ನವದೆಹಲಿ: ಕಾರ್ಪೊರೇಟ್ ತೆರಿಗೆ ಕಡಿತ ಮತ್ತು ಸರ್ಕಾರದ ಇತರ ಸುಧಾರಣೆಗಳ ಬಳಿಕ ಉದ್ಯೋಗಾವಕಾಶ ಹಾಗೂ ಉದ್ಯೋಗಿಗಳ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಭಾರತದ ಉದ್ಯಮ ವಲಯ (India Inc) ಸಾಕಷ್ಟು ಕೊಡುಗೆ ನೀಡಿದೆಯೇ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಪ್ರಶ್ನಿಸಿದರು. ಸರ್ಕಾರದ ನೀತಿಗಳಿಂದ ದೊರೆತ ಪ್ರಯೋಜನಗಳು ದೇಶದ ಒಟ್ಟಾರೆ ಆರ್ಥಿಕ ಪ್ರಗತಿಗೆ ಹೇಗೆ ನೆರವಾಗಿವೆ ಎಂಬುದನ್ನು ಉದ್ಯಮ ಸಂಸ್ಥೆಗಳು ಮೌಲ್ಯಮಾಪನ ಮಾಡಬೇಕು ಎಂದು ಕರೆ ನೀಡಿದರು.
ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ (ಫಿಕ್ಕಿ) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಉದ್ಯೋಗ ಸೃಷ್ಟಿ, ಹೂಡಿಕೆ ಮತ್ತು ಭಾರತದ ದೀರ್ಘಕಾಲೀನ ಆರ್ಥಿಕ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ಪರಿಶೀಲಿಸುವಂತೆ ಕಂಪನಿಗಳಿಗೆ ಸೂಚಿಸಿದರು.
ಸರ್ಕಾರದ ತೆರಿಗೆ ವಿನಾಯಿತಿ ಕ್ರಮಗಳನ್ನು ಪ್ರಸ್ತಾಪಿಸಿದ ಅವರು, ವಾರ್ಷಿಕ 12 ಲಕ್ಷದವರೆಗಿನ ಆದಾಯಕ್ಕೆ ಆದಾಯ ತೆರಿಗೆ ಇಲ್ಲ. ಜನರ ಖರೀದಿ ಸಾಮರ್ಥ್ಯ ಹೆಚ್ಚಿದ್ದು, ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮತ್ತು ಮರುಪಾವತಿ ಪ್ರಕ್ರಿಯೆಗಳನ್ನು ಸರಳಗೊಳಿಸಲಾಗಿದೆ. ಇದರಿಂದ ತೆರಿಗೆದಾರರ ಹಣ ಅನಗತ್ಯವಾಗಿ ಬಾಕಿ ಉಳಿಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಪ್ರಸ್ತುತ ಸರ್ಕಾರದ ಅವಧಿಯಲ್ಲಿ, 2019ರ ಸೆಪ್ಟೆಂಬರ್ನಲ್ಲಿ ಅಸ್ತಿತ್ವದಲ್ಲಿರುವ ದೇಶೀಯ ಕಂಪನಿಗಳ ಮೂಲ ಕಾರ್ಪೊರೇಟ್ ತೆರಿಗೆ ದರವನ್ನು ಶೇ.30ರಿಂದ ಶೇ.22ಕ್ಕೆ ಇಳಿಸಲಾಗಿತ್ತು. ಹೆಚ್ಚುವರಿ ಶುಲ್ಕ ಮತ್ತು ಸೆಸ್ ಸೇರಿ ಇದರ ಪರಿಣಾಮಕಾರಿ ತೆರಿಗೆ ದರ ಶೇ.25.17ರಷ್ಟಿದೆ. ಅರ್ಹ ಹೊಸ ದೇಶೀಯ ಉತ್ಪಾದನಾ ಕಂಪನಿಗಳಿಗೆ ಶೇ.15ರ ಮೂಲ ತೆರಿಗೆ ದರವನ್ನೂ ಪರಿಚಯಿಸಲಾಗಿತ್ತು.
ದೇಶದ ಬೆಳವಣಿಗೆಯನ್ನು ಮತ್ತಷ್ಟು ವೇಗಗೊಳಿಸಲು ಅಗತ್ಯವಿರುವ ಸುಧಾರಣೆಗಳ ಕುರಿತು ಸಲಹೆ ನೀಡುವಂತೆಯೂ ಪ್ರಧಾನಿ ಮೋದಿ ಉದ್ಯಮ ವಲಯಕ್ಕೆ ಮನವಿ ಮಾಡಿದರು. ಭಾರತವನ್ನು ಸ್ವಾವಲಂಬಿಯನ್ನಾಗಿಸುವ ನಿಟ್ಟಿನಲ್ಲಿ ಗಮನಹರಿಸುವಂತೆ ಹಾಗೂ ಕೃಷಿ ಮತ್ತು ಅದರ ಸಂಬಂಧಿತ ವಲಯಗಳಲ್ಲಿ ಹೆಚ್ಚಿನ ಹೂಡಿಕೆ ಮಾಡುವಂತೆ ಉದ್ಯಮ ಸಂಸ್ಥೆಗಳಿಗೆ ಕರೆ ನೀಡಿದರು.
ಯಾವುದೇ ಹಿಂಜರಿಕೆ ಅಥವಾ ಮುಚ್ಚುಮರೆಯಿಲ್ಲದೆ, ಇನ್ನೂ ಯಾವ ಕ್ಷೇತ್ರಗಳಲ್ಲಿ ಸುಧಾರಣೆ ಅಗತ್ಯವಿದೆ ಎಂಬುದನ್ನು ಮುಕ್ತವಾಗಿ ನನಗೆ ಪತ್ರ ಬರೆದು ತಿಳಿಸಿ ಎಂದು ಪ್ರಧಾನಿ ಹೇಳಿದರು ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಮುಂದಿನ ಎರಡು ದಶಕಗಳಲ್ಲಿ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳುವಾಗ ‘ಇಂಡಿಯಾ ಫಸ್ಟ್’ (ಭಾರತಕ್ಕೆ ಮೊದಲ ಆದ್ಯತೆ) ಧೋರಣೆ ಅನುಸರಿಸುವಂತೆ ಕಂಪನಿಗಳಿಗೆ ಕರೆ ನೀಡಿದರು. ಇದರಿಂದ ದೇಶ ಸ್ವಾವಲಂಬಿಯಾಗುವುದರ ಜೊತೆಗೆ ಉದ್ಯಮಗಳಿಗೂ ಹೊಸ ಬೆಳವಣಿಗೆಯ ಅವಕಾಶಗಳು ತೆರೆದುಕೊಳ್ಳಲಿವೆ ಎಂದರು.
ಭಾರತದ ಪ್ರಗತಿಯ ವೇಗ ಅತ್ಯಂತ ಹೆಚ್ಚಾಗಿದೆ. ಅದೇ ರೀತಿ ಜನರು ಬಡತನದಿಂದ ಹೊರಬರುತ್ತಿರುವ ವೇಗವೂ ಹೆಚ್ಚುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇತ್ತೀಚಿನ ವಿಶ್ವಬ್ಯಾಂಕ್ ವರದಿಯನ್ನು ಉಲ್ಲೇಖಿಸಿದ ಅವರು, ಕೇವಲ 12ರಿಂದ 13 ವರ್ಷಗಳ ಅವಧಿಯಲ್ಲಿ 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ತಿಳಿಸಿದರು.
ರೈತರು, ಸಣ್ಣ ಉದ್ಯಮಿಗಳು, ಕೈಗಾರಿಕೆಗಳು, ಸಂಪತ್ತು ಸೃಷ್ಟಿಸುವವರು ಮತ್ತು ತೆರಿಗೆದಾರರನ್ನು ಗೌರವಿಸುವ ದೇಶ ಮಾತ್ರ ಪ್ರಗತಿ ಸಾಧಿಸುತ್ತದೆ. ಪ್ರತಿದಿನವೂ ಟೀಕೆ ಹಾಗೂ ನಿಂದನೆ ಮಾಡುವುದರಿಂದ ದೇಶದ ಪ್ರಗತಿ ಸಾಧ್ಯವಿಲ್ಲ ಎಂದು ಪ್ರಧಾನಿ ಒತ್ತಿಹೇಳಿದರು.