ಪ್ರಧಾನಿ ನರೇಂದ್ರ ಮೋದಿ ನಿನ್ನೆ ಶನಿವಾರ ಬಿಹಾರದ ವೈಶಾಲಿಯಲ್ಲಿ ಆರು ಪಥಗಳ ನಿತೀಶ್ ಸೇತುವೆಯನ್ನು ಉದ್ಘಾಟಿಸಿದ ಕೆಲವೇ ಗಂಟೆಗಳಲ್ಲಿ, ರಾಷ್ಟ್ರೀಯ ಜನತಾ ದಳ (RJD) ಕಾರ್ಯಕರ್ತರು ಸೇತುವೆಯ ಮೇಲೆ ಗದ್ದಲ ಅವಾಂತರ ಸೃಷ್ಟಿಸಿದ ಘಟನೆ ನಡೆಯಿತು. ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ ಪೋಸ್ಟರ್ಗಳು ಮತ್ತು ಬ್ಯಾನರ್ಗಳನ್ನು ಹರಿದು ಹಾಕಿದ ಅವರು, ಲಾಲು ಪ್ರಸಾದ್ ಯಾದವ್ ಹಾಗೂ ತೇಜಸ್ವಿ ಯಾದವ್ ಪರ ಘೋಷಣೆಗಳನ್ನು ಕೂಗಿದರು.
ಈ ಘಟನೆಯ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಸೇತುವೆಯ ಮೇಲೆ ಆರ್ಜೆಡಿ ಬೆಂಬಲಿಗರು ಪಕ್ಷದ ಧ್ವಜಗಳನ್ನು ಹಿಡಿದು, ಪೋಸ್ಟರ್ಗಳನ್ನು ಹರಿದು ಹಾಕುತ್ತಾ ಘೋಷಣೆಗಳನ್ನು ಕೂಗುತ್ತಿರುವುದು ವಿಡಿಯೊಗಳಲ್ಲಿ ಕಂಡುಬಂದಿದೆ.
ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಮೋಟಾರ್ಸೈಕಲ್ಗಳಲ್ಲಿ ಆಗಮಿಸಿದ್ದು, ಅವರ ಜೊತೆಯಲ್ಲೇ ಪೊಲೀಸರು ಅಸಹಾಯಕರಾಗಿ ನಡೆದುಕೊಂಡು ಹೋಗುತ್ತಿರುವುದೂ ಕಾಣಿಸುತ್ತದೆ. ಸುಮಾರು 40 ನಿಮಿಷಗಳ ಕಾಲ ಈ ಗದ್ದಲ ಮುಂದುವರಿದಿದ್ದು, ಬಿಜೆಪಿ ಮತ್ತು ಪ್ರತಿಪಕ್ಷದ ನಡುವೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ಅಭಿವೃದ್ಧಿಯನ್ನು ಸ್ವಾಗತಿಸುವ ಬದಲು ಪ್ರತಿಪಕ್ಷವು ರಾಜಕೀಯ ನಾಟಕದಲ್ಲಿ ತೊಡಗಿದೆ ಎಂದು ಬಿಜೆಪಿ ವಕ್ತಾರ ನೀರಜ್ ಕುಮಾರ್ ಶರ್ಮಾ ಆರೋಪಿಸಿದ್ದಾರೆ.
ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದರೆ, ಆರ್ಜೆಡಿ ಅಡ್ಡಿಪಡಿಸುವ ಮತ್ತು ಗದ್ದಲ ಸೃಷ್ಟಿಸುವ ಕೆಲಸದಲ್ಲಿ ತೊಡಗಿದೆ. ಬಿಹಾರದ ಜನರಿಗೆ ಸೇತುವೆಗಳು ಮತ್ತು ಪ್ರಗತಿ ಬೇಕೇ ಹೊರತು, ಪೋಸ್ಟರ್ಗಳನ್ನು ಹರಿದು ಹಾಕುವ ರಾಜಕೀಯ ಬೇಕಿಲ್ಲ ಎಂದು ತೇಜಸ್ವಿ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದಕ್ಕೆ ಪ್ರತಿಯಾಗಿ ಇಂದು ಪ್ರತಿಕ್ರಿಯಿಸಿದ ಆರ್ಜೆಡಿ ಸಂಸದ ಸುಧಾಕರ್ ಸಿಂಗ್, ಸೇತುವೆಯನ್ನು ಈಗಾಗಲೇ ಉದ್ಘಾಟಿಸಲಾಗಿತ್ತು. ಆದರೆ, ಅದರ ಹೆಸರನ್ನು ಬದಲಾಯಿಸುವುದಕ್ಕಾಗಿ ಮತ್ತೊಂದು ಸಮಾರಂಭ ನಡೆಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಆರೋಪಿಸಿದರು.
ನಡೆದಿದ್ದು ಪ್ರತಿಭಟನೆಯಷ್ಟೇ. ಪ್ರತಿಭಟನೆ ನಡೆಸಿದವರು ಸರಿಯಾಗಿಯೇ ಮಾಡಿದ್ದಾರೆ. ಪೋಸ್ಟರ್ಗಳು ಮತ್ತು ಬ್ಯಾನರ್ಗಳನ್ನು ವಂಚನಾತ್ಮಕ ರೀತಿಯಲ್ಲಿ ಹಾಕಲಾಗಿತ್ತು ಎಂದು ಹೇಳಿದರು.
ತೇಜಸ್ವಿ ಯಾದವ್ ಅವರ ದೂರದೃಷ್ಟಿಯಿಂದಲೇ ಈ ಸೇತುವೆ ನಿರ್ಮಾಣವಾಗಿದೆ ಎಂದು ಹೇಳಿದ ಅವರು, ತಮ್ಮ ಪುತ್ರನನ್ನು ತಳ್ಳಾಡಿ ನೂಕಿದ ಘಟನೆಯಿಂದ ಮುಜುಗರಕ್ಕೊಳಗಾಗುವುದನ್ನು ತಪ್ಪಿಸಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಕಾರ್ಯಕ್ರಮಕ್ಕೆ ಗೈರಾಗಿದ್ದರು ಎಂದು ಆರೋಪಿಸಿದರು.
ಸೇತುವೆಯನ್ನು ಈಗಾಗಲೇ ಉದ್ಘಾಟಿಸಲಾಗಿತ್ತು. ಇದೊಂದು ನಕಲಿ ಕಾರ್ಯಕ್ರಮವಾಗಿತ್ತು. ಇಂತಹ ನಕಲಿ ಕಾರ್ಯಕ್ರಮಕ್ಕೆ ನಮ್ಮ ನಾಯಕರು ಏಕೆ ಹಾಜರಾಗಬೇಕು ಎಂದು ಕೇಳಿದರು.
ಪ್ರಧಾನಿ ಮೋದಿ 9.76 ಕಿ.ಮೀ. ಉದ್ದದ ನಿತೀಶ್ ಸೇತುವೆಯನ್ನು ಉದ್ಘಾಟಿಸಿದ ಕೆಲವೇ ಗಂಟೆಗಳ ಬಳಿಕ ಈ ಘಟನೆ ನಡೆದಿದೆ. ಅಂದಾಜು 4,280 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಆರು ಪಥಗಳ ಸೇತುವೆಯು ಕಚ್ಚಿ ದರ್ಗಾ ಮತ್ತು ಬಿದೂಪುರವನ್ನು ಸಂಪರ್ಕಿಸುತ್ತದೆ. ಇದರಿಂದ ಉತ್ತರ ಮತ್ತು ದಕ್ಷಿಣ ಬಿಹಾರದ ನಡುವಿನ ಸಂಪರ್ಕ ಸುಧಾರಿಸುವುದರ ಜೊತೆಗೆ ಮಹಾತ್ಮ ಗಾಂಧಿ ಸೇತುವೆಯ ಮೇಲಿನ ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ.
ಸೇತುವೆಯ ಉದ್ಘಾಟನೆಯೊಂದಿಗೆ ಅದರ ನಾಮಕರಣದ ವಿವಾದವೂ ಮತ್ತೆ ಮುನ್ನೆಲೆಗೆ ಬಂದಿದೆ. ಹತ್ತನೇ ಸಿಖ್ ಗುರು ಗುರು ಗೋವಿಂದ್ ಸಿಂಗ್ ಅವರ ಹೆಸರಿಡುವ ಬದಲು ನಿತೀಶ್ ಕುಮಾರ್ ಅವರ ಹೆಸರಿಡುವ ನಿರ್ಧಾರವನ್ನು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ.
ಬಿಹಾರ ವಿಧಾನಸಭೆಯಲ್ಲಿ ಈ ಹಿಂದೆ ಗುರು ಗೋವಿಂದ್ ಸಿಂಗ್ ಅವರ ಹೆಸರನ್ನು ಸೇತುವೆಗೆ ನಾಮಕರಣ ಮಾಡುವಂತೆ ಖಾಸಗಿ ಸದಸ್ಯರ ನಿರ್ಣಯ ಮಂಡಿಸಿದ್ದೆ. ಆದರೆ, ರಾಜಕೀಯ ಕಾರಣಗಳಿಗಾಗಿ ಸರ್ಕಾರ ತನ್ನ ಹಿಂದಿನ ನಿಲುವಿನಿಂದ ಹಿಂದೆ ಸರಿದಿದೆ ಎಂದು ತೇಜಸ್ವಿ ಆರೋಪಿಸಿದ್ದಾರೆ.