ಜೈಪುರ: ರಾಜಸ್ಥಾನದ ವಿಶ್ವಪ್ರಸಿದ್ಧ ಪುಷ್ಕರ್ ಮೇಳದಲ್ಲಿ 'ಕಾಲಾ ಬಾದಲ್' ಎಂಬ ದೈತ್ಯ ಎಮ್ಮೆ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಬರೋಬ್ಬರಿ 760 ಕೆ.ಜಿ ತೂಕವಿರುವ ಇದರ ಮೌಲ್ಯ ಬರೋಬ್ಬರಿ ಒಂದು ಕೋಟಿ ರೂಪಾಯಿ ಎನ್ನಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಎಮ್ಮೆಯ ವಿಡಿಯೋಗಳು ವೈರಲ್ ಆಗುತ್ತಿದ್ದು, ಜನ ಸಾಗರವನ್ನು ತನ್ನತ್ತ ಸೆಳೆಯುತ್ತಿದೆ. ಕೇವಲ 20 ತಿಂಗಳ ವಯಸ್ಸಿನಲ್ಲೇ ಸುಮಾರು 760 ಕಿಲೋಗ್ರಾಂ ತೂಕ ಹೊಂದಿರುವ ಈ ಕೋಣದ ಬೆಲೆಯನ್ನು ಅದರ ಮಾಲೀಕ ಶೈಲೇಂದ್ರ ಚೌಧರಿ ಅವರು ಸುಮಾರು ಒಂದು ಕೋಟಿ ರೂಪಾಯಿ ಎಂದು ಅಂದಾಜಿಸಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಇಷ್ಟೊಂದು ತೂಕ ಮತ್ತು ಕೋಟ್ಯಂತರ ರೂಪಾಯಿ ಬೆಲೆ ಹೊಂದಿದ್ದರೂ, ಮಾಲೀಕರು ಇದನ್ನು ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಏಕೆಂದರೆ, ಮುರ್ರಾ ತಳಿಯ ವಿಶಿಷ್ಟತೆ ಮತ್ತು ಅದರಿಂದ ಪ್ರತಿ ತಿಂಗಳು ಹರಿದುಬರುವ ಲಕ್ಷಾಂತರ ರೂಪಾಯಿ ಆದಾಯ.
ಮುರ್ರಾ ತಳಿಯ ಎಮ್ಮೆಗಳು ಅತಿ ಹೆಚ್ಚು ಹಾಲು ನೀಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿವೆ. ಇದೇ ಕಾರಣಕ್ಕೆ ಮುರ್ರಾ ತಳಿಯ ಕೋಣಗಳ ವೀರ್ಯಕ್ಕೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಕೋಣದ ವೀರ್ಯವನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ಪರೀಕ್ಷಿಸಿದ ನಂತರ, ಸಣ್ಣ ನಳಿಕೆಗಳಲ್ಲಿ ತುಂಬಿ ಅತಿ ಕಡಿಮೆ ತಾಪಮಾನದಲ್ಲಿ ಶೇಖರಿಸಿಡಲಾಗುತ್ತದೆ. ಬಳಿಕ ದೂರದ ಊರುಗಳಲ್ಲಿರುವ ಎಮ್ಮೆಗಳಿಗೆ ಕೃತಕ ಗರ್ಭಧಾರಣೆ ಮಾಡಲು ಇದನ್ನು ಬಳಸಲಾಗುತ್ತದೆ.
ಇದರಿಂದ ಕೋಣಗಳನ್ನು ಬೇರೆಡೆಗೆ ಸಾಗಿಸುವ ಶ್ರಮವಿಲ್ಲದೆಯೇ ತಳಿ ಅಭಿವೃದ್ಧಿಪಡಿಸಲು ಸುಲಭವಾಗುತ್ತದೆ. ವೀರ್ಯ ಮಾರಾಟದಿಂದಲೇ ಈ ಕೋಣಗಳ ಮಾಲೀಕರಿಗೆ ಪ್ರತಿ ತಿಂಗಳು ಭರ್ಜರಿ ಆದಾಯ ಹರಿದುಬರುತ್ತದೆ.
2023ರಲ್ಲಿ ಮುರ್ರಾ 'ಅನ್ಮೋಲ್' ಕೋಣದ ಮಾಲೀಕರು ತಿಳಿಸಿದಂತೆ, ಅದರ ಒಂದು ಡೋಸ್ ವೀರ್ಯವು ಸುಮಾರು 250 ರೂಪಾಯಿಗೆ ಮಾರಾಟವಾಗುತ್ತಿದ್ದು, ತಿಂಗಳಿಗೆ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತಿತ್ತು. ತದನಂತರ 2025ರಲ್ಲಿ ಮತ್ತೊಬ್ಬ ಕೋಣದ ಮಾಲೀಕರು ಒಂದು ಟ್ಯೂಬ್ ಅನ್ನು 400 ರೂಪಾಯಿಗೆ ಮಾರಾಟ ಮಾಡಿ ಪ್ರತಿ ತಿಂಗಳು 70,000 ದಿಂದ 80,000 ರೂಪಾಯಿ ಆದಾಯ ಗಳಿಸುತ್ತಿರುವುದಾಗಿ ಹೇಳಿಕೊಂಡಿದ್ದರು.
ಆದಾಯವು ಕೋಣದ ತಳಿ, ವೀರ್ಯದ ಗುಣಮಟ್ಟ ಮತ್ತು ಮಾರುಕಟ್ಟೆಯ ಬೇಡಿಕೆಯನ್ನು ಅವಲಂಬಿಸಿರುವುದರಿಂದ, ಪುಷ್ಕರ್ ಮೇಳದಲ್ಲಿ ಕೋಟ್ಯಂತರ ರೂಪಾಯಿ ಆಫರ್ ಬಂದರೂ ಮಾಲೀಕರು ಇವುಗಳನ್ನು ಮಾರಾಟ ಮಾಡದೆ ನಿರಂತರ ಆದಾಯದ ಮೂಲವಾಗಿ ಉಳಿಸಿಕೊಂಡಿದ್ದಾರೆ.