ಕೋಝಿಕ್ಕೋಡ್ (ಕೇರಳಂ): ಸುಮಾರು ₹100 ಕೋಟಿ ಮೊತ್ತದ ಶಂಕಿತ ಹವಾಲಾ ವಹಿವಾಟು ಮತ್ತು ವಿದೇಶಿ ವಿನಿಮಯ ಉಲ್ಲಂಘನೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಶುಕ್ರವಾರ ರಾಜ್ಯದಾದ್ಯಂತ ಸುಮಾರು 12 ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಶೋಧ ನಡೆಸಿದ್ದರು. ಅದರಂತೆ, ಕೇರಳಂನ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಅದೇ ಹೆಸರಿನ ಅಮಾಯಕ ಮೀನುಗಾರನೊಬ್ಬನ ಮನೆಗೆ ನುಗ್ಗಿ ಸುಮಾರು 4 ಗಂಟೆಗಳ ಕಾಲ ಶೋಧ ನಡೆಸಿರುವ ಘಟನೆ ನಡೆದಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಮತ್ತು 100 ಕೋಟಿ ರೂ.ಗಳ ಶಂಕಿತ ಹವಾಲಾ ವಹಿವಾಟಿಗೆ ಸಂಬಂಧಿಸಿದಂತೆ ಕೇರಳದ ವಿವಿಧ ಜಿಲ್ಲೆಗಳ ಸುಮಾರು ಹನ್ನೆರಡು ಕಡೆಗಳಲ್ಲಿ ಇಡಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದರು. ಅದರಂತೆ, ಶುಕ್ರವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಕೋಝಿಕ್ಕೋಡ್ನ ನೌಶಾದ್ ಎಂಬುವವರ ಮನೆಗೆ ಇಡಿ ಅಧಿಕಾರಿಗಳ ತಂಡ ಆಗಮಿಸಿತ್ತು. ಅಧಿಕಾರಿಗಳು 'ಉಸ್ಮಾನ್ ಅವರ ಪುತ್ರ ನೌಶಾದ್' ಎಂಬ ಆರೋಪಿಯನ್ನು ಹುಡುಕುತ್ತಿದ್ದರು. ಆದರೆ, ಅವರು ದಾಳಿ ನಡೆಸಿದ ಮನೆಯಲ್ಲಿದ್ದ ನೌಶಾದ್ ಅವರ ತಂದೆಯ ಹೆಸರು 'ಮೊಹಮ್ಮದ್' ಆಗಿತ್ತು. ಅದರಲ್ಲೂ, "ನಾವು ಹುಡುಕುತ್ತಿರುವ ವ್ಯಕ್ತಿ ಇವರಲ್ಲ, ತಂದೆಯ ಹೆಸರು ಬೇರೆಯಾಗಿದೆ" ಎಂದು ಕುಟುಂಬಸ್ಥರು ಆರಂಭದಲ್ಲೇ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ. ಆದರೂ ಅಧಿಕಾರಿಗಳು ಅದನ್ನು ಕಿವಿಗೆ ಹಾಕಿಕೊಳ್ಳದೆ ಸುಮಾರು 4 ಗಂಟೆಗಳ ಕಾಲ ಇಡೀ ಮನೆಯನ್ನು ಜಾಲಾಡಿದ್ದಾರೆ.
ಅಸಲಿ ಸತ್ಯ ಬಯಲಾಗಿದ್ದು ಹೇಗೆ?
4 ಗಂಟೆಗಳ ಸುದೀರ್ಘ ತಪಾಸಣೆಯ ನಂತರ ಮನೆಯಲ್ಲಿ ಯಾವುದೇ ದಾಖಲೆ ಅಥವಾ ಹಣ ಪತ್ತೆಯಾಗದಿದ್ದಾಗ, ಅಧಿಕಾರಿಗಳು ತಾವು ಹುಡುಕುತ್ತಿದ್ದ ಆರೋಪಿಯ ಭಾವಚಿತ್ರವನ್ನು ಕುಟುಂಬಸ್ಥರಿಗೆ ತೋರಿಸಿದ್ದಾರೆ. ಆ ಫೋಟೋದಲ್ಲಿದ್ದ ವ್ಯಕ್ತಿ ತಾವಲ್ಲ ಎಂಬುದು ಸ್ಪಷ್ಟವಾದ ಬಳಿಕ, ತಪ್ಪು ವಿಳಾಸಕ್ಕೆ ಬಂದಿರುವುದು ಅಧಿಕಾರಿಗಳ ಅರಿವಿಗೆ ಬಂದಿದೆ.
ಹಾಗಾದ್ರೆ, ಯಾರು ಈ ನೌಶಾದ್?
ಇಡಿ ದಾಳಿಗೊಳಗಾದ ನೌಶಾದ್ ಅವರು 9 ತಿಂಗಳ ಹಿಂದಷ್ಟೇ ಶಾರ್ಜಾದಲ್ಲಿನ ಕೆಲಸ ಬಿಟ್ಟು ಊರಿಗೆ ಮರಳಿದ್ದು, ಪ್ರಸ್ತುತ ಸ್ಥಳೀಯವಾಗಿ ಮೀನುಗಾರಿಕೆ ವೃತ್ತಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.
ಏತನ್ಮಧ್ಯೆ, ಸರಿಯಾಗಿ ವಿಳಾಸ ಮತ್ತು ಗುರುತು ಪರಿಶೀಲಿಸದೆ ಅಮಾಯಕ ಕುಟುಂಬಕ್ಕೆ ಮಾನಸಿಕ ಕಿರುಕುಳ ನೀಡಿದ ಇಡಿ ಅಧಿಕಾರಿಗಳ ವಿರುದ್ಧ ಸ್ಥಳೀಯ ವಾರ್ಡ್ ಸದಸ್ಯರು ಹಾಗೂ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆದರೆ, ಈ ಕುರಿತು ಇಡಿ ಅಧಿಕಾರಿಗಳಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.