ಚೆನ್ನೈ: ಸಾಮಾನ್ಯವಾಗಿ ವಾಯು ಮಾಲಿನ್ಯ ಎಂದಾಕ್ಷಣ ರಾಷ್ಟ್ರ ರಾಜಧಾನಿ ದೆಹಲಿಯ ಹೆಸರು ಮೊದಲು ಕೇಳಿಬರುತ್ತದೆ. ಆದರೆ, ಶನಿವಾರ (ನವೆಂಬರ್ 21) ಚೆನ್ನೈನ ಉತ್ತರದ ಹೊರವಲಯದಲ್ಲಿರುವ ಕೈಗಾರಿಕಾ ಪಟ್ಟಣ ಗುಮ್ಮಿಡಿಪೂಂಡಿ (Gummidipoondi) ದೆಹಲಿಯನ್ನೂ ಮೀರಿಸಿ ದೇಶದಲ್ಲೇ ಅತ್ಯಂತ ಕಲುಷಿತ ನಗರವಾಗಿ ಹೊರಹೊಮ್ಮಿದೆ.
ಇಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 342ಕ್ಕೆ ಏರಿಕೆಯಾಗಿದ್ದು, ದೆಹಲಿಯ 265ಕ್ಕಿಂತಲೂ ಅಧಿಕವಾಗಿದೆ. ಕಳೆದ ಮೂರು ದಿನಗಳಿಂದ ವಾಯು ಗುಣಮಟ್ಟ ನಿರಂತರವಾಗಿ ಹದಗೆಡುತ್ತಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ನಗರವಾರು ಅಂಕಿಅಂಶಗಳ ಪ್ರಕಾರ, ಗುಮ್ಮಿಡಿಪೂಂಡಿಯ ಎಕ್ಯೂಐ ನವೆಂಬರ್ 19ರಂದು 305ರಷ್ಟಿತ್ತು. ನವೆಂಬರ್ 20ರಂದು 321ಕ್ಕೆ ಏರಿಕೆಯಾಗಿದ್ದು, ನವೆಂಬರ್ 21ರಂದು 342 ತಲುಪಿದೆ.
ಮತ್ತೊಂದು ಪ್ರತ್ಯೇಕ ಡ್ಯಾಶ್‌ಬೋರ್ಡ್‌ನ ಮಾಹಿತಿಯಂತೆ ಶನಿವಾರ ಸಂಜೆ 5.05ರ ವೇಳೆಗೆ ಈ ಪ್ರಮಾಣ 346ಕ್ಕೆ ಏರಿಕೆಯಾಗಿತ್ತು. ಪಟ್ಟಣದ ವಾಯು ಗುಣಮಟ್ಟ ಅತ್ಯಂತ ಕಳಪೆ ವಿಭಾಗಕ್ಕೆ ಸೇರಿದೆ.
ಚೆನ್ನೈನಲ್ಲಿ ಎಕ್ಯೂಐ 224 ದಾಖಲಾಗಿದೆ. ಗುಮ್ಮಿಡಿಪೂಂಡಿಯಲ್ಲಿ ಹೆಚ್ಚಿನ ಸಂಖ್ಯೆಯ ಕೈಗಾರಿಕೆಗಳಿರುವುದರಿಂದ ಕಾರ್ಖಾನೆಗಳಿಂದ ಹೊರಸೂಸುವ ಹೊಗೆ, ಇಂಧನ ದಹನ, ಸಾರಿಗೆ ಮತ್ತು ಕಚ್ಚಾ ವಸ್ತುಗಳ ನಿರ್ವಹಣೆ ಮಾಲಿನ್ಯಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.
ರಸ್ತೆ ಧೂಳು, ನಿರ್ಮಾಣ ಚಟುವಟಿಕೆಗಳು ಮತ್ತು ಸ್ಥಳೀಯ ಮಾಲಿನ್ಯಕಾರಕಗಳೂ ಗಾಳಿಯಲ್ಲಿನ ಸೂಕ್ಷ್ಮ ಕಣಗಳ ಪ್ರಮಾಣ ಹೆಚ್ಚಿಸಲು ಕಾರಣವಾಗಿರಬಹುದು. ಆದರೆ ಪ್ರಸ್ತುತ ಮಾಲಿನ್ಯದ ಏರಿಕೆಗೆ ಯಾವ ಮೂಲ ಎಷ್ಟು ಕೊಡುಗೆ ನೀಡಿದೆ ಎಂಬುದನ್ನು ಖಚಿತಪಡಿಸಲು ಹೊರಸೂಸುವಿಕೆ ಮತ್ತು ಮಾಲಿನ್ಯದ ಮೂಲಗಳ ಕುರಿತ ಅಧ್ಯಯನ ಅಗತ್ಯ ಎಂದು ತಜ್ಞರು ತಿಳಿಸಿದ್ದಾರೆ.
ಗಾಳಿಯಲ್ಲಿ ಅತಿಸೂಕ್ಷ್ಮ ಕಣಗಳಾದ ಪಿಎಂ2.5 ಪ್ರಮುಖ ಮಾಲಿನ್ಯಕಾರಕವಾಗಿ ಗುರುತಿಸಲಾಗಿದೆ. ಈ ಸೂಕ್ಷ್ಮ ಕಣಗಳು ಶ್ವಾಸಕೋಶದ ಆಳದವರೆಗೂ ಪ್ರವೇಶಿಸಬಲ್ಲವು. ಇದರಿಂದ ಉಸಿರಾಟ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗುವ ಅಪಾಯವಿದೆ. ಎಕ್ಯೂಐ 301ರಿಂದ 400ರ ನಡುವೆ ಇದ್ದರೆ ಅದನ್ನು ಅತ್ಯಂತ ಕಳಪೆ ವಾಯು ಗುಣಮಟ್ಟ ಎಂದು ಪರಿಗಣಿಸಲಾಗುತ್ತದೆ. ಇಂತಹ ವಾತಾವರಣದಲ್ಲಿ ದೀರ್ಘಕಾಲ ಇರುವುದರಿಂದ ಉಸಿರಾಟದ ಸಮಸ್ಯೆಗಳು ಉಂಟಾಗಬಹುದು.
ಗಾಳಿಯ ದಿಕ್ಕು ಮತ್ತು ವಾತಾವರಣದ ಸ್ಥಿತಿಗತಿಗಳೂ ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗಿರಬಹುದು. ಗಾಳಿಯ ಚಲನೆಯಿಂದ ಮಾಲಿನ್ಯಕಾರಕಗಳು ಒಂದೆಡೆ ಸಂಗ್ರಹವಾಗಬಹುದು ಅಥವಾ ಬೇರೆ ಪ್ರದೇಶಗಳಿಂದ ಕಲುಷಿತ ಗಾಳಿ ಈ ಭಾಗಕ್ಕೆ ಹರಿದುಬರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಗಾಳಿಯ ನಿಖರವಾದ ದಿಕ್ಕನ್ನು ಅವಲಂಬಿಸಿ ಕೈಗಾರಿಕಾ ಮತ್ತು ನಗರ ಪ್ರದೇಶಗಳಿಂದ ಮಾಲಿನ್ಯಕಾರಕಗಳು ಬೇರೆಡೆಗೆ ಹರಡಬಹುದು. ಗಾಳಿಯ ವೇಗ ಕಡಿಮೆಯಿದ್ದರೆ ಮತ್ತು ವಾತಾವರಣದಲ್ಲಿ ಲಂಬವಾಗಿ ಗಾಳಿ ಮಿಶ್ರಣವಾಗುವ ಪ್ರಕ್ರಿಯೆ ಸೀಮಿತಗೊಂಡರೆ ಮಾಲಿನ್ಯಕಾರಕಗಳು ಚದುರಿಹೋಗದೆ ಒಂದೇ ಪ್ರದೇಶದಲ್ಲಿ ಸಂಗ್ರಹವಾಗುತ್ತವೆ ಎಂದು ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.