ ಮಾದಕ ವಸ್ತುಗಳ ಪಿಡುಗನ್ನೂ ಸೋಲಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸರ್ಕಾರದ ಪ್ರಮುಖ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಸೆಪ್ಟೆಂಬರ್ನಲ್ಲಿ ನಡೆದ 'ಚಿಂತನ ಶಿಬಿರ'ದಲ್ಲಿ ಸಚಿವರಿಗೆ ವಹಿಸಲಾಗಿದ್ದ ಜವಾಬ್ದಾರಿಗಳ ಪ್ರಗತಿ ಹಾಗೂ ಅವರ ಕಾರ್ಯಕ್ಷಮತೆಯನ್ನು ಪ್ರಧಾನಿ ಪರಿಶೀಲಿಸಿದರು ಎಂದು ಮೂಲಗಳು ತಿಳಿಸಿವೆ.
ಸರ್ಕಾರದ ಯೋಜನೆಗಳ ಪ್ರಯೋಜನಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂದು ಮೋದಿ ಒತ್ತಿ ಹೇಳಿದರು.
ಉತ್ತಮ ಆಡಳಿತವನ್ನು ಭರವಸೆಗಳು ಅಥವಾ ಕಡತಗಳಲ್ಲಿನ ದಾಖಲೆಗಳ ಆಧಾರದಲ್ಲಿ ಅಳೆಯಬಾರದು, ಬದಲಾಗಿ ಜನರ ಬದುಕಿನಲ್ಲಿ ಉಂಟಾಗುವ ನೈಜ ಬದಲಾವಣೆಗಳೇ ಅದರ ಮಾನದಂಡವಾಗಬೇಕು ಎಂದು ತಿಳಿಸಿದರು.
ಸಚಿವರು ತಮ್ಮ ನಿರ್ಧಾರಗಳು ಹಾಗೂ ಕಾರ್ಯವೈಖರಿಯಲ್ಲಿ ಜನರ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಈ ನಡುವೆ ಸಂಸತ್ತಿನ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪವಾಗಬಹುದಾದ ಪ್ರಮುಖ ವಿಷಯಗಳನ್ನು ಗುರುತಿಸುವಂತೆ ಪ್ರಧಾನಿ ಕಾರ್ಯಾಲಯವು ಕನಿಷ್ಠ ಐದು ಸಚಿವಾಲಯಗಳಿಗೆ ಸೂಚನೆ ನೀಡಿದ್ದು, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೇರಿದಂತೆ ಹಲವು ಇಲಾಖೆಗಳು ಈ ಪಟ್ಟಿಯಲ್ಲಿವೆ ಎಂದು ತಿಳಿದುಬಂದಿದೆ.
ನವೆಂಬರ್ 14ರಂದು ಹೊರಡಿಸಲಾದ ಪ್ರಧಾನಿ ಕಾರ್ಯಾಲಯದ ಪತ್ರದಲ್ಲಿ, ಅಧಿವೇಶನದಲ್ಲಿ ಪ್ರಸ್ತಾಪವಾಗುವ ಸಾಧ್ಯತೆಯಿರುವ ಪ್ರಮುಖ ವಿಷಯಗಳ ಕುರಿತು ಎರಡರಿಂದ ಮೂರು ಪುಟಗಳ ಸಂಕ್ಷಿಪ್ತ ಟಿಪ್ಪಣಿಗಳನ್ನು ನವೆಂಬರ್ 16ರೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಸಚಿವಾಲಯಗಳು ಗುರುತಿಸುವ ವಿಷಯಗಳ ಸಮಗ್ರ ಚಿತ್ರಣಕ್ಕೆ ಆದ್ಯತೆ ನೀಡಬೇಕು. ಸಾಮಾನ್ಯ ವಿವರಣೆಗಳು, ಯೋಜನೆಗಳ ಕಾರ್ಯನಿರ್ವಹಣೆಯ ವಿವರಗಳು ಅಥವಾ ವೈಯಕ್ತಿಕ ಯೋಜನೆಗಳ ಮಾಹಿತಿಯನ್ನು ನೀಡುವುದನ್ನು ತಪ್ಪಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ನಾಗರಿಕ ವಿಮಾನಯಾನ, ರೈಲ್ವೆ, ಬಂದರು ಮತ್ತು ಜಲಮಾರ್ಗಗಳ ಸಚಿವಾಲಯಗಳಿಂದಲೂ ಮಾಹಿತಿ ಕೋರಲಾಗಿತ್ತು. ಗುರುತಿಸಲಾದ ವಿಷಯಗಳ ಕುರಿತು ಸಮಗ್ರ ದೃಷ್ಟಿಕೋನದೊಂದಿಗೆ ವರದಿ ಸಲ್ಲಿಸುವಂತೆ ಎಲ್ಲ ಸಚಿವಾಲಯಗಳಿಗೆ ಸೂಚನೆ ನೀಡಲಾಗಿದೆ.
ಆದರೆ, ಸಚಿವಾಲಯಗಳು ಈ ಮಾಹಿತಿಯನ್ನು ಅಂತಿಮಗೊಳಿಸಿ ತಮ್ಮ ಮೌಲ್ಯಮಾಪನ ವರದಿಗಳನ್ನು ಪ್ರಧಾನಿ ಕಾರ್ಯಾಲಯಕ್ಕೆ ಸಲ್ಲಿಸಿವೆಯೇ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.