ಮುಂಬೈ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟಿರುವುದು ರಾಜಕೀಯ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರು ಈ ನಿರ್ಧಾರವನ್ನು ಪ್ರಶ್ನಿಸಿದ್ದು, ಇದರಲ್ಲಿ ತಾರತಮ್ಯ ನಡೆದಿದೆ ಎಂದು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಸಂಸದರ ಹೇಳಿಕೆಯನ್ನು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದೆ. 'ಎಎನ್‌ಐ' (ANI) ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮಸೂದ್, ಈ ಹಿಂದೆ ಉತ್ತಮ ಪ್ರದರ್ಶನ ನೀಡಿದ್ದರೂ ಸಹ, ಹೆಸರಿನ ಕಾರಣದಿಂದಾಗಿ ಈ ವೇಗದ ಬೌಲರ್‌ಗೆ ಪ್ಲೆಯಿಂಗ್ X1 ಬಳಗದಲ್ಲಿ ಸ್ಥಾನ ನೀಡಿಲ್ಲ ಎಂದು ಆರೋಪಿಸಿದರು.
ಸಿರಾಜ್ ಉತ್ತಮ ಪ್ರದರ್ಶನ ನೀಡಿದ್ದರೂ ತಂಡದಲ್ಲಿ ಸ್ಥಾನ ನೀಡಿಲ್ಲ ಎಂದು ಹೇಳಲಾಗುತ್ತಿದೆ. ಅವರ ಹೆಸರು 'ಸಿರಾಜ್', ಅದಕ್ಕಾಗಿಯೇ ಅವರಿಗೆ ಅವಕಾಶ ಸಿಕ್ಕಿಲ್ಲ. ಉತ್ತಮ ಪ್ರದರ್ಶನ ನೀಡಿದ್ದರೂ ಅವರನ್ನು ಆಯ್ಕೆ ಮಾಡದಿರುವುದು, ಇಲ್ಲಿ ತಾರತಮ್ಯ ನಡೆದಿರುವುದನ್ನು ಸ್ಪಷ್ಟಪಡಿಸುತ್ತದೆ ಎಂದು ಸಂಸದ ಆರೋಪಿಸಿದ್ದಾರೆ. ಸಂಸದರ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ಕ್ರಿಕೆಟ್ ತಂಡದ ಆಯ್ಕೆಯಲ್ಲೂ ಕಾಂಗ್ರೆಸ್ "ವೋಟ್ ಬ್ಯಾಂಕ್ ರಾಜಕೀಯ" ಮಾಡುತ್ತಿದೆ ಎಂದು ದೂರಿದ್ದಾರೆ.
ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು! ಈಗ ಕ್ರಿಕೆಟ್ ತಂಡದ ಆಯ್ಕೆಯಲ್ಲೂ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದೆ! 'ಸಿರಾಜ್ ಮುಸ್ಲಿಂ ಆಗಿದ್ದರಿಂದ ಅವರನ್ನು ಕೈಬಿಡಲಾಗಿದೆ' ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ ಜಡೇಜಾ ಅವರನ್ನು ಕೂಡ ಕೈಬಿಡಲಾಗಿತ್ತು! ಪ್ರತಿಯೊಬ್ಬ ಕ್ರಿಕೆಟಿಗರೂ ಭಾರತವನ್ನು ಪ್ರತಿನಿಧಿಸುವ ಜೆರ್ಸಿಯನ್ನೇ ಧರಿಸುತ್ತಾರೆ! ವೋಟ್ ಬ್ಯಾಂಕ್ ಮತ್ತು ಕೋಮು ರಾಜಕೀಯಕ್ಕಾಗಿ ಭಾರತೀಯ ಕ್ರಿಕೆಟ್ ತಂಡವನ್ನು ವಿಭಜಿಸುವುದನ್ನು ನಿಲ್ಲಿಸಿ!" ಎಂದು ಭಂಡಾರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಕ್ರಿಕೆಟ್ ದಿಗ್ಗಜರಾದ ಸುನಿಲ್ ಗವಾಸ್ಕರ್ ಮತ್ತು ರವಿ ಶಾಸ್ತ್ರಿ ಕೂಡ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಆಡುವ ಬಳಗದಿಂದ ಸಿರಾಜ್ ಅವರನ್ನು ಕೈಬಿಟ್ಟಿದ್ದನ್ನು ಪ್ರಶ್ನಿಸಿದ್ದಾರೆ. ತಂಡದ ಆಡಳಿತ ಮಂಡಳಿಯು ಸಿರಾಜ್ ಅವರ ಅನುಭವವನ್ನು ಪರಿಗಣಿಸಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಭಾರತ ತಂಡವು ಜಸ್ಪ್ರೀತ್ ಬುಮ್ರಾ ನೇತೃತ್ವದಲ್ಲಿ ನಾಲ್ವರು ವೇಗದ ಬೌಲರ್‌ಗಳೊಂದಿಗೆ ಕಣಕ್ಕಿಳಿದಿದೆ. ಇವರಲ್ಲದೆ ಪ್ರಸಿದ್ಧ ಕೃಷ್ಣ, ಆಕಾಶ್ ದೀಪ್ ಮತ್ತು ಅಂಶುಲ್ ಕಂಬೋಜ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಸಿರಾಜ್ ಅವರನ್ನು ಆಯ್ಕೆ ಮಾಡದಿರುವುದನ್ನು "ಅರ್ಥಮಾಡಿಕೊಳ್ಳಲು ಕಷ್ಟಕರವಾದ ನಿರ್ಧಾರ" ಎಂದು ಗವಾಸ್ಕರ್ ಬಣ್ಣಿಸಿದರೆ, ಸಿರಾಜ್ ಅವರ ಅನುಭವ ಮತ್ತು ಕಠಿಣ ಪರಿಶ್ರಮವನ್ನು ಗಮನದಲ್ಲಿಟ್ಟುಕೊಂಡು ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಬೇಕಿತ್ತು ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಆದಾಗ್ಯೂ, ನಾಯಕ ಶುಭಮನ್ ಗಿಲ್ ಮತ್ತು ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ , ಈ ಟೆಸ್ಟ್ ಪಂದ್ಯಕ್ಕಾಗಿ ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.