ನವದೆಹಲಿ: ಆ್ಯಪ್ ಆಧಾರಿತ ಸಾರಿಗೆ ಸೇವೆಗಳಾದ ಓಲಾ, ಊಬರ್ ಮತ್ತು ರ‍್ಯಾಪಿಡೋ ವಿರುದ್ಧ ಭಾರತೀಯ ಮಜ್ದೂರ್ ಸಂಘಕ್ಕೆ (BMS) ಸಂಯೋಜಿತವಾಗಿರುವ ಸಾರಿಗೆ ಒಕ್ಕೂಟಗಳು ನಡೆಸಿದ ಮುಷ್ಕರದಿಂದಾಗಿ ರಸ್ತೆಯಲ್ಲಿ ವಾಹನಗಳ ಕೊರತೆ ಉಂಟಾಗಿದ್ದು, ಪ್ರಯಾಣಿಕರು ದುಬಾರಿ ದರ ತೆರುವಂತಾಗಿದೆ. ಅದರಲ್ಲೂ, ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್‌ನಿಂದ ನೋಯ್ಡಾದ ಫಿಲ್ಮ್ ಸಿಟಿವರೆಗಿನ ಸುಮಾರು 13 ಕಿ.ಮೀ. ಪ್ರಯಾಣಕ್ಕೆ ಸಾಮಾನ್ಯ ದಿನಗಳಲ್ಲಿ ₹300 ದರವಿರುತ್ತಿತ್ತು. ಆದರೆ ಮುಷ್ಕರದ ದಿನ ಬೆಳಿಗ್ಗೆ 9 ಗಂಟೆಗೆ ₹400 ದಾಟಿ, 10 ಗಂಟೆಯ ವೇಳೆಗೆ ₹500 ದಾಟಿತು ಮತ್ತು ಕೆಲವು ಪ್ರಯಾಣಿಕರು ಇದೇ ಮಾರ್ಗಕ್ಕೆ ₹803 ಪಾವತಿಸಬೇಕಾಯಿತು. ಆ ಕುರಿತ ವರದಿ ಇಲ್ಲಿದೆ:
ಓಲಾ, ಉಬರ್, ರಾಪಿಡೋ ನಿಷೇಧಿಸಲು ಯಾಕಾಗಲ್ಲ?
ದೇಶದ ಭದ್ರತೆ ಮತ್ತು ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ಟಿಕ್‌ಟಾಕ್ ಸೇರಿದಂತೆ ನೂರಾರು ಚೀನೀ ಆ್ಯಪ್‌ಗಳನ್ನು ಒಂದೇ ದಿನದಲ್ಲಿ ನಿಷೇಧಿಸಿತು. ಅದೇ ರೀತಿ, ಓಲಾ, ಊಬರ್ ಮತ್ತು ರ‍್ಯಾಪಿಡೋ ಕಂಪನಿಗಳು ಚಾಲಕರಿಂದ ಶೇ. 20 ರಿಂದ 30ರಷ್ಟು ಕಮಿಷನ್ ವಸೂಲಿ ಮಾಡುತ್ತಿವೆ, ಪ್ರಯಾಣಿಕರಿಂದ ಮನಬಂದಂತೆ ದರ ಪಡೆಯುತ್ತಿವೆ ಮತ್ತು ವೈಟ್ ಬೋರ್ಡ್ (ಖಾಸಗಿ) ಬೈಕ್‌ಗಳನ್ನು ಅಕ್ರಮವಾಗಿ ಓಡಿಸಿ ಸಾಂಪ್ರದಾಯಿಕ ಚಾಲಕರ ಹೊಟ್ಟೆ ಮೇಲೆ ಹೊಡೆಯುತ್ತಿವೆ. ಹೀಗಾಗಿ ಇವುಗಳನ್ನು ಏಕೆ ನಿಷೇಧಿಸಬಾರದು ಎಂದು ಪ್ರತಿಭಟನೆ ವೇಳೆ ಚಾಲಕರು ಪ್ರಶ್ನಿಸಿದರು.
ಚಾಲಕರ ಪ್ರಮುಖ ಬೇಡಿಕೆಗಳೇನು?
ಅಗ್ರಿಗೇಟರ್ ಆ್ಯಪ್‌ಗಳ ನಿಯಂತ್ರಣ ಅಥವಾ ನಿಷೇಧ: ಓಲಾ, ಊಬರ್ ಮತ್ತು ರ‍್ಯಾಪಿಡೋ ಕಂಪನಿಗಳು ಮನಬಂದಂತೆ ಕಮಿಷನ್ ಪಡೆಯುತ್ತಿವೆ ಮತ್ತು ದರ ನಿಗದಿಪಡಿಸುತ್ತಿವೆ; ಇವುಗಳ ಮೇಲೆ ಕಠಿಣ ನಿಯಂತ್ರಣ ಹೇರಬೇಕು ಅಥವಾ ನಿಷೇಧಿಸಬೇಕು ಎಂದು ಸಾಂಪ್ರದಾಯಿಕ ಆಟೋ ಮತ್ತು ಟ್ಯಾಕ್ಸಿ ಚಾಲಕರ ಒಕ್ಕೂಟಗಳು ಆಗ್ರಹಿಸಿವೆ.
ಖಾಸಗಿ ಬೈಕ್ ಟ್ಯಾಕ್ಸಿಗಳ ನಿಷೇಧ: ವೈಟ್ ಬೋರ್ಡ್ (ಖಾಸಗಿ) ಬೈಕ್‌ಗಳನ್ನು ವಾಣಿಜ್ಯ ಟ್ಯಾಕ್ಸಿಗಳಾಗಿ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಲಾಗಿದೆ.
ವೈಜ್ಞಾನಿಕ ದರ ನಿಗದಿ: ಹೆಚ್ಚುತ್ತಿರುವ ಇಂಧನ ಬೆಲೆ ಮತ್ತು ತೆರಿಗೆಗೆ ಅನುಗುಣವಾಗಿ ಸರ್ಕಾರವೇ ಆಟೋ ಮತ್ತು ಟ್ಯಾಕ್ಸಿಗಳಿಗೆ ಕನಿಷ್ಠ ಮೂಲ ದರವನ್ನು ಪರಿಷ್ಕರಿಸಬೇಕು ಎಂಬುದು ಚಾಲಕರ ಪ್ರಮುಖ ಬೇಡಿಕೆಯಾಗಿದೆ.