ನವದೆಹಲಿ: ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ದೆಹಲಿಗೆ ಬಂದು, ಮಹಿಳಾ ಇನ್‌ಫ್ಲುಯೆನ್ಸರ್(ಸಾಮಾಜಿಕ ಜಾಲತಾಣದ ಪ್ರಭಾವಿ) ಒಬ್ಬರ ಮನೆಗೆ ನುಗ್ಗಿ ತನ್ನನ್ನೇ ಮದುವೆಯಾಗುವಂತೆ ಪಟ್ಟು ಹಿಡಿದಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿಯ ಕುಟುಂಬದವರು ಅವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪರಿಣಾಮವಾಗಿ, ಒಂದು ವಾರದ ನಂತರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್‌ಸ್ಟಾಗ್ರಾಮ್‌ನಲ್ಲಿ 6 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದ ಯುವತಿಯ ತಂದೆ ಮತ್ತು ನೆರೆಹೊರೆಯ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನ ಪ್ರತಿಯೊಂದು 'ರೀಲ್ಸ್'ಗಳ ಮೂಲಕ ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತಿದ್ದ ಇನ್‌ಫ್ಲುಯೆನ್ಸರ್ ನೇಹಾ ಬಿಷ್ಟ್ ಅವರು, ಇತ್ತೀಚೆಗೆ ತಮ್ಮ ನಿಶ್ಚಿತಾರ್ಥದ ವಿಡಿಯೋಗಳು ಹಾಗೂ ಮುಂಬರುವ ಮದುವೆಗೆ ಸಂಬಂಧಿಸಿದ ವಿಷಯಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದರು.
ಆದರೆ ಉತ್ತರ ಪ್ರದೇಶದ ಗಾಜಿಪುರದ ನಿವಾಸಿಯಾಗಿದ್ದು, ಚೆನ್ನೈನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಭಿನವ್ ಎಂಬ ಅಭಿಮಾನಿ ನವೆಂಬರ್ 7 ರಂದು ಪೂರ್ವ ದೆಹಲಿಯ ಮಧು ವಿಹಾರ್‌ನಲ್ಲಿರುವ ನೇಹಾ ಬಿಷ್ಟ್ ಅವರ ಮನೆಗೆ ಅವರು ಮನೆಯಲ್ಲಿದ್ದಾಗಲೇ ಬಲವಂತವಾಗಿ ನುಗ್ಗಿದ್ದಾನೆ. ಅಲ್ಲದೆ ತನ್ನನ್ನು ಮದುವೆಯಾಗಬೇಕೆಂದು ಆಕೆಗೆ ಒತ್ತಾಯಿಸಿದ್ದಾನೆ. ಆದರೆ ನೇಹಾಗೆ ಈಗಾಗಲೇ ಮದುವೆ ಫಿಕ್ಸ್ ಆಗಿದ್ದರೂ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಕ್ಕೆ ಆಕ್ರೋಶಗೊಂಡ ಯುವತಿ ತಂದೆ ಹಾಗೂ ನೆರೆಯ ಮತ್ತೊಬ್ಬ ವ್ಯಕ್ತಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನೇಹಾ ಕಟ್ಟಾ ಅಭಿಮಾನಿಯಾಗಿದ್ದ ಅಭಿನವ್, ಅವರ ರೀಲ್ಸ್‌ಗಳನ್ನು ನೋಡುತ್ತಾ ಆಕೆಯ ಮೇಲೆ ಪ್ರೀತಿ ಬೆಳೆಸಿಕೊಂಡಿದ್ದ. ಅಲ್ಲದೆ ಕೆಲವು ತಿಂಗಳ ಹಿಂದೆ ಆಕೆಯ ಮನೆಗೂ ಭೇಟಿ ನೀಡಿದ್ದ ಎನ್ನಲಾಗಿದೆ.
ಈ ಸಂಬಂಧ ಮರುದಿನ ದಾಖಲಾದ ಎಫ್‌ಐಆರ್(FIR) ಪ್ರಕಾರ, ಯುವಕ ಮದ್ಯದ ಅಮಲಿನಲ್ಲಿದ್ದ ಎಂದು ಆರೋಪಿಸಲಾಗಿದೆ.
ಪೊಲೀಸರು ಸ್ಥಳಕ್ಕೆ ಬಂದಾಗ, ಆ ವ್ಯಕ್ತಿಯ ಬೆನ್ನು ಮತ್ತು ಬಲ ಪಾದದ ಮೇಲೆ ತೀವ್ರವಾದ ಗಾಯಗಳಿರುವುದು ಕಂಡುಬಂದಿದ್ದು, ಆತನನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನವೆಂಬರ್ 15 ರಂದು ಆತ ಮೃತಪಟ್ಟಿದ್ದಾನೆ.
ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನೇಹಾ ತಂದೆ ವೀರೇಂದ್ರ ಬಿಷ್ಟ ಮತ್ತು ನೆರೆಹೊರೆಯವರನ್ನು ಬಂಧಿಸಿದ್ದಾರೆ. ಹಲ್ಲೆಯಲ್ಲಿ ಭಾಗಿಯಾದ ಇತರರಿಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.